Ad Widget

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜ.16ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ ವಹಿಸಿದ್ದರು. ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನಗೈದು ಮಾತನಾಡುತ್ತಾ ಸನಾತನ ಸಂಸ್ಕೃತಿಯ ನಮ್ಮ ಹಿಂದೂ ಧರ್ಮ ಇಡೀ ವಿಶ್ವಕ್ಕೆ ಸಾರುತ್ತಿರುವ ಉತ್ತಮ ಮಾನವೀಯ ಗುಣಗಳನ್ನು ನಾವು ಹಾಗೂ ಮುಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಪ್ರಚಲಿತ ಕಾಲಘಟ್ಟದಲ್ಲಿ ಇದೆ. ಹಾಗಾಗಿ ಇಂದಿನ ಕಾಲಘಟ್ಟದಲ್ಲಿ ಧರ್ಮ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು. ಶ್ರದ್ಧಾ ಕೇಂದ್ರಗಳಲ್ಲಿ ಮಾಡುವ ಭಜನೆಯ ಮಹತ್ವ ಅನನ್ಯವಾಗಿದ್ದು, ಅದನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರಬೇಕಾದುದು ಅತ್ಯಗತ್ಯ ಎಂದರು. ಶತಮಾನಗಳ ಬಳಿಕ ಬ್ರಹ್ಮರಥ ನಿರ್ಮಾಣ ಆಗಿದೆ ಎಂದರೆ ಅದು ಜಲದುರ್ಗಾದೇವಿಯ ಆಶೀರ್ವಾದ. ಈ ಕಾರ್ಯವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮತ್ತು ತಂಡ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.

. . . . . .

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಕ್ಷೇತ್ರ ಪುರಾಣ ‘ಸಹ್ಯಾದ್ರಿ’ ಪುಸ್ತಕ ಬಿಡುಗಡೆ ಮಾಡಿದರು.

ಲೇಖಕ, ಸಾಂಸ್ಕೃತಿಕ ಚಿಂತಕ ಪ್ರಕಾಶ್ ಮಲ್ಪೆ ಧಾರ್ಮಿಕ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಪರಮಾತ್ಮನ ಬಗ್ಗೆ ನಂಬಿಕೆ ಮೂಡಿಸಬೇಕು. ಶುದ್ಧ ಹಾಗೂ ಪ್ರಾಂಜಲ ಭಕ್ತಿಗೆ ಪರಮಾತ್ಮ ಒಳಿಯುತ್ತಾನೆ. ಈ ನಿಟ್ಟಿನಲ್ಲಿ ತಾಯಿಯ ಮಹತ್ವ ಅವಳ ಸಮರ್ಪಣ ಮನೋಭಾವ ಮಗುವಿನ ದೈವಿಕ ಭಕ್ತಿಗೆ ಪೂರಕವಾಗುತ್ತದೆ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿ ನಾನು ಜಲದುರ್ಗಾದೇವಿಯ ಭಕ್ತೆ. ನನ್ನ ಬೆಳವಣಿಗೆಗೆ ಶ್ರೀ ದೇವಿಯ ಆರ್ಶೀವಾದ ಇದೆ. ಬ್ರಹ್ಮರಥ ಸಮರ್ಪಣೆಯಂತಹ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶ ಶ್ರೇಷ್ಠವಾದದ್ದು ಎಂದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸಂಜೆ ವೇಳೆ ಜಲದುರ್ಗಾದೇವಿ ದೇವಾಲಯಕ್ಕೆ ಬಂದು ನನ್ನಿಂದಾದಷ್ಟು ಸೇವೆ ಮಾಡುತ್ತಿದ್ದೆ. ಅರ್ಚಕರು ದೇವರಿಗೆ ಅರ್ಪಿಸಿದ್ದ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದರು. ಅದನ್ನೇ ನೈವೇದ್ಯ ಸೇವಿಸಿ ಬೆಳೆದೆ. ಈಗ ಅದೇ ದೇವಾಲಯದ ಅಧ್ಯಕ್ಷನಾಗಿ ದೇವರ ಸೇವೆ ಮಾಡುವ ಅವಕಾಶ ಬಂದೊದಗಿತು. ಕ್ಷೇತ್ರದ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಜೀರ್ಣೋದ್ಧಾರದ ಬಳಿಕ ಬ್ರಹ್ಮರಥ ಸಮರ್ಪಣೆ ಅವಕಾಶ ದೊರೆಯಿತು. ಬ್ರಹ್ಮರಥದ ಕಾರ್ಯವನ್ನು ದೇವಿಯೇ ನೆರವೇರಿಸಿದ್ದಾಳೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಆರ್ಥಿಕ ಕ್ರೋಢಿಕರಣಕ್ಕೆ ನೀಡಿರುವ ಸಹಕಾರ ಸ್ಮರಣೀಯ ಎಂದ ಅವರು,ರಥ ನಿರ್ಮಾಣದ ಎಲ್ಲ ಯಶಸ್ಸು ಭಕ್ತರಿಗೆ ಸಲ್ಲುತ್ತದೆ ಎಂದರು.

ಕ್ಷೇತ್ರದ ಶಿಲ್ಪಿ ಮಹೇಶ್ ಮುನಿಯಂಗಳ ಅವರು ಶುಭ ಹಾರೈಸಿದರು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪ್ರಥಮ ದರ್ಜೆ ಪರಿವೀಕ್ಷಕ ಶ್ರೀಧರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ ಶುಭ ಹಾರೈಸಿದರು. ಸಹ್ಯಾದ್ರಿ ಕೃತಿ ಲೇಖಕ ಬಿ.ರುಕ್ಮಯ್ಯ ಸುರತ್ಕಲ್ ಅನಿಸಿಕೆ ವ್ಯಕ್ತಪಡಿಸಿದರು.

ಸಮ್ಮಾನ ಸಮಾರಂಭ
ಇದೇ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು, ಸಂತೋಷ್ ಆಚಾರ್ಯ ಪೆರುವಾಜೆ, ಸುಶಾಂತ್ ಆಚಾರ್ಯ ಬೊಳ್ಳಾಯಿ, ಅಚ್ಚುತ ಆಚಾರ್ಯ, ಬಾಲಕೃಷ್ಣ ಆಚಾರ್ಯ ಪೆರುವಾಜೆ, ಮಂಜುನಾಥ ಆಚಾರ್ಯ ಹಾಗೂ ತಂಡವನ್ನು, ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಪಿ.ವೆಂಕಟಕೃಷ್ಣ ರಾವ್, ಉಪ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ, ಪೆರುವಾಜೆ ಜಲಧಿ ಇವೆಂಟ್ಸ್ ಮಾಲಕ ರಕ್ಷಿತ್ ಪೆರುವಾಜೆ ಮೊದಲಾದವರನ್ನು ಸಮ್ಮಾನಿಸಲಾಯಿತು.

ಕ್ಷೇತ್ರದ ಕುರಿತಂತೆ ಬಾಲಕೃಷ್ಣ ನೆಟ್ಟಾರು ಹಾಡಿರುವ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.

ಕು|ಶ್ರಾವ್ಯ ಜಿ.ಪಿ ಪ್ರಾರ್ಥಿಸಿದರು. ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆಗುತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೀತಂ ರೈ ಪೆರುವಾಜೆ ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!