ಕಸ್ತೂರಿ ರಂಗನ್ ವರದಿ : ಜನರ ಸಮಸ್ಯೆ ಸಂಸದರು, ಕೇಂದ್ರ ಸಚಿವರ ಗಮನಕ್ಕೆ ತರಬೇಕು ; “ಜನರ ನೈಜ ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರದೇ ಇರುವುದು ತೀರ ಕಳವಳಕಾರಿ ಸಂಗತಿ” : ಎಂ.ವೆಂಕಪ್ಪ ಗೌಡ

ಸುಳ್ಯ : “ಕಸ್ತೂರಿ ರಂಗನ್ ವರದಿಯಿಂದ ಸುಳ್ಯ ತಾಲೂಕಿನ ಹಲವಾರು ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ದು, ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ವಿಚಾರದಲ್ಲಿ ಹೋರಾಟಗಾರರು ಹಲವು ಸುತ್ತಿನ ಹೋರಾಟಗಳನ್ನು ನಡೆಸಿದ್ದರೂ, ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ ಸಂಬಂಧಪಟ್ಟವರು ವಿಫಲರಾಗುತ್ತಿರುವುದು ತೀರಾ ಕಳವಳಕಾರಿ ಸಂಗತಿ” ಎಂದು ಕೆಪಿಸಿಸಿ ಕೋ-ಆರ್ಡಿನೇಟರ್ ಹಾಗೂ ಸುಳ್ಯ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ.

. . . . . . . . .

“ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾದ ಜನರ ಪರವಾಗಿ ಕರ್ನಾಟಕ ಸರ್ಕಾರವು ಕೇಂದ್ರದ ಕರಡು ಸುತ್ತೋಲೆಯನ್ನು ಏಳು ಬಾರಿ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಈ ವರದಿಯಿಂದ ಬಾಧಿತರಾದ ಜನರ ಜೀವನದ ಅಳಿವು-ಉಳಿವಿನ ಪ್ರಶ್ನೆಯು ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸದರು ಹಾಗೂ ಕೇಂದ್ರ ಸಚಿವರು ಈ ವಿಚಾರದಲ್ಲಿ ಶ್ರಮಿಸಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.

. . . . . . .

“ಇತ್ತೀಚೆಗೆ ಸಂಸದರು ಸುಳ್ಯ ತಾಲೂಕಿಗೆ ಭೇಟಿ ನೀಡಿ ಜನರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಹೋರಾಟಗಾರರ ನಾಯಕರು ಉಪಸ್ಥಿತರಿದ್ದರೂ, ಸಂಸದರಿಗೆ ಯಾವುದೇ ಮನವಿ ಸಲ್ಲಿಸದೆ, ಈ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಜನರ ಪರವಾಗಿ ಒತ್ತಾಯಿಸದಿರುವುದು ಬೇಸರದ ಸಂಗತಿಯಾಗಿದೆ” ಎಂದು ಅವರು ಹೇಳಿದ್ದಾರೆ.

“ಇದನ್ನು ಗಮನಿಸಿದಾಗ ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾದಂತಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ. ವರದಿಯಿಂದ ಬಾಧಿತರಾದ ಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕಾಗಿದೆ” ಎಂದು ಎಂ.ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading