ದಿ. ಭರತ್ ಬೊಮ್ಮೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

ಕಲ್ಮಡ್ಕ: ಯುವ ಸ್ಫೂರ್ತಿ ಸೇವಾ ಸಂಘ (ರಿ.), ಕಲ್ಮಡ್ಕ ಹಾಗೂ ಸೇವಾ ಸಮನ್ವಯ ಛತ್ರಪತಿ ನಾಸಿಕ್ ತಂಡ, ಕಲ್ಮಡ್ಕ ಇವರ ವತಿಯಿಂದ ಸಂಘದ ಸದಸ್ಯರಾಗಿದ್ದ ದಿವಂಗತ ಭರತ್ ಬೊಮ್ಮೆಟ್ಟಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಸೆ. 29ರಂದು ಕಾಚಿಲ ವಿಷ್ಣುಮೂರ್ತಿ ಸಭಾಭವನದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವೇದಿಕೆಯಲ್ಲಿದ್ದ ಗಣ್ಯರು ದಿವಂಗತ ಭರತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

. . . . . . .

ಕಾರ್ಯಕ್ರಮದಲ್ಲಿ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಊರಿನ ಹಿರಿಯ ಧರ್ಮಪಾಲ ಗೌಡ ಮರಕ್ಕಡ ಹಾಗೂ ಸುಬ್ಬಣ್ಣ ಚೆಟ್ಟಿಯಾರ್, ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯೂರು, ಯುವ ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷ ಸಚಿತ್ ಪೆರಿಯಪ್ಪು ಹಾಗೂ ನಲ್ಲೂರಾಯ ದೈವಸ್ಥಾನದ ಅಧ್ಯಕ್ಷ ಕರುಣಾಕರ ಶೆಟ್ಟಿಗದ್ದೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪುನೀತ್ ಮೂಲೆಮನೆ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದಯಕುಮಾರ್ ಬೆಟ್ಟ ಅವರು, ಭರತ್ ಅವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಭರತ್ ಅವರ ಅಗಲಿಕೆಯಿಂದ ಮನೆಯವರು ಮುಂದಿನ ದಿನಗಳಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗಬಹುದು. ಅವರ ಕುಟುಂಬಕ್ಕೆ ಅಗತ್ಯವಿರುವ ನೆರವು ನೀಡಲು ನಾವೆಲ್ಲರೂ ಕೈಜೋಡಿಸೋಣ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿ, ಭರತ್ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಊರಿನ ಹಿರಿಯ ಧರ್ಮಪಾಲ ಗೌಡ ಮರಕ್ಕಡ ಅವರು ಮಾತನಾಡಿ, ಭರತ್ ಅವರು ಊರಿನ ದೈವ ನರ್ತಕರಾಗಿ ನಿಷ್ಠೆ ಮತ್ತು ಭಕ್ತಿಯಿಂದ ದೈವ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಊರಿಗೆ ತುಂಬಲಾರದ ನಷ್ಟವಾಗಿದೆ. ತಲೆತಲಾಂತರಗಳಿಂದ ಅವರ ಕುಟುಂಬ ನಡೆಸಿಕೊಂಡು ಬಂದ ದೈವ ನರ್ತನದ ಕುಲವೃತ್ತಿಯ ಮುಂದುವರಿಕೆಯಲ್ಲಿ ಭರತ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ಕುಟುಂಬಕ್ಕೂ ಊರಿಗೂ ಅಪಾರ ನಷ್ಟ ಉಂಟಾಗಿದೆ ಎಂದು ಭಾವುಕರಾಗಿ ನುಡಿದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಊರಿನ ಹಿರಿಯ ಸುಬ್ಬಣ್ಣ ಚೆಟ್ಟಿಯಾರ್ ಅವರು ಭರತ್ ಅವರ ಗುಣನಡತೆ ಹಾಗೂ ವ್ಯಕ್ತಿತ್ವದ ಕುರಿತು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಯುವ ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷರಾದ ಸಚಿತ್ ಪೆರಿಯಪ್ಪು ಅವರು ಮಾತನಾಡಿ, ಭರತ್ ಅವರು ಕ್ರೀಡಾ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿ ಸಂಘಕ್ಕೆ ಕೀರ್ತಿ ತಂದಿದ್ದರು. ವಿವಿಧ ಕ್ರೀಡಾಕೂಟಗಳಲ್ಲಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಅವರ ಪರಿಶ್ರಮ ಮತ್ತು ಕೊಡುಗೆ ಮಹತ್ವದ್ದಾಗಿತ್ತು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು, ಸದಾ ಉತ್ಸಾಹದಿಂದ ಇರುತ್ತಿದ್ದ ಭರತ್ ಅವರ ಅಕಾಲಿಕ ನಿರ್ಗಮನ ಸಂಘದ ಸದಸ್ಯರಿಗೆ ಹಾಗೂ ಊರಿನ ಜನರಿಗೆ ತೀವ್ರ ದುಃಖವನ್ನುಂಟುಮಾಡಿದೆ ಎಂದು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು.
ದಿವಂಗತ ಭರತ್ ಬೊಮ್ಮೆಟ್ಟಿ ಅವರ ಸೇವೆ, ಕ್ರೀಡಾ ಸಾಧನೆ ಹಾಗೂ ಆತ್ಮೀಯ ಒಡನಾಟವನ್ನು ಸ್ಮರಿಸಿದ ಗಣ್ಯರು, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading