ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೂಜಾ ಪದ್ಧತಿ ಬದಲಾವಣೆಗೆ ಸಂರಕ್ಷಣಾ ವೇದಿಕೆ ವಿರೋಧ ; ಸಾಮೂಹಿಕ ಸಂಕಲ್ಪ, ಸುತ್ತುಪೌಳಿ ವಿಸ್ತರಣೆ ಹಾಗೂ ಅರ್ಚಕರ ನೇಮಕಾತಿ ಸಂಬಂಧಿಸಿದಂತೆ ಹಲವು ಆಕ್ಷೇಪಗಳು ; ಖಾಸಗಿ ಸ್ಥಳಗಳಲ್ಲಿ ನಡೆಯುವ ಪೂಜೆಗಳ ಬಗ್ಗೆ ಕ್ರಮಕ್ಕೆ ಒತ್ತಾಯ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ಜಾರಿಗೊಳಿಸಲಾದ ಸಾಮೂಹಿಕ ಸಂಕಲ್ಪ ವ್ಯವಸ್ಥೆ, ಆಶ್ಲೇಷ ಬಲಿ ಪೂಜೆಯ ಪದ್ಧತಿ ಬದಲಾವಣೆ ಸೇರಿದಂತೆ ಕ್ಷೇತ್ರದ ಹಲವು ವಿಚಾರಗಳ ಕುರಿತು ಕುಕ್ಕೆ ಸುಬ್ರಹ್ಮಣ್ಯ ಸಂರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

. . . . . . . . .

ಸುಬ್ರಹ್ಮಣ್ಯದ ಐನೆಕಿದು ಸೊಸೈಟಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಅವರು, “ಕುಕ್ಕೆ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ರಾಜ ಮಹಾರಾಜರು ನೀಡಿದ ದತ್ತಿ ಹಾಗೂ ಕ್ಷೇತ್ರದ ಸಂಪ್ರದಾಯಗಳಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿವೆ. ಹಿಂದಿನಿಂದ ನಡೆದುಕೊಂಡು ಬಂದ ಪೂಜಾ ಪದ್ಧತಿಗಳಿಗೆ ಅದರದ್ದೇ ಆದ ಧಾರ್ಮಿಕ ಮಹತ್ವವಿದೆ. ಭಕ್ತರ ಸಂಖ್ಯೆ ಮತ್ತು ಆದಾಯ ಹೆಚ್ಚಿಸುವ ಉದ್ದೇಶದಿಂದ ಪೂಜಾ ವಿಧಾನಗಳನ್ನು ಬದಲಾಯಿಸುವುದು ಸೂಕ್ತವಲ್ಲ. ದೇವಸ್ಥಾನವನ್ನು ಕೇವಲ ವ್ಯವಹಾರ ಕೇಂದ್ರವನ್ನಾಗಿ ಮಾಡದೆ, ಅದರ ಧಾರ್ಮಿಕ ಮಹತ್ವ ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು” ಎಂದರು.

. . . . . . .

ವೇದಿಕೆಯ ಪ್ರಮುಖ ಆಕ್ಷೇಪಗಳು ಮತ್ತು ಬೇಡಿಕೆಗಳು
1. ವೈಯಕ್ತಿಕ ಸಂಕಲ್ಪ ವ್ಯವಸ್ಥೆ ಮುಂದುವರಿಯಲಿ : ಸಾಮೂಹಿಕ ಸಂಕಲ್ಪದ ಬದಲು ಹಿಂದಿನಂತೆ ವೈಯಕ್ತಿಕ ಸಂಕಲ್ಪ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಪ್ರತಿಯೊಬ್ಬ ಭಕ್ತರ ಹರಕೆಯ ಉದ್ದೇಶ ಬೇರೆ ಬೇರೆ ಇರುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ಬದಲಾವಣೆ ತರುವ ಮೊದಲು ಧಾರ್ಮಿಕ ಸಂಪ್ರದಾಯಗಳ ಅರಿವುಳ್ಳ ಊರ ಹಿರಿಯರು, ಅರ್ಚಕರು ಹಾಗೂ ಸಂಬಂಧಪಟ್ಟವರ ಅಭಿಪ್ರಾಯ ಪಡೆಯಬೇಕು.

2. ಸುತ್ತುಪೌಳಿಯನ್ನು ಮೂಲ ವಾಸ್ತುವಿನಲ್ಲೇ ಉಳಿಸಬೇಕು : ದೇವಸ್ಥಾನದ ಸುತ್ತುಪೌಳಿಯನ್ನು ಅಗಲಗೊಳಿಸಿ ವಿಸ್ತರಿಸುವ ವಿಚಾರದ ಬಗ್ಗೆಯೂ ವೇದಿಕೆ ಆಕ್ಷೇಪ ವ್ಯಕ್ತಪಡಿಸಿತು. ಪಾರಂಪರಿಕ ವಾಸ್ತು ವಿನ್ಯಾಸವನ್ನು ಬದಲಾಯಿಸುವ ಮೊದಲು ಧಾರ್ಮಿಕ ಮಹತ್ವವನ್ನು ಪರಿಗಣಿಸಬೇಕು. ಹಿಂದಿನ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಸೂಚನೆಯಂತೆ, ಅಗೆಯುವ ಕಾಮಗಾರಿಯನ್ನು ನಿರ್ದಿಷ್ಟ ಮಿತಿಯೊಳಗೆ ನಡೆಸಬೇಕು ಹಾಗೂ ಭಾರೀ ಯಂತ್ರೋಪಕರಣಗಳನ್ನು ಬಳಸದೆ, ಯಾವುದೇ ವೈಬ್ರೇಶನ್ ಬಾರದಂತೆ ಕೆಲಸ ನಡೆಸಬೇಕು.

3. ಅರ್ಚಕರ ನೇಮಕಾತಿ ಮತ್ತು ಮೂಲಭೂತ ಸೌಕರ್ಯಕ್ಕೆ ಆಗ್ರಹ : ಹಿಂದೆ ದಿನಕ್ಕೆ 2,000ಕ್ಕೂ ಅಧಿಕ ಭಕ್ತರು ಬರುತ್ತಿದ್ದಾಗಲೇ ಏಳು ಅರ್ಚಕರಿದ್ದರು. ಈಗ ವಿಶೇಷ ದಿನಗಳಲ್ಲಿ ಲಕ್ಷದ ಹತ್ತಿರ ಭಕ್ತರು ಬರುತ್ತಿದ್ದು, ಕೇವಲ ನಾಲ್ವರು ಅರ್ಚಕರು ಮಾತ್ರ ಇದ್ದಾರೆ. ಅವರ ಮೇಲೆಯೇ ಸಂಪೂರ್ಣ ಕೆಲಸದ ಹೊರೆ ಬಿದ್ದಿದೆ. ಇಲ್ಲಿನ ರೀತಿ-ರಿವಾಜಿನ ಪ್ರಕಾರ ಅರ್ಚಕರು ಶುದ್ಧಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಬೆಳಿಗ್ಗೆ 3 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪವಾಸದಲ್ಲಿರಬೇಕು. ಅವರಿಗೆ ಬೇಕಾದ ಸಹಾಯಕ ಸಿಬ್ಬಂದಿ ಕೊರತೆಯೂ ಇದೆ. ಇದರಿಂದ ಅರ್ಚಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ದೂರದಿಂದ ಬರುವ ಭಕ್ತರಿಗೂ ಕಹಿ ಅನುಭವವಾಗುತ್ತಿದೆ. ಆದ್ದರಿಂದ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಆಗ್ರಹಿಸಿದರು.

4. ಖಾಸಗಿ ಸ್ಥಳಗಳಲ್ಲಿ ನಡೆಯುವ ಪೂಜೆಗಳ ಬಗ್ಗೆ ಕ್ರಮಕ್ಕೆ ಒತ್ತಾಯ : ದೇವಸ್ಥಾನದ ಹೊರಗೆ ಖಾಸಗಿ ಲಾಡ್ಜ್‌ಗಳು, ಅಂಗಡಿಗಳು ಹಾಗೂ ಶೆಡ್‌ಗಳಲ್ಲಿ ಧಾರ್ಮಿಕ ಪೂಜೆಗಳು ಅಕ್ರಮವಾಗಿ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಸರ್ಪಸಂಸ್ಕಾರ ಪೂಜೆಗೆ ಹೆಚ್ಚಿನ ಮೊತ್ತ ಪಡೆಯಲಾಗುತ್ತಿದೆ ಮತ್ತು ಪೂಜೆಗೆ ಅವಕಾಶ ಕಲ್ಪಿಸಲು ಲಂಚ ನೀಡಬೇಕು ಎಂಬ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ವೇದಿಕೆ ಒತ್ತಾಯಿಸಿತು.

5. ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ಒತ್ತಾಯ : ದೇವಸ್ಥಾನದ ಅಭಿವೃದ್ಧಿಗಾಗಿ ತಮ್ಮ ಅವಧಿಯಲ್ಲಿ ಸುಮಾರು ₹500 ಕೋಟಿ ಮೊತ್ತದ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ಆದರೆ ಅದರ ಅನುಷ್ಠಾನ ಆಗಿಲ್ಲ. ಪ್ರತಿನಿತ್ಯ ಹೆಚ್ಚಿನ ಭಕ್ತರು ಬರುತ್ತಿರುವುದರಿಂದ ವಸತಿ, ಅನ್ನದಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಬಡ ಭಕ್ತರಿಗೆ ತಂಗಲು ಶೆಲ್ಟರ್, ಅನ್ನಛತ್ರದಲ್ಲಿ ಸಣ್ಣ ಮಕ್ಕಳು ಮತ್ತು ವೃದ್ಧರು ದೀರ್ಘಕಾಲ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ವ್ಯವಸ್ಥೆ ಮಾಡಬೇಕು.

6. ಅನಧಿಕೃತ ಅಂಗಡಿಗಳ ನಿಯಂತ್ರಣಕ್ಕೆ ಆಗ್ರಹ : ಕುಕ್ಕೆಯಲ್ಲಿ ಅನಧಿಕೃತ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯರು ದೇವಾಲಯಕ್ಕೆ ಬರುವ ಭಕ್ತರನ್ನೇ ಅವಲಂಬಿಸಿದ್ದಾರೆ. ಅವರಿಗೆ ಆದ್ಯತೆ ನೀಡುವ ಉದ್ದೇಶದಿಂದ ತಮ್ಮ ಅವಧಿಯಲ್ಲಿ 600 ರಿಂದ 700 ಅಂಗಡಿಗಳ ಮಾಸ್ಟರ್ ಪ್ಲಾನ್ ರೂಪಿಸಿ ಲೋಕೋಪಯೋಗಿ ಇಲಾಖೆಯ ಅನುಮೋದನೆಯನ್ನೂ ಪಡೆಯಲಾಗಿತ್ತು. ಅದನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಪ್ರಸನ್ನ ದರ್ಬೆ ತಿಳಿಸಿದರು.

“ಕುಕ್ಕೆ ಕ್ಷೇತ್ರದ ಧಾರ್ಮಿಕ ಪರಂಪರೆ, ಪೂಜಾ ಪದ್ಧತಿ ಹಾಗೂ ಭಕ್ತರ ಹಿತಾಸಕ್ತಿಯನ್ನು ಕಾಪಾಡಲು ಸಂರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿಯೂ ಹೋರಾಟ ನಡೆಸಲಿದೆ. ದೇವಸ್ಥಾನದ ವಿಚಾರದಲ್ಲಿ ರಾಜಕೀಯಕ್ಕಿಂತ ದೇವರು ಮತ್ತು ಭಕ್ತರ ಹಿತವೇ ಮುಖ್ಯ” ಎಂದು ಕಿಶೋರ್ ಶಿರಾಡಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಶಿರಾಡಿ, ಜಯಪ್ರಕಾಶ್ ಕೂಜುಗೋಡು, ಮೋನಪ್ಪ ಮಾನಾಡು, ವನಜ ಟಿ.ವಿ. ಭಟ್, ಮಾಜಿ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ ಮರ್ಧಾಳ, ಊರ ಪ್ರಮುಖರಾದ ಅಶೋಕ ಕುಮಾರ ಮೂಲೆಮಜಲು, ಅಚ್ಯುತ ಗೌಡ ಸುಬ್ರಹ್ಮಣ್ಯ, ಶ್ರೀಕುಮಾರ್ ಬಿಲದ್ವಾರ ಹಾಗೂ ಈಶ್ವರ ಅರಂಪಾಡಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading