ತಾಂತ್ರಿಕ ಲೋಕದಿಂದ ಜಾಗತಿಕ ಅಲ್ಕೋ-ಬೆವ್ ಉದ್ಯಮದತ್ತ ಕಾರ್ತಿಕ್ ಸುಧೀರ್ ಕೂಜುಗೋಡು ಅವರ ಫಿನಾಮಿನಲ್ ಪಯಣ – ಮಂಗಳೂರಿನಿಂದ ಅಮೆರಿಕದವರೆಗೆ ವೃತ್ತಿಜೀವನದ ಪಯಣ : “ಫಿನಾಮಿನಲ್ ಸ್ಪಿರಿಟ್ಸ್” ಮೂಲಕ ಪ್ರೀಮಿಯಂ ಸ್ಪಿರಿಟ್ಸ್ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ; ಬರಹ – ಅನಿಂದಿತ್ ಕೆ.ಎಸ್

ಕರಾವಳಿ ಕರ್ನಾಟಕದ(ದ.ಕ ಜಿಲ್ಲೆಯ) ನೆಲದಲ್ಲಿ ಬೆಳೆದು, ಎರಡು ದಶಕಗಳ ಹಿಂದೆ ಅಮೆರಿಕಕ್ಕೆ ತೆರಳಿದ ಕಾರ್ತಿಕ್ ಸುಧೀರ್ ಅವರ ವೃತ್ತಿಜೀವನದ ಪಯಣ ಈಗ ಮತ್ತೊಂದು ಮಹತ್ವದ ಹಂತ ತಲುಪಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿ, ಹಲವು ವರ್ಷಗಳ ಕಾರ್ಪೊರೇಟ್ ಅನುಭವದ ಬಳಿಕ ಸ್ಪಿರಿಟ್ಸ್ ಉದ್ಯಮದತ್ತ ಹೆಜ್ಜೆ ಇಟ್ಟ ಅವರು, 2017ರಲ್ಲಿ ಅಮೆರಿಕದಲ್ಲಿ Phenomenal Spirits Inc. ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಅವರ ಸಂಸ್ಥೆ Ron Izalco Rum ಮತ್ತು RY3 Whiskey ಸೇರಿದಂತೆ ಪ್ರೀಮಿಯಂ ಹಾಗೂ ಅಲ್ಟ್ರಾ-ಪ್ರೀಮಿಯಂ ಸ್ಪಿರಿಟ್ಸ್‌ಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತನ್ನು ರೂಪಿಸಿಕೊಂಡಿದೆ. ಇದೀಗ ಇದೇ ಬ್ರ್ಯಾಂಡ್‌ಗಳನ್ನು ಆಯ್ದ ಮಾರುಕಟ್ಟೆಗಳ ಮೂಲಕ ಭಾರತಕ್ಕೂ ಪರಿಚಯಿಸುವ ಸಿದ್ಧತೆಯಲ್ಲಿ ಕಾರ್ತಿಕ್ ಇದ್ದಾರೆ.

ತಂತ್ರಜ್ಞಾನದಿಂದ ಸ್ಪಿರಿಟ್ಸ್ ಕ್ಷೇತ್ರದತ್ತ 
ತಂತ್ರಜ್ಞಾನ ಕ್ಷೇತ್ರದಿಂದ ಸ್ಪಿರಿಟ್ಸ್ ಉದ್ಯಮದತ್ತ ಕಾರ್ತಿಕ್ ಅವರ ಪಯಣ ಆಕಸ್ಮಿಕ ನಿರ್ಧಾರದ ಫಲವಲ್ಲ. ವೃತ್ತಿಜೀವನದಲ್ಲಿ ಗಳಿಸಿದ ಅನುಭವ, ವ್ಯವಹಾರ ನಿರ್ವಹಣೆಯ ಅರಿವು ಮತ್ತು ಹೊಸ ಉತ್ಪನ್ನಗಳನ್ನು ರೂಪಿಸುವ ಆಸಕ್ತಿಯನ್ನು ಹೊಸ ಕ್ಷೇತ್ರದಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಅವರು ಇದರಲ್ಲಿ ಕಂಡರು. ಸ್ಪಿರಿಟ್ಸ್ ಉದ್ಯಮವು ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಕಚ್ಚಾ ವಸ್ತುಗಳ ಆಯ್ಕೆ, ಸರಬರಾಜು ಸರಪಳಿ, ಬ್ಯಾರೆಲ್‌ಗಳ ಆಯ್ಕೆ, ಏಜಿಂಗ್, ಬ್ಲೆಂಡಿಂಗ್, ನಿಯಮಾನುಸರಣೆ, ವಿತರಣೆ ಮತ್ತು ಮಾರುಕಟ್ಟೆ ಪ್ರವೇಶ, ಹೀಗೆ ಹಲವು ಹಂತಗಳನ್ನು ಒಳಗೊಂಡಿರುವ ಸಂಕೀರ್ಣ ವ್ಯವಸ್ಥೆ ಅದು. ಈ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನ ಅದರ ಮೂಲಭೂತ ಅಂಶಗಳನ್ನು ಸ್ವತಃ ಕಲಿಯಲು ಕಾರ್ತಿಕ್ ಮುಂದಾದರು. ಅಮೆರಿಕದ ಕೆಂಟಕಿಗೆ ತೆರಳಿ ಡಿಸ್ಟಿಲೇಶನ್, ಬ್ಲೆಂಡಿಂಗ್, ಕ್ಯಾಸ್ಕ್ ಮೆಚ್ಯುರೇಶನ್, ನಿಯಮಾನುಸರಣೆ ಮತ್ತು ‘ರೂಟ್ ಟು ಮಾರ್ಕೆಟ್’ ಸೇರಿದಂತೆ ಸ್ಪಿರಿಟ್ಸ್ ಉದ್ಯಮದ ಹಲವು ಆಯಾಮಗಳ ಕುರಿತು ಅಧ್ಯಯನ ನಡೆಸಿದರು. ಸ್ಪಿರಿಟ್ಸ್ ಡಿಸ್ಟಿಲೇಶನ್ ಮತ್ತು ಉದ್ಯಮಕ್ಕೆ ಸಂಬಂಧಿಸಿದ ತರಬೇತಿ ಪಡೆದರು. ಈ ಅನುಭವವೇ ನಂತರ Phenomenal Spirits‌ನ ಉತ್ಪನ್ನ ಅಭಿವೃದ್ಧಿ ಮತ್ತು ಗುಣಮಟ್ಟದ ದೃಷ್ಟಿಕೋನಕ್ಕೆ ಆಧಾರವಾಯಿತು.

‘ರಾನ್ ಇಜಾಲ್ಕೊ’ ಸೆಂಟ್ರಲ್ ಅಮೆರಿಕನ್ ರಮ್‌ಗೆ ಹೊಸ ಪರಿಚಯ 
Phenomenal Spirits‌ನ ಪ್ರಮುಖ ಬ್ರ್ಯಾಂಡ್‌ಗಳಲ್ಲಿ Ron Izalco Rum ಒಂದಾಗಿದೆ. ಸೆಂಟ್ರಲ್ ಅಮೆರಿಕದ ಮೊಲಾಸಿಸ್ ಆಧಾರಿತ ರಮ್‌ನ್ನು ಎಕ್ಸ್-ಬರ್ಬನ್ ಬ್ಯಾರೆಲ್‌ಗಳಲ್ಲಿ ಪಕ್ವಗೊಳಿಸುವ ಮೂಲಕ ಇದರ ವಿಶಿಷ್ಟ ಸ್ವರೂಪವನ್ನು ರೂಪಿಸಲಾಗಿದೆ. Ron Izalcoಯ 10 ವರ್ಷದ ಆವೃತ್ತಿಯನ್ನು ಕಾರ್ತಿಕ್ 2018ರಲ್ಲಿ Paris Rum Festivalನಲ್ಲಿ ಪರಿಚಯಿಸಿದರು. ಬಳಿಕ ಡೆನ್ಮಾರ್ಕ್, ಪೋಲೆಂಡ್, ಲಾಟ್ವಿಯಾ ಮತ್ತು ಜರ್ಮನಿ ಸೇರಿದಂತೆ ಹಲವು ಯುರೋಪಿಯನ್ ಮಾರುಕಟ್ಟೆಗಳಿಗೆ ಬ್ರ್ಯಾಂಡ್ ಪ್ರವೇಶಿಸಿತು. ಬ್ರ್ಯಾಂಡ್‌ನ ವಿವಿಧ ಆವೃತ್ತಿಗಳು ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಸ್ಪರ್ಧೆಗಳಲ್ಲಿ ಗಮನ ಸೆಳೆದಿವೆ. 10 ವರ್ಷದ Ron Izalcoಗೆ San Francisco World Spirits Competitionನಲ್ಲಿ Gold Medal ಸೇರಿದಂತೆ ಹಲವು ಮನ್ನಣೆಗಳು ದೊರೆತಿದ್ದು, ನಂತರ International Spirits Challenge ಮತ್ತು Spirits Masters ಸೇರಿದಂತೆ ವಿವಿಧ ವೇದಿಕೆಗಳಲ್ಲಿಯೂ ಪ್ರಶಸ್ತಿಗಳನ್ನು ಪಡೆದಿದೆ. ಪ್ರಸ್ತುತ Ron Izalco ಪೋರ್ಟ್‌ಫೋಲಿಯೊದಲ್ಲಿ 10 Year, 10 Year Cask Strength, 15 Year Cask Strength ಮತ್ತು 18 Year Cask Strength ಮುಂತಾದ ಆವೃತ್ತಿಗಳಿವೆ. ಆದರೆ ಕಾರ್ತಿಕ್ ಅವರ ದೃಷ್ಟಿಯಲ್ಲಿ ಪ್ರಶಸ್ತಿಗಳು ಬ್ರ್ಯಾಂಡ್ ನಿರ್ಮಾಣದ ಅಂತಿಮ ಗುರಿಯಲ್ಲ. ಅವು ಉತ್ಪನ್ನದ ಗುಣಮಟ್ಟಕ್ಕೆ ದೊರೆಯುವ ಮಾನ್ಯತೆ ಮಾತ್ರ. “ಪ್ರಶಸ್ತಿಗಳು ಮಾತ್ರ ಬ್ರ್ಯಾಂಡ್‌ಗಳನ್ನು ನಿರ್ಮಿಸುವುದಿಲ್ಲ,” ಎಂಬುದು ಅವರ ನಿಲುವು. ಉತ್ತಮ ಸ್ಪಿರಿಟ್ಸ್‌ಗಾಗಿ ದ್ರವದ ಗುಣಮಟ್ಟದ ಜೊತೆಗೆ ಬ್ಲೆಂಡಿಂಗ್ ಪರಿಣತಿ, ಕ್ಯಾಸ್ಕ್ ಫಿನಿಶಿಂಗ್, ಪ್ಯಾಕೇಜಿಂಗ್, ಬೆಲೆ ಮತ್ತು ಉತ್ಪನ್ನದ ಹಿಂದಿನ ಕಥೆಯೂ ಮುಖ್ಯವೆಂದು ಅವರು ಹೇಳುತ್ತಾರೆ.

‘RY3’ ಬ್ಲೆಂಡಿಂಗ್‌ನ ಮತ್ತೊಂದು ಪ್ರಯೋಗ
Phenomenal Spirits‌ನ ಮತ್ತೊಂದು ಪ್ರಮುಖ ಬ್ರ್ಯಾಂಡ್ RY3 Whiskey. ಅಮೆರಿಕನ್ ರೈ ವಿಸ್ಕಿಯನ್ನು ವಿಭಿನ್ನ ಬ್ಲೆಂಡಿಂಗ್ ಮತ್ತು ಕ್ಯಾಸ್ಕ್ ಫಿನಿಶಿಂಗ್ ತಂತ್ರಗಳ ಮೂಲಕ ಪರಿಚಯಿಸುವುದು ಇದರ ವಿಶೇಷತೆ. RY3 ಹೆಸರಿನಲ್ಲಿರುವ ‘3’ ಕೂಡ ಅದರ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ. ವಿಭಿನ್ನ ವಿಸ್ಕಿಗಳು, mash bills ಮತ್ತು aged statements‌ಗಳನ್ನು ಸಂಯೋಜಿಸಿ ಬ್ಲೆಂಡ್ ರೂಪಿಸಿ, ನಂತರ ಆಯ್ದ ಕ್ಯಾಸ್ಕ್‌ಗಳಲ್ಲಿ ಫಿನಿಷ್ ಮಾಡುವ ಮೂಲಕ ವಿಭಿನ್ನ ರುಚಿ ಪದರಗಳನ್ನು ಸೃಷ್ಟಿಸಲಾಗುತ್ತದೆ. ಕೆಲವು ಆವೃತ್ತಿಗಳಲ್ಲಿ vintage rum casks ಬಳಸಲಾಗಿದ್ದು, ಇದರಿಂದ ಅಮೆರಿಕನ್ ರೈ ವಿಸ್ಕಿಯ ಸ್ವರೂಪಕ್ಕೆ ವೆನಿಲ್ಲಾ, ಕ್ಯಾರಮೆಲ್ ಮತ್ತು ಹಣ್ಣಿನಂಥ ಹೆಚ್ಚುವರಿ ರುಚಿ ಹಾಗೂ ಪರಿಮಳದ ಪದರಗಳು ಸೇರುತ್ತವೆ. RY3 ಕುಟುಂಬದಲ್ಲೂ ವಿಭಿನ್ನ ವಯಸ್ಸಿನ ಮತ್ತು ಶೈಲಿಯ ಆವೃತ್ತಿಗಳನ್ನು ಪರಿಚಯಿಸಲಾಗಿದೆ. ಉದಾಹರಣೆಗೆ, 95% rye ಮತ್ತು 5% malted barley mash bill ಹೊಂದಿರುವ RY3 7 Year Straight Rye Whiskey ತನ್ನದೇ ಆದ ಸ್ಥಾನ ಪಡೆದಿದೆ. ಇದರ ಮೂಲಕ Phenomenal Spirits ತನ್ನ ಮೂಲ ತತ್ವವನ್ನು ಸ್ಪಷ್ಟಪಡಿಸುತ್ತದೆ, ಸಾಂಪ್ರದಾಯಿಕ ಸ್ಪಿರಿಟ್ಸ್ ವರ್ಗವನ್ನು ಹಾಗೆಯೇ ಅನುಸರಿಸುವುದಕ್ಕಿಂತ, ವಿಭಿನ್ನ ಮೂಲಗಳು, ಬ್ಲೆಂಡಿಂಗ್ ಮತ್ತು ಕ್ಯಾಸ್ಕ್ ಫಿನಿಶಿಂಗ್ ಮೂಲಕ ಹೊಸ ಅನುಭವವನ್ನು ರೂಪಿಸುವುದು.

‘ಬ್ಲೆಂಡರ್ ಫಸ್ಟ್’ ಎಂಬ ದೃಷ್ಟಿಕೋನ
Phenomenal Spirits‌ನ ವಿಶೇಷತೆ ಉತ್ಪನ್ನಗಳಲ್ಲಿ ಮಾತ್ರವಲ್ಲ; ಅವುಗಳನ್ನು ರೂಪಿಸುವ ವಿಧಾನದಲ್ಲಿಯೂ ಇದೆ. ಕಾರ್ತಿಕ್ ತಮ್ಮನ್ನು ಮತ್ತು ತಮ್ಮ ತಂಡವನ್ನು “blenders first” ಎಂದು ಗುರುತಿಸುತ್ತಾರೆ. ಉತ್ತಮ ಸ್ಪಿರಿಟ್ಸ್ ಎಂದರೆ ಕೇವಲ ಉತ್ತಮ ಕಚ್ಚಾ ವಸ್ತು ಅಥವಾ ಹೆಚ್ಚು ವರ್ಷಗಳ ಏಜಿಂಗ್‌ನ ಫಲವಲ್ಲ. ಸರಿಯಾದ ಸ್ಪಿರಿಟ್ ಮೂಲ, ವಯಸ್ಸು, ಬ್ಯಾರೆಲ್, ಬ್ಲೆಂಡ್ ಮತ್ತು ಸಮತೋಲನ, ಪ್ರತಿಯೊಂದು ಹಂತದಲ್ಲಿಯೂ ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮ ಉತ್ಪನ್ನದ ಗುಣಮಟ್ಟವನ್ನು ನಿರ್ಧರಿಸುತ್ತವೆ ಎಂಬುದು ಅವರ ನಂಬಿಕೆ. ಈ ಕಾರಣಕ್ಕಾಗಿಯೇ ಸಂಸ್ಥೆ ಕೇವಲ ಸಿದ್ಧಪಡಿಸಿದ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುವ ಕಂಪನಿಯಾಗಿ ತನ್ನನ್ನು ಸೀಮಿತಗೊಳಿಸಿಕೊಳ್ಳದೆ, ಹೊಸ ಪ್ರೀಮಿಯಂ ಮತ್ತು ಅಲ್ಟ್ರಾ-ಪ್ರೀಮಿಯಂ ಸ್ಪಿರಿಟ್ಸ್‌ಗಳನ್ನು ಅಭಿವೃದ್ಧಿಪಡಿಸುವ ವೇದಿಕೆಯಾಗಿ ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ. Cigar Seriesನಂತಹ ಪ್ರಯೋಗಾತ್ಮಕ ಉತ್ಪನ್ನಗಳಲ್ಲಿ PX Sherry, Brazilian Amburana ಮತ್ತು Hungarian Tokaji ಕ್ಯಾಸ್ಕ್‌ಗಳಂತಹ ವಿಭಿನ್ನ ಫಿನಿಷಿಂಗ್ ವಿಧಾನಗಳನ್ನು ಬಳಸಲಾಗಿದೆ. ಉತ್ತಮ ವಯಸ್ಸಿನ ವಿಸ್ಕಿಯನ್ನು ಆಧಾರವಾಗಿಟ್ಟುಕೊಂಡು ready-to-drink Old Fashioned ಕಾಕ್ಟೇಲ್ ಅಭಿವೃದ್ಧಿಪಡಿಸುವ ಪ್ರಯತ್ನವೂ ನಡೆಯುತ್ತಿದೆ.

ಈಗ ಭಾರತದತ್ತ ದೃಷ್ಟಿ
ಅಮೆರಿಕದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನ ಮತ್ತು ಉದ್ಯಮವನ್ನು ರೂಪಿಸಿದ ಬಳಿಕ, ಕಾರ್ತಿಕ್ ಸುಧೀರ್ ಈಗ ತಮ್ಮ ಬ್ರ್ಯಾಂಡ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ಸಜ್ಜಾಗಿದ್ದಾರೆ. ಭಾರತದಲ್ಲಿ ಸ್ಕಾಚ್, ಸಿಂಗಲ್ ಮಾಲ್ಟ್ ಮತ್ತು ಬ್ಲೆಂಡೆಡ್ ವಿಸ್ಕಿಗಳಿಗೆ ಗಟ್ಟಿಯಾದ ಗ್ರಾಹಕ ನೆಲೆ ಇದೆ. ಆದರೆ ಅಮೆರಿಕನ್ ವಿಸ್ಕಿ ಅಥವಾ ಪ್ರೀಮಿಯಂ ರಮ್ ಅವುಗಳಿಗೆ ಪರ್ಯಾಯವಾಗಬೇಕು ಎಂಬ ಉದ್ದೇಶ ಕಾರ್ತಿಕ್ ಅವರದ್ದಲ್ಲ. ಬದಲಾಗಿ, ಜಾಗತಿಕ ಅನುಭವ ಹೊಂದಿರುವ ಹೊಸ ತಲೆಮಾರಿನ ಗ್ರಾಹಕರು ವಿಭಿನ್ನ ಸ್ಪಿರಿಟ್ಸ್ ವಿಭಾಗಗಳು ಮತ್ತು ಹೊಸ ಅನುಭವಗಳಿಗೆ ತೆರೆದಿದ್ದಾರೆ ಎಂಬುದು ಅವರ ದೃಷ್ಟಿಕೋನ. “Spirits is a global market. It’s not a regional market,” ಎನ್ನುವುದು ಅವರ ಮಾತು. ಭಾರತ ಪ್ರವೇಶವನ್ನು ಒಂದೇ ಬಾರಿಗೆ ದೇಶವ್ಯಾಪಿ ವಿಸ್ತರಣೆಯ ರೂಪದಲ್ಲಿ ಕೈಗೊಳ್ಳುವ ಬದಲು, ಆಯ್ದ ಮಾರುಕಟ್ಟೆಗಳಲ್ಲಿ ಹಂತ ಹಂತವಾಗಿ ಪರಿಚಯಿಸುವ ಯೋಜನೆ ಇದೆ. ಮೊದಲ ಹಂತದಲ್ಲಿ Ron Izalcoಗೆ ಆದ್ಯತೆ ನೀಡಲಾಗಿದ್ದು, ನಂತರ RY3 Whiskey ಪರಿಚಯಿಸುವ ನಿರೀಕ್ಷೆಯಿದೆ. ಆರಂಭಿಕ ಮಾರುಕಟ್ಟೆಗಳಿಂದ ಗ್ರಾಹಕರ ಪ್ರತಿಕ್ರಿಯೆ ಮತ್ತು ಮಾಹಿತಿಯನ್ನು ಸಂಗ್ರಹಿಸಿ, ಅದರ ಆಧಾರದ ಮೇಲೆ ಮುಂದಿನ ವಿಸ್ತರಣೆಯ ಕುರಿತು ನಿರ್ಧರಿಸುವುದು ಸಂಸ್ಥೆಯ ಉದ್ದೇಶ. ಕಾರ್ತಿಕ್ ಅವರ ದೃಷ್ಟಿಯಲ್ಲಿ ಭಾರತ ಪ್ರವೇಶವೆಂದರೆ ಕೇವಲ ಮತ್ತೊಂದು ಅಂತಾರಾಷ್ಟ್ರೀಯ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ತರುವುದು ಅಲ್ಲ. ಉತ್ಪನ್ನದ ಹಿಂದಿರುವ ಕಥೆ, ಅದರ ತಯಾರಿಕೆಯ ವಿಧಾನ ಮತ್ತು ಸ್ಪಿರಿಟ್ಸ್‌ನ ವೈಶಿಷ್ಟ್ಯವನ್ನು ಗ್ರಾಹಕರಿಗೆ ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಾರ್ಟೆಂಡರ್‌ಗಳು, ಮಿಕ್ಸಾಲಜಿಸ್ಟ್‌ಗಳು ಮತ್ತು ಕಾಕ್ಟೇಲ್ ಬಾರ್‌ಗಳು ಪ್ರಮುಖ ಪಾತ್ರ ವಹಿಸಲಿವೆ. ದೆಹಲಿ, ಮುಂಬೈ, ಬೆಂಗಳೂರು, ಗೋವಾ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳ ಆತಿಥ್ಯ ಕ್ಷೇತ್ರದ ವೃತ್ತಿಪರರೊಂದಿಗೆ ಕೆಲಸ ಮಾಡುವ ಯೋಜನೆ ಇದೆ. ಮಧ್ಯ-ಅಮೆರಿಕದ ರಮ್‌ನ ಹಿನ್ನೆಲೆ, ಅಮೆರಿಕನ್ ವಿಸ್ಕಿಯ ಇತಿಹಾಸ ಹಾಗೂ Old Fashioned ಮತ್ತು Manhattanನಂತಹ ಕ್ಲಾಸಿಕ್ ಕಾಕ್ಟೇಲ್‌ಗಳ ಬೆಳವಣಿಗೆಯ ಕಥೆಯನ್ನೂ ಗ್ರಾಹಕರಿಗೆ ಪರಿಚಯಿಸುವುದು ಈ ಪ್ರಯತ್ನದ ಭಾಗವಾಗಿದೆ. ವಿಭಿನ್ನ ಉತ್ಪನ್ನಗಳನ್ನು ವಿಭಿನ್ನ ಗ್ರಾಹಕ ವಲಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ರಮ್ ಪ್ರಿಯರಿಂದ ಹಿಡಿದು ಕ್ಯಾಸ್ಕ್-ಫಿನಿಶ್ಡ್ ಅಮೆರಿಕನ್ ವಿಸ್ಕಿಯಲ್ಲಿ ಆಸಕ್ತಿ ಹೊಂದಿರುವ ಸ್ಕಾಚ್ ಗ್ರಾಹಕರು, ಸಿಗಾರ್ ಆಸಕ್ತರು ಮತ್ತು ಹೊಸ ರೀತಿಯ ಕಾಕ್ಟೇಲ್ ಅನುಭವಗಳನ್ನು ಹುಡುಕುತ್ತಿರುವ ಯುವ ಗ್ರಾಹಕರವರೆಗೆ ಹಲವು ವರ್ಗಗಳನ್ನು ಸಂಸ್ಥೆ ಗಮನದಲ್ಲಿಟ್ಟುಕೊಂಡಿದೆ.

ಕರಾವಳಿಯ ಮಗನ ಮರಳುವಿಕೆ
ದ.ಕ. ಜಿಲ್ಲೆಯಲ್ಲಿ ಬೆಳೆದು, 2005ರಲ್ಲಿ ಅಮೆರಿಕಕ್ಕೆ ತೆರಳಿದ ಕಾರ್ತಿಕ್ ಸುಧೀರ್ ಅವರ ಪಯಣದಲ್ಲಿ ಭಾರತಕ್ಕೆ ಮರಳುವ ಈ ಅಧ್ಯಾಯಕ್ಕೆ ವೈಯಕ್ತಿಕ ಆಯಾಮವೂ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಂಡ ಬಳಿಕ ಸಂಪೂರ್ಣ ವಿಭಿನ್ನ ಕ್ಷೇತ್ರಕ್ಕೆ ಪ್ರವೇಶಿಸಿ, ಅಮೆರಿಕದಲ್ಲಿ ಸ್ವಂತ ಸ್ಪಿರಿಟ್ಸ್ ಬ್ರ್ಯಾಂಡ್ ರೂಪಿಸಿ, ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ದಿರುವ ಅವರು ಇದೀಗ ತಮ್ಮ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದ್ದಾರೆ. ಒಮ್ಮೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಕರಾವಳಿ ಕರ್ನಾಟಕದ ಯುವಕ, ಇಂದು ರಮ್ ಮತ್ತು ಅಮೆರಿಕನ್ ರೈ ವಿಸ್ಕಿಯಂತಹ ವಿಭಿನ್ನ ಸ್ಪಿರಿಟ್ಸ್ ವರ್ಗಗಳಲ್ಲಿ ತನ್ನದೇ ಆದ ಬ್ರ್ಯಾಂಡ್ ಗುರುತನ್ನು ನಿರ್ಮಿಸಿಕೊಂಡಿರುವುದು ಈ ಪಯಣದ ವಿಶೇಷತೆ.

ಇವರು ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಕೂಜುಗೋಡು ಸುದೀರ್ ಕೆ.ವಿ ಹಾಗೂ ಶ್ರೀಮತಿ ದಮಯಂತಿ ದಂಪತಿಗಳ ಪುತ್ರ.

ಬರಹ : ಅನಿಂದಿತ್ ಕೆ ಎಸ್
(ಎಂ.ಎಫ್.ಎ – ದೆಹಲಿ ಎನ್.ಸಿ.ಆರ್) 
ಇಂಡಿಪೆಂಡೆಂಟ್ ಡಾಕ್ಯುಮೆಂಟೇರಿಯನ್

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading