ಮುರುಳ್ಯ ದಫನ ಭೂಮಿ ವಿವಾದ: ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸಬೇಡಿ | ರಿಫಾಯಿ ಜುಮಾ ಮಸೀದಿ ಸಮಹಾದಿ ವತಿಯಿಂದ ಪತ್ರಿಕಾಗೋಷ್ಠಿ

ಸುಳ್ಯ ತಾಲ್ಲೂಕಿನ ಮುರುಳ್ಯ ಗ್ರಾಮದ ಸಮಹಾದಿಯಲ್ಲಿ ಸಾರ್ವಜನಿಕ ಮುಸ್ಲಿಂ ದಫನ ಭೂಮಿಗಾಗಿ ಒಂದು ಎಕರೆ ಸರ್ಕಾರಿ ಜಮೀನನ್ನು ವಕ್ಫ್ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಿರುವುದಕ್ಕೆ ಸಂಬಂಧಿಸಿದಂತೆ, ಅ. 28ರಂದು ಹಿಂದೂ ಹಿತರಕ್ಷಣಾ ವೇದಿಕೆ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವ ಉದ್ದೇಶದಿಂದ ರಿಫಾಯಿ ಜುಮಾ ಮಸೀದಿ ಸಮಹಾದಿ ವತಿಯಿಂದ ಅ. 27ರಂದು ಸುಳ್ಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

. . . . . . . . .

ಪತ್ರಿಕಾಗೋಷ್ಠಿಯಲ್ಲಿ  ಮಸೀದಿಯ ಕಾರ್ಯದರ್ಶಿ ಹಸೈನಾರ್ ಸಮಹಾದಿ ಮಾತನಾಡಿ, ಮುರುಳ್ಯ ಗ್ರಾಮದ ಅಲೆಕ್ಕಾಡಿ, ಕುಕ್ಕಟ್ಟೆ, ಸಮಹಾದಿ, ಪೋಳಾಜೆ, ಹುದೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಅಲೆಕ್ಕಾಡಿ ಮತ್ತು ಸಮಹಾದಿಯಲ್ಲಿ ಮಸೀದಿಗಳಿವೆ. ಸುಮಾರು 20 ವರ್ಷಗಳ ಹಿಂದೆ ಸಮಹಾದಿಯಲ್ಲಿರುವ ಈಗ ದಫನ ಭೂಮಿಗಾಗಿ ಕಾಯ್ದಿರಿಸಿರುವ ಜಮೀನಿನ ಒಂದು ಭಾಗದಲ್ಲಿ ಮೃತ ಮುಸ್ಲಿಮರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಆದರೆ, ಆ ಸ್ಥಳಕ್ಕೆ ಅಧಿಕೃತ ದಫನ ಭೂಮಿಯ ಮಾನ್ಯತೆ ದೊರೆಯದ ಕಾರಣ ಅಲ್ಲಿ ದಫನ ಮಾಡುವುದನ್ನು ನಿಲ್ಲಿಸಲಾಗಿತ್ತು. ಬಳಿಕ ಗ್ರಾಮದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಸುಮಾರು 6ರಿಂದ 7 ಕಿ.ಮೀ. ದೂರದ ಕಡಬ ತಾಲ್ಲೂಕಿನ ಬೈತಡ್ಕ ಮಸೀದಿಯ ದಫನ ಭೂಮಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಇದೀಗ ಅಲ್ಲಿಯೂ ಸ್ಥಳಾವಕಾಶದ ಕೊರತೆ ಎದುರಾಗಿದೆ ಎಂದು ತಿಳಿಸಿದರು.

. . . . . . .

ಈ ಹಿನ್ನೆಲೆಯಲ್ಲಿ ಮುರುಳ್ಯ ಗ್ರಾಮದ ಸರ್ವೆ ನಂ. 66/ ಮತ್ತು 67/3ರಲ್ಲಿರುವ ಸರ್ಕಾರಿ ಜಮೀನನ್ನು ಸಾರ್ವಜನಿಕ ಮುಸ್ಲಿಂ ದಫನ ಭೂಮಿಗಾಗಿ ಕಾಯ್ದಿರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸರ್ವೆ ಕಾರ್ಯ ಹಾಗೂ ಕಂದಾಯ ಇಲಾಖೆಯ ಪರಿಶೀಲನೆಯ ಬಳಿಕ ಒಂದು ಎಕರೆ ಸರ್ಕಾರಿ ಜಮೀನನ್ನು ದಫನ ಭೂಮಿಗಾಗಿ ಕಾಯ್ದಿರಿಸಿ ಆದೇಶಿಸಲಾಗಿದೆ. ಅ. 28ರಂದು ಈ ಜಮೀನನ್ನು ವಕ್ಫ್ ಇಲಾಖೆಗೆ ಹಸ್ತಾಂತರಿಸುವಂತೆ ಸುಳ್ಯ ತಹಶೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಜಮೀನಿನಲ್ಲಿ ರಕ್ಷೇಶ್ವರಿ ಸಾನಿಧ್ಯವಿಲ್ಲ
ದಫನ ಭೂಮಿಗಾಗಿ ಕಾಯ್ದಿರಿಸಿರುವ ಜಮೀನಿನಲ್ಲಿ ರಕ್ಷೇಶ್ವರಿ ಸಾನಿಧ್ಯವಿದೆ ಹಾಗೂ ಅದು ಕೃಷಿ ಭೂಮಿಯಾಗಿದೆ ಎಂಬ ಮಾಹಿತಿ ನೀಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ, ಕಾಯ್ದಿರಿಸಿರುವ ಜಮೀನಿನಲ್ಲಿ ರಕ್ಷೇಶ್ವರಿ ಸಾನಿಧ್ಯವಿಲ್ಲ ಮತ್ತು ಅದು ಕೃಷಿ ಜಮೀನಲ್ಲ; ಸರ್ಕಾರಿ ಜಮೀನಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿತು. ಜಮೀನಿನ ಅಕ್ಕಪಕ್ಕದಲ್ಲಿಯೂ ರಕ್ಷೇಶ್ವರಿ ಸಾನಿಧ್ಯವಿಲ್ಲ ಹಾಗೂ ಈವರೆಗೆ ಅಲ್ಲಿ ಯಾವುದೇ ಪೂಜೆ-ಪುನಸ್ಕಾರಗಳು ನಡೆದಿಲ್ಲ. ಜಮೀನು ಕಾಯ್ದಿರಿಸುವ ಪ್ರಕ್ರಿಯೆಗೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿಲ್ಲವೆಂದು ತಹಶೀಲ್ದಾರ್ ದೃಢೀಕರಿಸಿದ್ದಾರೆ.
ದಫನ ಭೂಮಿಗಾಗಿ ಕಾಯ್ದಿರಿಸಿರುವ ಜಮೀನಿನ ಪಕ್ಕದ ಜಮೀನಿನ ಮಾಲೀಕರೊಬ್ಬರು ತಮ್ಮ ವರ್ಗ ಜಮೀನಿನ ಹೊರತಾಗಿ 15 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಾವು ದೂರು ಸಲ್ಲಿಸಿರುವುದಾಗಿ ಸಮಿತಿ ತಿಳಿಸಿತು. ಈ ಸರ್ಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸದಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ ಎಂದೂ ಹೇಳಿದರು.

ಮೂಲಭೂತ ಸೌಕರ್ಯಕ್ಕಾಗಿ ಮನವಿ
ಮುರುಳ್ಯ ಗ್ರಾಮದಲ್ಲಿ ಹಿಂದೂ ಸಮುದಾಯದವರಿಗೆ ಎರಡು ರುದ್ರಭೂಮಿಗಳಿದ್ದರೂ, ಮುಸ್ಲಿಂ ಸಮುದಾಯದವರಿಗೆ ಅಂತ್ಯಕ್ರಿಯೆ ನೆರವೇರಿಸಲು ಸ್ವಂತ ದಫನ ಭೂಮಿ ಇಲ್ಲದೆ ಹಲವು ವರ್ಷಗಳಿಂದ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯವಾದ ದಫನ ಭೂಮಿಯನ್ನು ಒದಗಿಸುವಂತೆ ಮಾತ್ರ ಮನವಿ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿಯೂ ದಫನ ಮತ್ತು ದಹನಕ್ಕೆ ಅಗತ್ಯವಾದ ಜಮೀನು ಕಾಯ್ದಿರಿಸಲು ನ್ಯಾಯಾಲಯ ಹಾಗೂ ಸರ್ಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿವೆ ಎಂದು ಸಮಿತಿ ತಿಳಿಸಿತು.
ಮುರುಳ್ಯ ಗ್ರಾಮದವರೇ ಆಗಿರುವ ಶಾಸಕರಿಗೂ ಈ ಸಮಸ್ಯೆಯನ್ನು ವಿವರಿಸಲಾಗಿದೆ. ಕಾಯ್ದಿರಿಸಿರುವ ಸರ್ಕಾರಿ ಜಮೀನಿನ ಬಗ್ಗೆ ಯಾರಿಗಾದರೂ ಹಕ್ಕು ಅಥವಾ ಆಕ್ಷೇಪಣೆಗಳಿದ್ದರೆ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಜಮೀನಿನಲ್ಲಿ ರಕ್ಷೇಶ್ವರಿ ಸಾನಿಧ್ಯವಿದೆ ಎಂದು ಸುಳ್ಳು ಮಾಹಿತಿ ನೀಡಿ ಪ್ರತಿಭಟನೆ ನಡೆಸುವುದು ಹಾಗೂ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಈ ವಿಚಾರದಲ್ಲಿ ತಪ್ಪು ಮಾಹಿತಿ ಹರಡುವ ಮೂಲಕ ಗ್ರಾಮದಲ್ಲಿ ಸಾಮರಸ್ಯ ಹಾಳುಮಾಡುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವೂ ಇದೆ. ದಫನ ಭೂಮಿಗೆ ಸಂಬಂಧಿಸಿದಂತೆ ಹರಡುತ್ತಿರುವ ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಅಲೆಕ್ಕಾಡಿ, ರಿಫಾಯಿ ಜುಮಾ ಮಸೀದಿ ಸಮಹಾದಿಯ ಅಧ್ಯಕ್ಷ ಉಮರ್ ಫಾರೂಕ್, ಉಪಾಧ್ಯಕ್ಷ ಸಾಬುಕುಂಞ ಹುದೇರಿ, ಕಾರ್ಯದರ್ಶಿ ಹಸೈನಾರ್ ಸಮಹಾದಿ, ಕೋಶಾಧಿಕಾರಿ ಅಬ್ದುಲ್ ಸಾದಿಕ್ ಹಾಗೂ ಸಮಿತಿ ಸದಸ್ಯ ಪಿ.ಎಂ. ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading