ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ ; 35 ಸಾವಿರಕ್ಕೂ ಅಧಿಕ ಭಕ್ತರಿಂದ ಭೋಜನ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ ಅಕ್ಟೋಬರ್ 18 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರದಂದು ಹರಿದು ಬಂದ ಭಕ್ತ ಸಾಗರದಲ್ಲಿ ಸುಮಾರು 35 ಸಾವಿರದಷ್ಟು ಭಕ್ತರು ಶ್ರೀ ದೇವರ ದರ್ಶನದೊಂದಿಗೆ ಭೋಜನ ಸ್ವೀಕರಿಸಿದ್ದಾರೆ.

. . . . . . . . .

ರಜಾ ದಿನವಾದ ರವಿವಾರದಂದು ಹಾಗೂ ಶಾಲೆಗಳಿಗೆ ದಸರಾ ಇದ್ದುದರಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶ್ರೀ ದೇವಳದ ವಸತಿ ಗೃಹಗಳೆಲ್ಲಾ ಭರ್ತಿಯಾಗಿದ್ದು, ಖಾಸಗಿ ವಸತಿ ಗೃಹಗಳು ಕೂಡ ಬಹುತೇಕ ಭರ್ತಿಯಾಗಿದ್ದವು ಎಂದು ತಿಳಿದುಬಂದಿದೆ.

. . . . . . .

ರವಿವಾರ ಬೆಳಗ್ಗಿನಿಂದಲೇ ಪವಿತ್ರ ನದಿ ಕುಮಾರಧಾರದಲ್ಲಿ ತೀರ್ಥ ಸ್ನಾನ ಮಾಡಿದ ಭಕ್ತರು ಮುಖ್ಯರಸ್ತೆಯಿಂದ ರಥಬೀದಿಯಾಗಿ ಶ್ರೀ ದೇವಳಕ್ಕೆ ಆಗಮಿಸಿದ್ದರು. ಈ ದೇವಳದಲ್ಲಿ ಬೆಳಗ್ಗಿನ ಮೂರು ಬ್ಯಾಚ್ ಗಳಲ್ಲಿ ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತರು ತುಂಬಿದ್ದರು. ಸಂಜೆಯ ಬ್ಯಾಚ್ ನಲ್ಲಿ ಕೂಡ ಅಧಿಕ ಸಂಖ್ಯೆಯ ಭಕ್ತರು ಆಶ್ಲೇಷ ಬಲಿ ಸೇವೆ ಸಲ್ಲಿಸಿದರು. ಹಾಗೆಯೇ ಮಧ್ಯಾಹ್ನ ನಾಗಪ್ರತಿಷ್ಠಾ ಮಂಟಪದಲ್ಲಿ ಜರಗುವ ನಾಗ ಪ್ರತಿಷ್ಠೆ ಪೂಜೆಯಲ್ಲಿ ಭಕ್ತರು ಮಂಟಪದ ಎದುರುಗಡೆ ಅಂಗಣದಲ್ಲಿ ಭಕ್ತರು ಆಸೀನರಾಗಿದ್ದರು.

ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಮಾಡಿದ ಭಕ್ತರು ತದನಂತರ ತೀರ್ಥ ಪ್ರಸಾದ ಸ್ವೀಕರಿಸಿ ಮಧ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಿದರು. ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಮಧ್ಯಾಹ್ನ ಬಪೆ ಸಿಸ್ಟಮ್ ಭೋಜನ ಏರ್ಪಡಿಸಲಾಗಿತ್ತು. ಶ್ರೀ ದೇವಳದ ವತಿಯಿಂದ ಭಕ್ತರ ದೇವರ ದರ್ಶನ ತೀರ್ಥ ಪ್ರಸಾದ ಹಾಗೂ ಭೋಜನಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಶ್ರೀ ದೇವಳದ ಸುತ್ತಮುತ್ತ ಇರುವ ವಾಹನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ತುಂಬಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ದೂರದೂರುಗಳಿಂದ ಬರುವ ಭಕ್ತರಿಗೆ ವಿಶೇಷ ಬಸ್ಸಿನ ವ್ಯವಸ್ಥೆಗಳನ್ನು ಕೂಡ ಮಾಡಲಾಗಿತ್ತು. ಮಧ್ಯಾಹ್ನದವರೆಗೆ ಮಳೆ ಇಲ್ಲದ ಕಾರಣ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ. ಶ್ರೀ ದೇವಳದ ಅಧಿಕಾರಿಗಳು ,ಸಿಬ್ಬಂದಿ ವರ್ಗದವರು ,ಗೃಹ ರಕ್ಷಕ ದಳದವರು, ಪೊಲೀಸ್ ಸಿಬ್ಬಂದಿಯವರು ಸಹಕರಿಸಿದರು.

ಶ್ರೀ ದೇವಳದ ವತಿಯಿಂದ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಲು ವ್ಯವಸ್ಥೆ : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎರಡು ಕಡೆಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಭಕ್ತರು ಹಣವನ್ನು ಪಾವತಿಸುವುದರೊಂದಿಗೆ ಬೇರೆ ಬೇರೆ ಸೇವೆಗಳ ರಶೀದಿಗಳನ್ನು ಕೂಡ ಪಡೆದುಕೊಳ್ಳುವ ವ್ಯವಸ್ಥೆ ಕಳೆದೊಂದು ತಿಂಗಳಿಂದ ಜಾರಿ ಬಂದಿರುತ್ತದೆ. ಇದರಿಂದಾಗಿ ಭಕ್ತರು ಸುಲಭದಲ್ಲಿ ತಮ್ಮ ಮೊಬೈಲ್ ಮೂಲಕ ವಿವಿಧ ಸೇವೆಗಳ ರಶೀದಿಗಳನ್ನು ಹಾಗೂ ಹಣ ಪಾವತಿ ಮಾಡಲು ಸಹಕಾರಿಯಾಗಿರುತ್ತದೆ.

ಖಾಯಂ ಸೇವೆ ಹಾಗೂ ಅನ್ನದಾನಕ್ಕಾಗಿ ವಿಶೇಷ ಕೌಂಟರ್ ಸಿದ್ದ : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದೆ ಖಾಯಂಸೇವೆ ಹಾಗೂ ಅನ್ನದಾನ ರಶೀದಿಗಾಗಿ ಬಹಳ ಇಕ್ಕಟ್ಟಿನ ಕೌಂಟರ್ ಗಳಿದ್ದು ಭಕ್ತರು ಪ್ರಯಾಸಪಡುವಂತಾಗಿತ್ತು. ಆದರೆ ಇದೀಗ ಈ ದೇವಳದ ಗೋಪುರದ ಬಲ ಭಾಗದಲ್ಲಿ ಅದಕ್ಕೆಂದೆ ವಿಶೇಷ ಕೌಂಟರ್ ಗಳನ್ನು ಸಿದ್ಧತೆ ಮಾಡಲಾಗಿದೆ ಭಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಶ್ರೀದೇವಳದ ಅಧಿಕಾರಿಗಳು ತಿಳಿಸಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading