ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.01 ರಿಂದ 07 ರವರೆಗೆ ಸುಳ್ಯದ ವಿವಿಧೆಡೆಗಳಲ್ಲಿ “ಸಾಹಿತ್ಯ ಸಂಭ್ರಮ-ದಶಮಾನೋತ್ಸವ” ; ಮಕ್ಕಳ ಸಾಹಿತ್ಯ ಸಮ್ಮೇಳನ, ಪರಿಸರ ಸಾಹಿತ್ಯ ಸಂಭ್ರಮ, ಅರೆಭಾಷೆ ಹಾಗೂ ತುಳು ಸಾಹಿತ್ಯ ಸಂಭ್ರಮ, ದೀಪಾವಳಿ ಕವಿಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ಸುಳ್ಯ, ಪಂಜ ಹೋಬಳಿ ಘಟಕ, ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.01 ರಿಂದ 07 ರವರೆಗೆ ಸುಳ್ಯದ ವಿವಿಧೆಡೆಗಳಲ್ಲಿ “ಸಾಹಿತ್ಯ ಸಂಭ್ರಮ-ದಶಮಾನೋತ್ಸವ 2026-27” ನಡೆಯಲಿದ್ದು, ನ.01 ರಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಹಾಗೂ ದ.ಕ.ಜಿ.ಪ ಹಿ.ಪ್ರಾ ಶಾಲೆ ದೇವಚಳ್ಳ ಇವರ ಸಹಕಾರದೊಂದಿಗೆ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಶಮಾನೋತ್ಸವ ಸಾಹಿತ್ಯ ಸಂಭ್ರಮದ ಉದ್ಘಾಟನೆ ಹಾಗೂ ಪಂಜ ಹೋಬಳಿ ಘಟಕದ ಮಕ್ಕಳ ಸಾಹಿತ್ಯ ಸಮ್ಮೇಳನ ನೆರವೇರಲಿದೆ. ಪೂರ್ವಾಹ್ನ 9:30ಕ್ಕೆ ಧ್ವಜಾರೋಹಣ ನಡೆಯಲಿದ್ದು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ರಾಷ್ಟ್ರ ಧ್ವಜಾರೋಹಣ ಹಾಗೂ ರಾಜ್ಯ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ.ವಿ ತೀರ್ಥರಾಮ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಉದ್ಘಾಟನೆ ನೆರವೇರಿಸಲಿದ್ದಾರೆ. ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘ ಹೆಚ್.ಕೆ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ.ಪಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ನೆಲ್ಲೂರು-ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ಹಾಗೂ ದೇವಚಳ್ಳ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಕುಶಾಲಪ್ಪ ತುಂಬತ್ತಾಜೆ ಉಪಸ್ಥಿತರಿರಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಿ ಪ್ರಸ್ತಾವನೆ ನೆರವೇರಿಸಲಿದ್ದಾರೆ. ಬೆಳಿಗ್ಗೆ 11:00 ಗಂಟೆಗೆ ನಿವೃತ್ತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ ರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದ್ದು, ಮದ್ಯಾಹ್ನ 12:00 ಗಂಟೆಗೆ “ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯ ಅವಶ್ಯಕತೆ” ಎಂಬ ವಿಷಯದ ಕುರಿತು ವಿದ್ಯಾರ್ಥಿ ಚರ್ಚಾಗೋಷ್ಠಿ ನಡೆದು ಮದ್ಯಾಹ್ನ 1:00 ಗಂಟೆಗೆ ಗೀತ-ಗಾಯನ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 2:00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಹರೀಶ್ ಕೇರ ಸಮಾರೋಪ ಭಾಷಣ ಮಾಡಲಿದ್ದು, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಧರ ಗೌಡ ಬಹುಮಾನ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಎಸ್ ಹರಗಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕೇಶವ ಹೊಸೊಳಿಕೆ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿರಲಿದ್ದಾರೆ.

ನ.02 ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇವರ ಸಹಕಾರದೊಂದಿಗೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಪೂರ್ವಾಹ್ನ 9:30ರಿಂದ “ಪರಿಸರ ಸಾಹಿತ್ಯ ಸಂಭ್ರಮ” ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾದ ನಿರಂಜನ ಕೊಡ್ತುಗುಳಿ ಹಾಗೂ ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇದರ ಸಂಚಾಲಕರಾದ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿರಲಿದ್ದಾರೆ. ಕೆ.ಆರ್ ಗೋಪಾಲಕೃಷ್ಣ ರವರಿಂದ ಮತ್ತು ಭಾವನಾ ಸುಗಮ ಸಂಗೀತ ಬಳಗದ ವತಿಯಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

ನ.03 ರಂದು ಪೂರ್ವಾಹ್ನ 10:30 ರಿಂದ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಕನ್ನಡ ಸಂಘ ಹಾಗೂ ಕನ್ನಡ ವಿಭಾಗ ಇದರ ಸಹಕಾರದೊಂದಿಗೆ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ “ಕನ್ನಡ ನುಡಿ ಹಬ್ಬ ಸಂಭ್ರಮ” ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕರಾದ ವಿಮಲಾರುಣ ಪಡ್ಡಂಬೈಲು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಹಾಗೂ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಿಥಾಲಿ ರೈ ಪಿ ಉಪಸ್ಥಿತರಿರಲಿದ್ದಾರೆ. ಎನ್.ಎಂ.ಸಿ ಐಕ್ಯೂಎಸಿ ಘಟಕದ ಸಂಚಾಲಕರಾದ ಡಾ. ಮಮತಾ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್.ವಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ವಿದ್ಯಾರ್ಥಿಗಳಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.

ನ.03 ರಂದು ಅಪರಾಹ್ನ 2:00 ಗಂಟೆಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕ.ಸಾ.ಪ ಸುಳ್ಯ ಹೋಬಳಿ ಘಟಕ ಹಾಗೂ ನೆಹರು ಮೆಮೋರಿಯಲ್ ಪ.ಪೂ ವಿದ್ಯಾಲಯ ಅರಂತೋಡು ಇವರ ಸಹಕಾರದೊಂದಿಗೆ “ಅರೆಭಾಷೆ ಸಾಹಿತ್ಯ ಸಂಭ್ರಮ-ಸ್ಪರ್ಧೆಗಳು” ಅರಂತೋಡು ನೆಹರು ಮೆಮೋರಿಯಲ್ ಪ.ಪೂ ವಿದ್ಯಾಲಯದಲ್ಲಿ ನಡೆಯಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಂತೋಡು ಎನ್.ಎಂ.ಪಿ.ಯು.ಸಿ ಸಂಚಾಲಕರಾದ ಎ.ಸಿ ವಸಂತ, ಪ್ರಾಂಶುಪಾಲರಾದ ರಮೇಶ್ ಹಾಗೂ ಅರಂತೋಡು ಪೋಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎ.ಅಬ್ದುಲ್ಲಾ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಿಶೋರ್ ಕುಮಾರ್ ಕಿರ್ಲಾಯ ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ಕೆ.ಆರ್ ಗೋಪಾಲಕೃಷ್ಣ ರವರಿಂದ ಹಾಗೂ ವಿದ್ಯಾರ್ಥಿಗಳಿಂದ ಅರೆಭಾಷೆ ಗಾಯನ ಕಾರ್ಯಕ್ರಮ ನಡೆಯಲಿದೆ.

ನ.04 ರಂದು ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲೆಯ ಸಹಕಾರದೊಂದಿಗೆ ಅಪರಾಹ್ನ 2:00 ಗಂಟೆಯಿಂದ ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲೆಯಲ್ಲಿ “ಪುರಾಣ ಸಾಹಿತ್ಯ ಸಂಭ್ರಮ-ಭರಚನ ಭ್ರಾತೃಪ್ರೇಮ ಗಾಯನ ಮತ್ತು ವ್ಯಾಖ್ಯಾನ” ನಡೆಯಲಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಅರ್ಥದಾರಿಗಳಾದ ವೆಂಕಟರಾಮ ಭಟ್ ಸುಳ್ಯ ವ್ಯಾಖ್ಯಾನಿಸಲಿದ್ದು, ಗಾಯಕರಾಗಿ ಭಾಗವತರಾದ ಕುಮಾರಿ ರಚನಾ ಚಿದ್ಗಲ್ಲು ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಳಿಲ ವಿದ್ಯಾಭೋಧಿನಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣ ರಾವ್ ಯು ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಉದಯ್ ಕುಮಾರ್ ರೈ ಎಸ್ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಮಳೆಮಾಪಕ ತಜ್ಞರು ಹಾಗೂ ಬಾಳಿಲ ವಿದ್ಯಾಬೋಧಿನಿ ಸಂಸ್ಥೆಗಳ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.

ನ.05 ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇವರ ಸಹಯೋಗದೊಂದಿಗೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಅಪರಾಹ್ನ 2:00 ಗಂಟೆಯಿಂದ “ತುಳು ಸಾಹಿತ್ಯ ಸಂಭ್ರಮ-ಗಾಯನ ಕಾರ್ಯಕ್ರಮ” ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ದುರ್ಗಾಪ್ರಸಾದ್ ರೈ ಕುಂಬ್ರ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹರ್ಷ ಜೋಗಿಬೆಟ್ಟು, ಶಾಲಾ ಪ್ರಾಂಶುಪಾಲರಾದ ಜನಾರ್ಧನ ಕೆ.ಎನ್ ಹಾಗೂ ಮುಖ್ಯ ಶಿಕ್ಷಕರಾದ ಮೈಲಪ್ಪ ಬೋನ್ಯಸಾಗು ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಉಮಾ ಕುಮಾರಿ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ಶಿವಪ್ರಸಾದ್ ಆಲೆಟ್ಟಿ ಮತ್ತು ಬಳಗದವರಿಂದ ತುಳು ಗಾಯನ ಕಾರ್ಯಕ್ರಮ ನಡೆಯಲಿದೆ.

ನ.06 ರಂದು ಸಂಜೆ 6:00 ಗಂಟೆಯಿಂದ ಶ್ರೀವಿಷ್ಣು ದೋಳ ಗೂನಡ್ಕದಲ್ಲಿ ಷರಾ ಫೌಂಡೇಶನ್ ಸುಳ್ಯ ಮತ್ತು ಸಜ್ಜನ ಪ್ರತಿಷ್ಠಾನ(ರಿ.) ಬೀಜದಕಟ್ಟೆ ಗೂನಡ್ಕ ಹಾಗೂ ಪ್ರೆಸ್ ಕ್ಲಬ್ ಸುಳ್ಯ ಇವರ ಸಹಕಾರದೊಂದಿಗೆ “ದೀಪಾವಳಿ ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ” ನಡೆಯಲಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ಪೈ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಉಮ್ಮರ್ ಬೀಜದಕಟ್ಟೆ, ಉದ್ಯಮಿಗಳಾದ ಸತೀಶ್ ಡಿ.ವಿ ಹಾಗೂ ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮತಿ ಗೌರಮ್ಮ ಡಿ.ವಿ ಹಾಗೂ ವೀರಪ್ಪ ದೋಳ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ನಿವೃತ್ತ ಮುಖ್ಯ ಶಿಕ್ಷಕರಾದ ಯು.ಎಸ್ ಚಿದಾನಂದ ರವರಿಂದ ದೀಪಾವಳಿ ಹರಟೆ ಕಾರ್ಯಕ್ರಮ ನಡೆಯಲಿದೆ. ಸ್ಮಿತಾ ಅಮೃತರಾಜ್ ರವರು ದೀಪಾವಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕವಿಗೋಷ್ಠಿಯಲ್ಲಿ ಕವಿಗಳಾದ ಸಂಗೀತ ರವಿರಾಜ್ ಹೊಸೂರು, ಸಹನಾ ಕಾಂತಬೈಲು, ಚಂದ್ರಾವತಿ ಬಡ್ಡಡ್ಕ, ಸಹನಾ ಗಿರೀಶ್, ವಿನೋದ್ ಮೂಡಗದ್ದೆ, ಮಮತಾ ಪಡ್ಡಂಬೈಲು, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ದೀಪಶ್ರೀ ಅಡ್ತಲೆ ಭಾಗವಹಿಸಲಿದ್ದಾರೆ. ನಂತರ ಸುಳ್ಯದ ರಂಗಮಯೂರಿ ಕಲಾಶಾಲೆಯ ಗಾಯಕರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.

ನ.07 ರಂದು ಅಕ್ಷರ ಹೊಸಗದ್ದೆ ಹಳೆಗೇಟು ಸುಳ್ಯ ಇಲ್ಲಿ ಸಮಾರೋಪ ಸಮಾರಂಭ ನೆರವೇರಲಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಕೆ.ವಿ ಹೇಮನಾಥ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಸಾಹಿತ್ಯ ಪೋಷಕರಾದ ಡಾ. ಲೀಲಾಧರ್ ಡಿ.ವಿ, ಶಿಕ್ಷಣ ಮತ್ತು ಕಲಾ ಕ್ಷೇತ್ರದ ಪ್ರಕಾಶ್ ಮೂಡಿತ್ತಾಯ, ಯುವ ರಂಗಕರ್ಮಿ ಲೋಕೇಶ್ ಊರುಬೈಲು ಹಾಗೂ ಕೂಚುಪುಡಿ ನೃತ್ಯಪಟು ಅಭಿಷೇಕ್ ಎಂ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗೀತಗಾಯನ ಕಾರ್ಯಕ್ರಮ ಹಾಗೂ ಮಾ. ಅಭಿಷೇಕ್ ಹಾಗೂ ಕು. ಶ್ರೇಯಾ ಮೇರ್ಕಜೆ ಇವರಿಂದ ನೃತ್ಯ ಕಾರ್ಯಕ್ರಮ ನೆರವೇರಲಿದೆ. ಈ ಮೂಲಕ ಏಳು ದಿನಗಳ ಕಾಲ ನಡೆಯುವ “ಸಾಹಿತ್ಯ ಸಂಭ್ರಮ-ದಶಮಾನೋತ್ಸವ 2026-27” ಸಂಪನ್ನಗೊಳ್ಳಲಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading