ತುಳು ಭಾಷೆಗೆ ಮಾನ್ಯತೆ ಅವಿಸ್ಮರಣೀಯ ಕ್ಷಣ – ರಾಜ್ಯ ಸರಕಾರಕ್ಕೆ ದೆಹಲಿ ತುಳುಸಿರಿಯ ಅಭಿನಂದನೆ

ಪಂಚ ದ್ರಾವಿಡ ಭಾಷೆಯಾದ ತುಳುವನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ತುಳುವರ ಒಕ್ಕೊರಲ ಬೇಡಿಕೆಯನ್ನು ಕರ್ನಾಟಕ ಸರಕಾರವು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ತೀರ್ಮಾನಿಸಿರುವುದು ಸಂತಸದ ಸಂಗತಿ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪಂಚ ದ್ರಾವಿಡ ಭಾಷೆಯಾದ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂಬ ಮನವಿಯನ್ನು ದೆಹಲಿ ತುಳುಸಿರಿಯ ವತಿಯಿಂದ ಮಾಡಲಾಗಿತ್ತು. ಕರ್ನಾಟಕ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ತನ್ನ ಪ್ರಣಾಳಿಕೆಯಲ್ಲಿ ಈ ಅಂಶವನ್ನು ನೀಡಿತ್ತು. ಇದೀಗ ತನ್ನ ಪ್ರಣಾಳಿಕೆಯಂತೆ ನಡೆದುಕೊಂಡಿರುವುದು ತುಳುನಾಡಿನ ಜನತೆಗೆ ಅವಿಸ್ಮರಣೀಯ ಕ್ಷಣವಾಗಿದೆ.

. . . . . . . . .

ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಬೇಕಾದರೆ ಕರ್ನಾಟಕ ಸರಕಾರವು ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಪ್ರಸ್ತಾಪವನ್ನು ಮೊದಲು ಸರಕಾರದ ಗಮನಕ್ಕೆ ತಂದದ್ದು ದೆಹಲಿ ತುಳುಸಿರಿ. ದೆಹಲಿ ತುಳುಸಿರಿಯ ಈ ಕೋರಿಕೆಯ ಮೇರೆಗೆ ವಿಶೇಷವಾಗಿ ಮುತುವರ್ಜಿ ವಹಿಸಿ ಕಾರ್ಯಗೈದ ಪ್ರೊಫೆಸರ್ ರಾಧಾಕೃಷ್ಣ ಅವರಿಗೆ ಇದರ ಪೂರ್ಣ ಶ್ರೇಯಸ್ಸು ಸಲ್ಲಬೇಕಾದುದು. ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿದ್ದ ಅಂದಿನ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೂ ದೆಹಲಿ ತುಳುಸಿರಿಯು ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಪ್ರಸ್ತುತ ಸರಕಾರದ ಸಚಿವ ಸಂಪುಟಕ್ಕೆ, ಈ ಹೋರಾಟದ ಹಿಂದೆ ಶ್ರಮಿಸಿದ ಕರಾವಳಿಯ ಶಾಸಕರಿಗೆ, ಸಂಸದರಿಗೆ ಹಾಗೂ ಮಹನೀಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ಐತಿಹಾಸಿಕ ಕ್ಷಣವನ್ನು ಒದಗಿಸಿಕೊಟ್ಟ ಮಾನ್ಯ ಮುಖ್ಯಮಂತ್ರಿಗಳನ್ನು ದೆಹಲಿಯಲ್ಲಿ ತುಳುವರು ಆದರಾಭಿಮಾನದಿಂದ ಅಭಿನಂದಿಸಲಿದ್ದಾರೆ.

. . . . . . .

ತುಳು ಭಾಷೆ, ಸಂಸ್ಕೃತಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲಿ ದೆಹಲಿ ತುಳುಸಿರಿಯು ಸುಮಾರು ಮೂರು ದಶಕಗಳಿಂದ ನಿರಂತರವಾಗಿ ಕಾರ್ಯಗೈಯುತ್ತಿದೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಲು ಅಪಾರ ಶ್ರಮವಹಿಸಿದೆ. ಮುಂದಿನ ದಿನಗಳಲ್ಲಿಯೂ ಈ ಪ್ರಯತ್ನವು ಮುಂದುವರಿಯಲಿದೆ ಎಂದು ದೆಹಲಿ ತುಳುಸಿರಿ ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ವಸಂತ ಶೆಟ್ಟಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading