ಸುಳ್ಯದಲ್ಲಿ ಎಸ್.ಸಿ./ಎಸ್.ಟಿ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಚಿಂತನ ಮಂಥನ ಸಭೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿ, ಸಮುದಾಯದ ಸಮಸ್ಯೆಗಳ ಪರಿಹಾರ ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಪೂರ್ವಭಾವಿ ಚಿಂತನ ಮಂಥನ ಸಭೆಯನ್ನು ಸೋಮವಾರ, ಅ. 26 ರಂದು ಸುಳ್ಯ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣದ AVSS ಸಭಾಂಗಣದಲ್ಲಿ ಆಯೋಜಿಸಲಾಯಿತು.

. . . . . . . . .

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಲಿಕೆ ಸಮುದಾಯದ ಹಿರಿಯರಾದ ಬಾಬು ಅಜಿಲ ಅವರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. AVSS ಸುಳ್ಯ ಇದರ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

. . . . . . .

ಸಭೆಯಲ್ಲಿ ಮಾತನಾಡಿದ ಗಣ್ಯರು, ಸುಳ್ಯ ತಾಲೂಕಿನ SC/ST ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ಆರ್ಥಿಕ ಸಬಲೀಕರಣ, ಸಾಮಾಜಿಕ ನ್ಯಾಯ ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸಮರ್ಪಕ ಬಳಕೆಗೆ ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇದರ ಅಧ್ಯಕ್ಷರಾದ ಮೋಹನಂಗಯ್ಯ ಸ್ವಾಮಿ ಅವರು ಸಮುದಾಯದ ಸರ್ವತೋಮುಖ ಪ್ರಗತಿಗಾಗಿ ಕೈಗೊಳ್ಳಬೇಕಾದ ವಿವಿಧ ಕಾರ್ಯಯೋಜನೆಗಳ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು, ಯುವಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಮಾರ್ಗಗಳನ್ನು ಪರಿಚಯಿಸುವುದು ಹಾಗೂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ಅಗತ್ಯವೆಂದು ತಿಳಿಸಿದರು.

MRPL SC/ST ನೌಕರರ ಸಂಘದ ಅಧ್ಯಕ್ಷರಾದ ಯುವರಾಜ್ ಎಂ. ಕೆ ಅವರು ಸಭೆಯಲ್ಲಿ ಮಾತನಾಡಿ, ಸಮುದಾಯದ ಸಮಗ್ರ ಪ್ರಗತಿಗೆ ಸಂಘಟಿತ ಪ್ರಯತ್ನ, ಪರಸ್ಪರ ಸಹಕಾರ ಮತ್ತು ಒಗ್ಗಟ್ಟು ಅತ್ಯಗತ್ಯವೆಂದು ತಿಳಿಸಿದರು.

ಸಮುದಾಯದ ಅಭಿವೃದ್ಧಿ ಎನ್ನುವುದು ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆಯಿಂದ ಮಾತ್ರ ಸಾಧ್ಯವಾಗುವ ಕಾರ್ಯವಲ್ಲ. ಸಮುದಾಯದ ಎಲ್ಲಾ ಮುಖಂಡರು, ಸಂಘಟನೆಗಳು ಹಾಗೂ ಸದಸ್ಯರು ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಪಕ್ಷಬೇಧಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸಬೇಕು. ಸಮಾನ ಅವಕಾಶ, ಸಹಬಾಳ್ವೆ, ಪರಸ್ಪರ ಗೌರವ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಆಧಾರದ ಮೇಲೆ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ ಹಾಗೂ ಆರ್ಥಿಕ ಸಬಲೀಕರಣದ ಕ್ಷೇತ್ರಗಳಲ್ಲಿ ಸಮುದಾಯದ ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರದೊಂದಿಗೆ ಕಾರ್ಯಯೋಜನೆಗಳನ್ನು ರೂಪಿಸಬೇಕು. ಸಮುದಾಯದ ಹಕ್ಕುಗಳ ರಕ್ಷಣೆ ಮತ್ತು ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರರಾದ ನಂದರಾಜ್ ಸಂಕೇಶ್* ಅವರು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಮೂಲಕ ಸಮಾನ ಅವಕಾಶಗಳುಳ್ಳ ಸಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ MRPL SC/ST ನೌಕರರ ಸಂಘದ ಉಪಾಧ್ಯಕ್ಷರಾದ ರಾಜೇಶ್ ವೈ., ಉದ್ಯಮಿ ಹಾಗೂ S L Home Appliances, ಮಂಗಳೂರು ಇದರ ರಮೇಶ್ ಎ. ಕೆ., AVSS ಸುಳ್ಯದ ಉಪಾಧ್ಯಕ್ಷರಾದ ಚೋಮ ಗಾಂಧಿನಗರ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶಂಕರ್ ಪೆರಾಜೆ, ಸತೀಶ್ ಬೂಡುಮಕ್ಕಿ, ಹರೀಶ್ ಕೊಡಿಯಾಲಬೈಲು, ಪರಮೇಶ್ವರ ಕೆಂಬಾರೆ, ಸೀತಾನಂದ ಬೇರ್ಪಡ್ಕ, ಹರೀಶ್ ಗುತ್ತಿಗಾರು, ವಿಠಲ ಪುತ್ತೂರು, ಮಹೇಶ್ ಬೆಳ್ಳಾರ್ಕರ್ ಪುಟ್ಟಣ್ಣ ವಳಿಕಜೆ ಹಾಗೂ ಶಿವರಾಮ ಕನಕಮಜಲು ಸೇರಿದಂತೆ ಹಲವು ಗಣ್ಯರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಇದಲ್ಲದೆ, ಸುಳ್ಯ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಮುದಾಯದ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 ಪ್ರಕಾಶ್ ಪಿ. ಎಸ್. ಪಾತೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading