“ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ಕಾಂಗ್ರೆಸ್ ಸರಕಾರ ದ್ರೋಹ” : ವೆಂಕಟ್ ವಳಲಂಬೆ ಆಕ್ರೋಶ

ಸುಳ್ಯ : ಹವಾಮಾನ ವೈಪರೀತ್ಯದಿಂದ ಕೃಷಿಕರಿಗೆ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ಬೆಳೆ ವಿಮೆ ಯೋಜನೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆರೋಪಿಸಿದ್ದಾರೆ.

. . . . . . . . .

ರೈತರು ಸಹಕಾರಿ ಸಂಘಗಳ ಮೂಲಕ ವಿಮಾ ಕಂತು ಪಾವತಿಸಿದ್ದು, ಗ್ರಾಮಗಳಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರಗಳ ಆಧಾರದ ಮೇಲೆ ವಿಮಾ ಪರಿಹಾರ ನಿಗದಿಯಾಗುತ್ತದೆ. ಆದರೆ ಹಲವು ಕಡೆ ಮಳೆ ಮಾಪನ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದರಿಂದ ನೈಜ ಮಳೆಯ ಪ್ರಮಾಣ ದಾಖಲಾಗದೆ ರೈತರಿಗೆ ನ್ಯಾಯಯುತ ಪರಿಹಾರ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

. . . . . . .

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಡಿಕೆ ಕೊಳೆರೋಗ ಹಾಗೂ ಹಳದಿ ರೋಗದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟದ ಹಿನ್ನೆಲೆಯಲ್ಲಿ ತಮ್ಮ ಖಾತೆಗೆ ದೊಡ್ಡ ಮೊತ್ತದ ವಿಮಾ ಪರಿಹಾರ ಜಮೆಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸರಾಸರಿ ಮಳೆಯ ಆಧಾರದಲ್ಲಿ ವಿಮಾ ಪರಿಹಾರ ನಿಗದಿಪಡಿಸಿರುವುದು ನೈಜವಾಗಿ ಹೆಚ್ಚಿನ ಮಳೆ ಹಾಗೂ ಬೆಳೆ ನಷ್ಟ ಅನುಭವಿಸಿರುವ ಪ್ರದೇಶಗಳ ರೈತರಿಗೆ ಅನ್ಯಾಯವಾಗಿದೆ ಎಂದು ವೆಂಕಟ್ ವಳಲಂಬೆ ಆರೋಪಿಸಿದ್ದಾರೆ. ಕಡಿಮೆ ಕೃಷಿ ಪ್ರದೇಶವಿರುವ ಉಳ್ಳಾಲವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ಕೂಡ ಜಿಲ್ಲೆಯ ರೈತರ ನಡುವೆ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.ಈ ಬೆಳವಣಿಗೆಯಿಂದ ರೈತರು ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲಿಟ್ಟಿದ್ದ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ರೈತರು ಬೆಳೆ ವಿಮೆ ಕಂತು ಪಾವತಿಸಲು ಹಿಂದೇಟು ಹಾಕುವಂತಹ ಪರಿಸ್ಥಿತಿಯನ್ನು ಸರಕಾರವೇ ನಿರ್ಮಿಸಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚು ಮಳೆಯಾಗಿ ಬೆಳೆ ನಷ್ಟವಾಗಿರುವ ಪ್ರದೇಶಗಳಲ್ಲಿ ಕಡಿಮೆ ವಿಮಾ ಪರಿಹಾರ ಬಿಡುಗಡೆಯಾಗಿರುವ ಸಹಕಾರಿ ಸಂಘಗಳ ವ್ಯಾಪ್ತಿಯ ರೈತರ ಖಾತೆಗಳಿಗೆ ನ್ಯಾಯಯುತವಾದ ಹೆಚ್ಚುವರಿ ಪರಿಹಾರವನ್ನು ತಕ್ಷಣ ಜಮೆ ಮಾಡಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದಲ್ಲಿ, ನೊಂದಿರುವ ಗ್ರಾಮೀಣ ರೈತರ ಹಕ್ಕಿನ ಹಣವನ್ನು ದೊರಕಿಸಿಕೊಡಲು ಅವರೊಂದಿಗೆ ನಿಂತು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ವೆಂಕಟ್ ವಳಲಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading