ಅ.16ರಿಂದ ಸುಳ್ಯದಲ್ಲಿ 55ನೇ ಶ್ರೀ ಶಾರದಾಂಬ ದಸರಾ ಉತ್ಸವ | ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಅ. 22ರಂದು ಶ್ರೀ ಚಂಡಿಕಾ ಮಹಾಯಾಗ | ಅ.24ರಂದು ಶಾರದಾದೇವಿಯ ಶೋಭಾಯಾತ್ರೆ

ಸುಳ್ಯದಲ್ಲಿ 55ನೇ ಶ್ರೀ ಶಾರದಾಂಬ ದಸರಾ ಉತ್ಸವವು ಅಕ್ಟೋಬರ್ 16ರಿಂದ 24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದರು.

. . . . . . . . .

ಅವರು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಅ. 9ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (ರಿ.), ದಸರಾ ಉತ್ಸವ ಸಮಿತಿ ಹಾಗೂ ತಾಲೂಕು ಶ್ರೀ ಶಾರದಾಂಬ ಉತ್ಸವ ಸಮಿತಿಗಳ ಆಶ್ರಯದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ‘ಶ್ರೀ ಶಾರದಾಂಬ ಕಲಾ ವೇದಿಕೆ’ಯಲ್ಲಿ ನಡೆಯಲಿರುವ ಉತ್ಸವದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

. . . . . . .

ಅ.16ರಂದು ಉತ್ಸವಕ್ಕೆ ಚಾಲನೆ
ಅಕ್ಟೋಬರ್ 16ರಂದು ಬೆಳಿಗ್ಗೆ ಗಂಟೆ 7ಕ್ಕೆ ಗಣಪತಿ ಹವನ ನಡೆಯಲಿದ್ದು, ಬೆಳಿಗ್ಗೆ ಗಂಟೆ 9ಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾದೇವಿಯ ಪ್ರತಿಷ್ಠಾ ಮೆರವಣಿಗೆ ಆರಂಭವಾಗಲಿದೆ. ಬೆಳಿಗ್ಗೆ ಗಂಟೆ 11.2ಕ್ಕೆ ದೇವಿಯ ಪ್ರತಿಷ್ಠೆ ಹಾಗೂ ಮಧ್ಯಾಹ್ನ ಗಂಟೆ 1ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ 7.30ಕ್ಕೆ ಸುಳ್ಯದ ಶ್ರೀ ಗುರುರಾಘವೇಂದ್ರ ಮಕ್ಕಳ ಕಲಾ ತಂಡದಿಂದ ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಳ್ಳಲಿದೆ.

ಅ.17ರಂದು ಸಂಜೆ 6ಕ್ಕೆ ಶ್ರೀ ದೀಪಾಂಜಲಿ ಮಹಿಳಾ ಭಜನಾ ಮಂಡಳಿ (ರಿ.), ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಸುಳ್ಯದ ಡಿ. ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಹಾಗೂ ಎಕ್ಸ್ಟಸಿ ಡ್ಯಾನ್ಸ್ ಕ್ರಿವ್ ಇವರಿಂದ ನೃತ್ಯ ವೈಭವ ಪ್ರಸ್ತುತಗೊಳ್ಳಲಿದೆ.

ಅ.18ರಂದು ಮಕ್ಕಳ ದಸರಾ
ಅ.18ರಂದು ಬೆಳಿಗ್ಗೆ 8ರಿಂದ ಮಕ್ಕಳ ದಸರಾ ನಡೆಯಲಿದ್ದು, ಸಂಜೆ 6ಕ್ಕೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 7ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಇದರ ಕಲಾವಿದರಿಂದ ನೃತ್ಯ ಸಂಭ್ರಮ ನಡೆಯಲಿದೆ.

ಅ.19ರಂದು ಮಹಿಳಾ ದಸರಾ
ಅ.19ರಂದು ಬೆಳಿಗ್ಗೆ ಗಂಟೆ 9ಕ್ಕೆ ಮಹಿಳಾ ದಸರಾ ಆಯೋಜಿಸಲಾಗಿದೆ. ಸಂಜೆ 6ಕ್ಕೆ ಶ್ರೀ ಮಿತ್ತೂರು ಉಳ್ಳಾಕುಳು ಮಹಿಳಾ ಭಜನಾ ಮಂಡಳಿ, ಅಮ್ಮೆ ಮಡಿಯಾರ್, ಉಬರಡ್ಕ ಇವರಿಂದ ಭಜನೆ ಹಾಗೂ ಸಂಜೆ 7ಕ್ಕೆ ರಂಗಮಯೂರಿ ಕಲಾಶಾಲೆ (ರಿ.), ಸುಳ್ಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ. 20ರಂದು ಆಯುಧಪೂಜೆ
ಅ. 20ರಂದು ಬೆಳಿಗ್ಗೆ 6ರಿಂದ ಆಯುಧಪೂಜೆ, ಸಂಜೆ ಗಂಟೆ 6ಕ್ಕೆ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಹಾಗೂ ಸಾಹಿತ್ಯ ಸಂಗೀತ ಕಲಾ ಕೇಂದ್ರ, ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 7ಕ್ಕೆ ಸುಳ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ಹಾಗೂ ಸಂಜೆ 7.30ಕ್ಕೆ ರಾಜ್ಯದ ನುರಿತ ಕಲಾವಿದರಿಂದ ಹಳೆಯ ಚಿತ್ರಗೀತೆಗಳ ಸಂಗಮ ‘ನೆನಪು ನೀನಾದ’ ಪ್ರಸ್ತುತಗೊಳ್ಳಲಿದೆ.

ಅ.21ರಂದು ಅಕ್ಷರಾಭ್ಯಾಸ
ಅ.21ರಂದು ಬೆಳಿಗ್ಗೆ 6ರಿಂದ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ, ಸಂಜೆ 6ಕ್ಕೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ, ಕಾಯರ್ತೋಡಿ ಇವರಿಂದ ಭಜನೆ ಹಾಗೂ ಸಂಜೆ 7ಕ್ಕೆ ಮಂಗಳೂರಿನ ಸಿಝ್ಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ನೃತ್ಯ ಪ್ರದರ್ಶನಗೊಳ್ಳಲಿದೆ.

ಅ. 22ರಂದು ಚಂಡಿಕಾ ಮಹಾಯಾಗ
ಅ. 22ರಂದು ಸಂಜೆ ಗಂಟೆ 7ರಿಂದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ (ರಿ.), ಸುಳ್ಯ ಇವರ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆ, ದೀಪಾರಾಧನೆ, ಸ್ವಸ್ತಿ ಪುಣ್ಯಾಹ, ಅಗ್ನಿಪ್ರತಿಷ್ಠೆ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನೆರವೇರಲಿದೆ. ರಾತ್ರಿ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಅ.23ರಂದು ‘ಮ್ಯೂಸಿಕ್ ಹಂಗಾಮ–2026’
ಅ. 23ರಂದು ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 7ರಿಂದ ಷರಾ ಫೌಂಡೇಶನ್ ಅರ್ಪಿಸುವ ಕಡಲ್ ತಂಡದವರಿಂದ ‘ಮ್ಯೂಸಿಕ್ ಹಂಗಾಮ–2026’ ಅದ್ದೂರಿ ಸಂಗೀತ ರಸಮಂಜರಿ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ಶಾರದಾದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ಕಣ್ಮನ ಸೆಳೆಯಲಿದೆ.

ಅ.24ರಂದು ಶಾರದಾದೇವಿಯ ವೈಭವದ ಶೋಭಾಯಾತ್ರೆ
ದಸರಾ ಉತ್ಸವದ ಸಮಾರೋಪದ ಅಂಗವಾಗಿ ಅ. 24ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 3ರಿಂದ ವಿಶೇಷ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಶ್ರೀ ಶಾರದಾದೇವಿಯ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯು ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ದೇವಿಯ ಜಲಸ್ತಂಭನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಉತ್ಸವದ ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಶ್ರೀ ದೇವಿಯ ಮಹಾಪೂಜೆ ನಡೆಯಲಿದ್ದು, ರಾತ್ರಿ 9 ಗಂಟೆಗೆ ಮಹಾಪೂಜೆ ನೆರವೇರಲಿದೆ. ಧಾರ್ಮಿಕ ಆಚರಣೆಗಳು, ಭಜನೆ, ನೃತ್ಯ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸುಳ್ಯದಲ್ಲಿ ದಸರಾ ಸಂಭ್ರಮ ಮನೆಮಾಡಲಿದೆ ಎಂದು ನಾರಾಯಣ ಕೇಕಡ್ಕ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹೆಗಾರ ಎನ್.ಎ. ರಾಮಚಂದ್ರ, ಎನ್. ಜಯಪ್ರಕಾಶ್ ರೈ, ಗೌರವಾಧ್ಯಕ್ಷ ಗೋಕುಲ್ ದಾಸ್, ಶ್ರೀ ಶಾರದಾಂಬ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್, ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಶ್ರೀ ಶಾರದಾಂಬ ಮಹಿಳಾ ಸಮಿತಿ ಅಧ್ಯಕ್ಷೆ ಲತಾ ಮಧುಸೂಧನ್, ಗೌರವಾಧ್ಯಕ್ಷೆ ಯಶೋಧ ರಾಮಚಂದ್ರ, ದಸರಾ ಉತ್ಸವ ಸಮಿತಿ ಖಜಾಂಜಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading