ಸ್ವಚ್ಛ ದಂಡಯಾತ್ರೆ: ನಾಗರಾಜ್ ಬಜಾಲ್ ಅವರ ಪರಿಸರ ಕಾಳಜಿ ಸಮಾಜಕ್ಕೆ ಮಾದರಿ – ಕಸ ಹೆಕ್ಕುತ್ತಾ ಸ್ವಚ್ಛತೆಯ ಜಾಗೃತಿ ಮೂಡಿಸಿದ ಪರಿಸರ ಪ್ರೇಮಿ – ಯತೀಶ್ ದೇವ ಸಂಟ್ಯಾರು

ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವ ಉದ್ದೇಶದಿಂದ ಮಂಗಳೂರು ಪಡೀಲ್ ಮೂಲದ ನಾಗರಾಜ್ ಬಜಾಲ್ ಅವರು ಕೈಗೊಂಡಿರುವ ಸ್ವಚ್ಛತಾ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

. . . . . . . . .

ದೂರದ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರೂ, ತನ್ನ ನಾಡು, ನೆಲ, ಜಲ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಗರಾಜ್ ಬಜಾಲ್ ಅವರು ಮಾಣಿ–ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಗಡಿಯಿಂದ ಮಂಗಳೂರು ತನಕ ರಸ್ತೆ ಬದಿಯಲ್ಲಿ ಸಾರ್ವಜನಿಕರು ಎಸೆದಿರುವ ಕಸವನ್ನು ತಾವೇ ಹೆಕ್ಕಿ, ಗೋಣಿಯಲ್ಲಿ ತುಂಬುತ್ತಿದ್ದಾರೆ. ಅಲ್ಲದೆ, ಸಂಗ್ರಹಿಸಿದ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವಂತೆ ಸ್ಥಳೀಯ ಪಂಚಾಯತ್‌ಗಳಿಗೆ ಮಾಹಿತಿ ನೀಡುವ ಮೂಲಕ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದ್ದಾರೆ.

. . . . . . .

ಕೈಯಲ್ಲಿ ಕಸದ ಗೋಣಿ, ಸ್ವಚ್ಛತೆಯ ಸಂಕಲ್ಪ ಹಾಗೂ ‘ಸ್ವಚ್ಛ ದಂಡಯಾತ್ರೆ’ ಎಂಬ ನಾಮಫಲಕ ಹಿಡಿದು ಸಂಟ್ಯಾರು ಮುಖ್ಯರಸ್ತೆಯಲ್ಲಿ ಸ್ವಚ್ಛತೆಯ ಸಂದೇಶ ಸಾರುತ್ತಾ ಮಂಗಳೂರಿನ ಕಡೆಗೆ ಹೆಜ್ಜೆ ಹಾಕಿದ ಅವರ ಕಾರ್ಯ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸರ್ಕಾರ, ಸ್ಥಳೀಯಾಡಳಿತ ಮತ್ತು ಸಂಘ-ಸಂಸ್ಥೆಗಳು ಸ್ವಚ್ಛತೆಗಾಗಿ ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಜನರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರ ಪ್ರಜ್ಞೆ ಮೂಡಿದಾಗ ಮಾತ್ರ ನಿರೀಕ್ಷಿತ ಬದಲಾವಣೆ ಸಾಧ್ಯ.

ಈ ನಿಟ್ಟಿನಲ್ಲಿ ನಾಗರಾಜ್ ಬಜಾಲ್ ಅವರ ಸ್ವಚ್ಛತಾ ಅಭಿಯಾನವು ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡಿದೆ. ಸ್ವಚ್ಛತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಅವರ ಕಾರ್ಯ ಸಾಬೀತುಪಡಿಸಿದೆ. ಪರಿಸರವನ್ನು ಸಂರಕ್ಷಿಸುವುದು ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ.

ನಾಗರಾಜ್ ಬಜಾಲ್ ಅವರಂತಹ ಪರಿಸರ ಪ್ರೇಮಿಗಳ ಕಾರ್ಯಗಳು ಸಮಾಜಕ್ಕೆ ಪ್ರೇರಣೆಯಾಗಬೇಕು. ಕಸ ಎಸೆಯುವುದನ್ನು ನಿಲ್ಲಿಸಿ, ಸ್ವಚ್ಛತಾ ಕಾರ್ಯಗಳಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇಂತಹ ಅಭಿಯಾನಗಳಿಗೆ ಕೈಜೋಡಿಸಬೇಕಿದೆ.

ಒಬ್ಬ ವ್ಯಕ್ತಿಯ ಸಂಕಲ್ಪ ಸಾವಿರಾರು ಜನರಿಗೆ ಪ್ರೇರಣೆಯಾಗಬಲ್ಲದು. ರಸ್ತೆ ನಮ್ಮದು, ಪರಿಸರ ನಮ್ಮದು, ಅದರ ಸಂರಕ್ಷಣೆಯ ಜವಾಬ್ದಾರಿಯೂ ನಮ್ಮದೇ ಎಂಬ ಸಂದೇಶವನ್ನು ನಾಗರಾಜ್ ಬಜಾಲ್ ಅವರ ‘ಸ್ವಚ್ಛ ದಂಡಯಾತ್ರೆ’ ಸಾರಿದೆ. ಯತೀಶ್ ದೇವ ಸಂಟ್ಯಾರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading