ಯಾವ್ದೋ ಒಂದು ಮದುವೆ ಕಾಗದದಲ್ಲಿ ಅಚ್ಚಾಗುವ ದೇವರ ಭಾವಚಿತ್ರವನ್ನು ಕತ್ತರಿಸಿಟ್ಟು ಪೂಜಿಸುವಷ್ಟು ದೇವರ ಮೇಲೆ ನಂಬಿಕೆಯಿಟ್ಟಿರುವ ನಾವು. ಒಂದೊಮ್ಮೆ ದೇವರ ಭಾವಚಿತ್ರಕ್ಕೆ ಗೊತ್ತಿಲ್ಲದೆ ತುಳಿದರೂ ಮುಂದೇನು ಅನಾಹುತವಾದಿತೆಂದು ನೂರೊಂದು ಬಾರಿ ದೇವರನ್ನು ಜಪಿಸುವ ನಾವು. ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಟ್ಟು ಸಂಭ್ರಮಿಸುವುದು ಸಾಧುವೇ..?
ದೀಪಾವಳಿ ಎಂದಾಕ್ಷಣ ನಮಗೆ ತಕ್ಷಣ ನಮಗೆ
ಪಟಾಕಿಗಳೇ! ಅದೂ ಹಬ್ಬದ ಸಂಭ್ರಮದ ತೀವ್ರತೆಯನ್ನು ಅಳತೆ ಮಾಡುವುದರ ಮಟ್ಟಿಗೆ! ಹೌದು. ಒಂದು ವೇಳೆ ದೀಪಾವಳಿಗೆ ಮನೆಗೆ ಪಟಾಕಿ ತರದಿದ್ದರೆ ‘ಹಬ್ಬನೂ ಇಲ್ಲ ಏನು ಇಲ್ಲ ಬರೀ ಸಪ್ಪೆ…’ ಎಂಬ ನಿರಾಶದಾಯಕ ಮಾತುಗಳು ಕೇಳುವವರೆಗೆ ಪಟಾಕಿಯೂ ದೀಪಾವಳಿಯಲ್ಲಿ ಪ್ರಭಾವ ಬೀರಿದೆ. ಅಲ್ಲದೇ, ಪಕ್ಕದ ಮನೆಯಲ್ಲಿ ಒಂದೇ ಸಮನೆ ಪಟಾಕಿಯ ಸದ್ದು ಕೇಳಿದರೆ ಅವರ ಹಣಕಾಸಿನ ಸ್ಥಿತಿ-ಗತಿಯನ್ನು ನಿರ್ಧರಿಸುವ ಆರ್ಥಿಕ ಚಿಂತಕರು ನಾವಾಗುವುದೂ ಇದೆ..!! ಅಂತಿಂತೂ ಹಬ್ಬದ ಸಂಭ್ರಮ ಗರಿಗೆದರಲು ಪಟಾಕಿ ಅನಿವಾರ್ಯವಾಗಿದ್ದು ವಿಪರ್ಯಾಸವೇ ಸರಿ.
ಉಳಿದ ಪಟಾಕಿಗಳು ಹಾಗಿರಲಿ, ಈಗ ವಿಷಯಕ್ಕೆ ಬರೋಣ. ಪಟಾಕಿ ಅಂದರೇ ತಕ್ಷಣ ಹೊಳೆಯೊದು ‘ಲಕ್ಷ್ಮೀ ಪಟಾಕಿ’. ತನ್ನ ಹೆಸರಿನಲ್ಲಿ ಮಾತ್ರವಲ್ಲದೆ, ಶಬ್ದ ಮತ್ತು ಅದರ ಗಾತ್ರದಲ್ಲೂ ತನ್ನತನವನ್ನು ಹೊಂದಿರುವ ಈ ಪಟಾಕಿ ಎಲ್ಲರಿಗೂ ಚಿರಪರಿಚಿತವೇ. ಗ್ರಾಹಕರು ಪಟಾಕಿ ಅಂಗಡಿಯಲ್ಲಿ ‘ಅಣ್ಣ, ಲಕ್ಷ್ಮೀ ಉಂಟಾ..’ ಅಂತ ಕೇಳುವಷ್ಟು ಈ ಪಟಾಕಿ ಜನಮಾನಸದಲ್ಲಿ ಅಚ್ಚಾಗಿದೆ..
ಬಟ್, ಸ್ನೇಹಿತರೇ, ಈ ಪಟಾಕಿಯನ್ನು ಸುಡುವುದು ಸರಿಯೇ? ಈ ಪ್ರಶ್ನೆಯನ್ನು ನಿಮಗೆ ಕೇಳಲು ಪ್ರಮುಖ ಕಾರಣ ಈ ಪಟಾಕಿಯ ಮೇಲಿರುವ ಚಿತ್ರ. ಶ್ರೇಷ್ಠ ಹಿಂದೂ ಧರ್ಮದ ಅನುಯಾಯಿಗಳಾದ ನಾವು ಭಕ್ತಿಯಿಂದ ಪೂಜಿಸುವ, ಧನಕನಕ ದಯಪಾಲಿಸುವ ಲಕ್ಷ್ಮೀ ದೇವಿಯ ಚಿತ್ರವಿರುವುದರಿಂದಲೇ ಈ ಪಟಾಕಿಗೆ ಲಕ್ಷ್ಮೀ ಪಟಾಕಿ ಎಂದು ಹೆಸರಿದೆ. ವರಮಹಾಲಕ್ಷ್ಮೀ ಹಬ್ಬದ ದಿನ ಲಕ್ಷ್ಮೀಯನ್ನು ವಿಧವಿಧವಾಗಿ ಪೂಜಿಸುವ ನಾವು ದೀಪಾವಳಿಯ ದಿನ ಅದೇ ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಬೆಂಕಿಯಲ್ಲಿ ಸುಡುವುದು ಸಮಂಜಸವೇ? ಅದು ದುಡ್ಡು ಕೊಟ್ಟು!!
ಅನಕ್ಷರಸ್ಥರು ಕೂಡ ಒಂದೊಮ್ಮೆ ದಾರಿಯಲ್ಲೋ ಅಥವಾ ಮತ್ತೆಲ್ಲೋ ದೇವರ ಭಾವಚಿತ್ರಗಳು ಸಿಕ್ಕರೆ ಅದನ್ನು ಎತ್ತಿ ಪಕ್ಕಕ್ಕಿಡುತ್ತಾರೆ. ಮದುವೆ ಕಾಗದದಲ್ಲಿರುವ ದೇವರ ಚಿತ್ರವನ್ನು ಕತ್ತರಿಸಿಟ್ಟು ಅದನ್ನು ಪೂಜಿಸುವ ಜನರೂ ನಮ್ಮಲ್ಲಿದ್ದಾರೆ. ದೇವರ ಭಾವಚಿತ್ರವನ್ನು ತುಳಿದರೆ ಯಾವುದೇ ಅನಾಹುತಗಳಾಗದಿರಲೆಂದು ನೂರೊಂದು ಬಾರಿ ದೇವರ ಜಪವನ್ನು ನಾವು ಮಾಡುತ್ತೇವೆ. ಒಂದು ದೇವಳದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶವಾಗುವ ವೇಳೆ ಹಿಂದಿನ ವಿಗ್ರಹವನ್ನು ಬೆಂಕಿಗೆ ಹಾಕುವ ಸಂಪ್ರದಾಯವೂ ನಮ್ಮಲ್ಲಿಲ್ಲ. ಇಷ್ಟೆಲ್ಲಾ ಆಸ್ತಿಕ ಮನೋಭಾವವನ್ನು ಹೊಂದಿರುವ ನಾವು ಪಟಾಕಿಯ ನೆಪದಲ್ಲಿ ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಡುವುದು ತಪ್ಪಲ್ಲವೇ? ಹೋಳಿಯ ಸಂಭ್ರಮದಲ್ಲಿ ಕಾಮದಹನವಿದೆ, ಇನ್ಯಾವುದೋ ಸಮಯದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸುತ್ತೇವೆ. ಹೀಗೆ ನಮ್ಮೊಳಗಿನ ಅರಿಷಡ್ವರ್ಗಗಳನ್ನು ದಹಿಸುವ ಪ್ರತೀಕಗಳಿದ್ದಾವೆ ಹೊರತು ದೇವರ ಭಾವಚಿತ್ರವನ್ನು ದಹಿಸುವ ಪ್ರಮೇಯಗಳಿಲ್ಲವಲ್ಲ! ಒಮ್ಮೆ ಯೋಚಿಸಿ, ಇದು ನಮ್ಮ ಧರ್ಮವನ್ನು ನಾವೇ ಅಪಚಾರ ಮಾಡಿದಂತಲ್ಲವೇ? ಭಗವದ್ಗೀತೆಯನ್ನು ಹೊತ್ತಿಸುವ ಮಾತನಾಡುವವರನ್ನು ಪ್ರತಿಭಟಿಸುವ ನಾವು ಸಕಲಚರಾಚರ ಚೇತನದಾಯಿನಿ ಲಕ್ಷ್ಮೀ ದೇವಿಯ ಭಾವಚಿತ್ರವನ್ನು ದಹಿಸುವುದು ಸರಿಯೆನಿಸುತ್ತದೆಯೋ?
ಸ್ನೇಹಿತರೆ, ಬದಲಾವಣೆ ನಮ್ಮಿಂದಲೇ ಸಾಧ್ಯ. ದೀಪಾವಳಿ ಸಮೀಪಿಸುತ್ತಿದೆ. ಇನ್ನು ಮುಂದೆಯಾದರೂ ದೇವರ ಚಿತ್ರವಿರುವ ಪಟಾಕಿಗಳನ್ನು ಖರೀದಿಸದಿರೋಣ, ಸುಡದಿರೋಣ. ಅಂತಹುಗಳ ಉತ್ಪಾದನೆ ಸ್ಥಗಿತಗೊಳ್ಳಬೇಕಾದರೆ ನಾವೇ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ದೀಪಾವಳಿ ನಮ್ಮ ಹಬ್ಬ.. ಹಾ! ಪಟಾಕಿ ಇಲ್ಲದಿದ್ದರೂ, ಮನಸ್ಸು ತೆರೆದುಕೊಂಡಿದ್ದರೆ.. ಹಬ್ಬ ಹಬ್ಬವೇ.. ✒️ ಅನಿಲ್ ಕರ್ಕೆರ
- Friday
- November 1st, 2024