ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು

ಸುಳ್ಯ: ಗ್ಯಾರೇಜ್‌ನಲ್ಲಿ ದುರಸ್ತಿಗಾಗಿ ಇರಿಸಲಾಗಿದ್ದ ಕೆಟಿಎಂ ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಯಾನಂದ ಮತ್ತು ದರ್ಶನ್ ರಾಜು ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

. . . . . . . . .

2026ರ ಆಗಸ್ಟ್ 21ರಂದು ಸುಳ್ಯ ಗ್ರಾಮದ ಅಂಬಟೆಡ್ಕದಲ್ಲಿರುವ ವೆಹಿಕಲ್ ಕಫೆ ಗ್ಯಾರೇಜ್‌ನಲ್ಲಿ ದುರಸ್ತಿಗಾಗಿ ಬೈಕ್ ಇರಿಸಲಾಗಿತ್ತು. ರಿಪೇರಿ ಪೂರ್ಣಗೊಂಡ ಬಳಿಕ ತಿಳಿಸುವಂತೆ ಹೇಳಿ ಬೈಕ್ ಮಾಲೀಕರು ಮನೆಗೆ ತೆರಳಿದ್ದರು. ಆಗಸ್ಟ್ 26ರಂದು ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಗ್ಯಾರೇಜ್‌ನಿಂದ ತೆರಳಿದ್ದ ಪಿಟ್ಟರ್ ಸಂಪ್ರೀತ್ ಅವರಿಗೆ ರಾತ್ರಿ 11 ಗಂಟೆಯ ಸುಮಾರಿಗೆ ಸ್ಥಳೀಯ ನಿವಾಸಿಗಳು ಕರೆ ಮಾಡಿ, ಗ್ಯಾರೇಜ್‌ನಲ್ಲಿದ್ದ ಬೈಕ್ ಬೆಂಕಿಯಿಂದ ಉರಿಯುತ್ತಿರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದರು.

. . . . . . .

ಈ ಬಗ್ಗೆ ಬೈಕ್ ಮಾಲೀಕರು 2026ರ ಆಗಸ್ಟ್ 29ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಸುಳ್ಯ ಪೊಲೀಸ್ ಉಪನಿರೀಕ್ಷಕ ಉದಯ ರವಿ ಎಂ.ವೈ. ಅವರು ಮಾಹಿತಿ ಸಂಗ್ರಹಿಸಿ, ಆರೋಪಿಗಳೆಂದು ಗುರುತಿಸಲಾದ ದಯಾನಂದ ಮತ್ತು ದರ್ಶನ್ ರಾಜು ಅವರನ್ನು ಸೆಪ್ಟೆಂಬರ್ 30ರಂದು ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ನಂತರ ಆರೋಪಿಗಳ ಪರವಾಗಿ ಪುತ್ತೂರಿನ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿ, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಅಕ್ಟೋಬರ್ 14ರಂದು ಇಬ್ಬರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಎನ್.ಕೆ. ಹಾಗೂ ವಿಮಲೇಶ್ ಆರ್. ಗೌಡ ವಾದಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading