ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಗೆ ಕುಲಪತಿಯಾಗಿ ಪ್ರೊ. ಡಾ. ಎ.ಟಿ. ರಾಮಚಂದ್ರ ನಾಯ್ಕ್ ನೇಮಕ

ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕುಲಪತಿಯಾಗಿ ನೇಮಕಗೊಂಡಿರುವುದು ವಿಶೇಷ

. . . . . . . . .

ಬೀದರ್: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ. ಡಾ. ಎ.ಟಿ. ರಾಮಚಂದ್ರ ನಾಯ್ಕ್ ಅವರನ್ನು ನೇಮಕ ಮಾಡಿ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದೇಶ ಹೊರಡಿಸಿದ್ದಾರೆ.

. . . . . . .

ಪ್ರೊ. ಡಾ. ಎ.ಟಿ. ರಾಮಚಂದ್ರ ನಾಯ್ಕ್ ಅವರು ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಈ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವುದು ವಿಶೇಷವಾಗಿದೆ.

ಇವರು ಈ ಹಿಂದೆ ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ ಪ್ರಾಯೋಜಿತ ಯೋಜನೆಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಗೊಳಿಸಿದ್ದರು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಷಯ ತಜ್ಞರಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಶೋಧನೆ ಮತ್ತು ಶೈಕ್ಷಣಿಕ ಸಾಧನೆ

ಮೀನುಗಾರಿಕೆ ಕ್ಷೇತ್ರದಲ್ಲಿ ಇ-ಲರ್ನಿಂಗ್‌ಗೆ ಸಂಬಂಧಿಸಿದಂತೆ ದೇಶದಲ್ಲೇ ಪ್ರಥಮವಾಗಿ ರೂಪಿಸಲಾದ ಪ್ರಯತ್ನಗಳ ಭಾಗವಾಗಿ, 2010ರಲ್ಲಿ ಅಮೆರಿಕದ ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ತರಬೇತಿ ಪಡೆದಿದ್ದಾರೆ. 2017ರಲ್ಲಿ ಜಪಾನ್‌ನ ಒಸಾಕ ನಗರದಲ್ಲಿ ನಡೆದ ಆರನೇ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಜಲಕೃಷಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಪ್ರಬಂಧ ಮಂಡಿಸಿದ್ದಾರೆ.

2022ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅತ್ಯುತ್ತಮ ಭಿತ್ತಿಪತ್ರ ಪ್ರಸ್ತುತಿ ಪ್ರಶಸ್ತಿ ಪಡೆದಿದ್ದು, 2023ರಲ್ಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿರುವ ಇವರು, ಸುಮಾರು 10 ಸ್ನಾತಕೋತ್ತರ ಮತ್ತು ಆರು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದುವರೆಗೆ ಸುಮಾರು 120 ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗಳಲ್ಲಿ ಪ್ರಕಟಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಪತ್ರಿಕೆಗಳಲ್ಲಿ 100ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಮೀನು ಕೃಷಿಕರು, ರೈತರು, ಉದ್ಯಮಿಗಳು, ಮೀನುಗಾರರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಉಪಯುಕ್ತವಾಗುವಂತೆ ಸ್ಥಳೀಯ ಭಾಷೆಗಳಲ್ಲಿ ಸುಮಾರು 150 ಜನಪ್ರಿಯ ಲೇಖನಗಳನ್ನು ಪ್ರಕಟಿಸಿದ್ದಾರೆ.

ಮೀನುಗಾರಿಕೆ ಕ್ಷೇತ್ರಕ್ಕೆ ಮಹತ್ವದ ಕೊಡುಗೆ

ವಿವಿಧ ಸಂಸ್ಥೆಗಳ ಪ್ರಾಯೋಜಿತ ಸಂಶೋಧನೆ ಮತ್ತು ವಿಸ್ತರಣಾ ಯೋಜನೆಗಳನ್ನು ಆಯೋಜಿಸಿರುವ ಇವರು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಹಕಾರದೊಂದಿಗೆ ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ‘ಸಂಭಾವ್ಯ ಮೀನುಗಾರಿಕೆ ವಲಯ ಸಲಹೆ’ ಯೋಜನೆ ಹಾಗೂ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್‌ನ ‘ಸಮುದ್ರ ನೀರಿನ ಗುಣಮಟ್ಟ ಸಮೀಕ್ಷೆ’ ಸೇರಿದಂತೆ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಲ್ಕು ಪ್ರಾಯೋಜಿತ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಹಾಗೂ ಆರು ಯೋಜನೆಗಳಲ್ಲಿ ಸಹ-ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿವಿಧ ಸಾಂಸ್ಥಿಕ ಜವಾಬ್ದಾರಿಗಳ ನಿರ್ವಹಣೆ

ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ನಿರ್ದೇಶಕ, ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ, ವಿದ್ಯಾರ್ಥಿ ನಿಲಯಗಳ ಕ್ಷೇಮಪಾಲಕ, ಮಾನವ ಹಕ್ಕುಗಳ ಕ್ಲಬ್‌ನ ಸದಸ್ಯ ಕಾರ್ಯದರ್ಶಿ, ತಂಬಾಕು ನಿಯಂತ್ರಣಾಧಿಕಾರಿ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಸಂಯೋಜಕ, ಉದ್ಯೋಗ ನೇಮಕಾಧಿಕಾರಿ, ಬಾಹ್ಯ ಪರೀಕ್ಷಾ ಸಂಯೋಜಕ ಹಾಗೂ ಸಮರ್ಥ್ ಇ-ಗವರ್ನೆನ್ಸ್ ಸೂಟ್‌ನ ಮಾಡ್ಯೂಲ್ ನಿರ್ವಾಹಕ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಇದರೊಂದಿಗೆ ಶಿಕ್ಷಕರ ಸಂಘದ ಕಾರ್ಯದರ್ಶಿ ಹಾಗೂ ಮೀನುಗಾರಿಕಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಯೋಜಿತ ಹಲವು ತರಬೇತಿ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯ, ಕಾಲೇಜುಗಳು, ಗ್ರಾಮೀಣ ಪ್ರದೇಶಗಳು, ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದಾರೆ.

ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಪ್ರೊ. ಡಾ. ಎ.ಟಿ. ರಾಮಚಂದ್ರ ನಾಯ್ಕ್ ಅವರ ನೇಮಕವು ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading