ಅರಂತೋಡಿನಲ್ಲಿ ನಿರಂತರ ವಿದ್ಯುತ್ ಅಭಾವ ಹಾಗೂ ಲೈನ್‌ಮೆನ್‌ಗಳ ಕೊರತೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರಿಗೆ ಮನವಿ ಸಲ್ಲಿಕೆ

ಅರಂತೋಡು :ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ವ್ಯಾಪ್ತಿಯಲ್ಲಿ ದಿನನಿತ್ಯ ಎದುರಾಗುತ್ತಿರುವ ನಿರಂತರ ವಿದ್ಯುತ್ ಕಡಿತ ಹಾಗೂ ಮೆಸ್ಕಾಂ(MESCOM) ಸಿಬ್ಬಂದಿಗಳ(ಲೈನ್‌ಮೆನ್) ತೀವ್ರ ಅಭಾವವನ್ನು ತಕ್ಷಣವೇ ನೀಗಿಸುವಂತೆ ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪದ್ಮರಾಜ್ ರಾಮಯ್ಯ ಅವರಿಗೆ ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಯಿಂದ ಸುಳ್ಯದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಗ್ರಾಮ ಕಾಂಗ್ರೆಸ್ ಮುಖಂಡರು ಮಾತನಾಡಿ, “ನಮ್ಮ ಭಾಗದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ನಿರಂತರವಾಗಿ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸೂಕ್ತ ಸಮಯಕ್ಕೆ ವಿದ್ಯುತ್ ಸಿಗದೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ” ಎಂದು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದರು. “ಅಲ್ಲದೆ, ಈ ಪ್ರದೇಶದಲ್ಲಿ ವಿದ್ಯುತ್ ಮಾರ್ಗಗಳ ದುರಸ್ತಿ ಹಾಗೂ ನಿರ್ವಹಣೆಗೆ ಅಗತ್ಯವಿರುವಷ್ಟು ಲೈನ್‌ಮೆನ್‌ಗಳ ಕೊರತೆ ಇದೆ. ಗಾಳಿ-ಮಳೆಗೆ ಲೈನ್ ಕಡಿತಗೊಂಡರೆ ಅಥವಾ ತಾಂತ್ರಿಕ ದೋಷ ಉಂಟಾದರೆ, ಸಿಬ್ಬಂದಿಗಳ ಕೊರತೆಯಿಂದಾಗಿ ದಿನಗಟ್ಟಲೆ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಳೆಯುವಂತಾಗಿದೆ. ಆದ್ದರಿಂದ ಮೆಸ್ಕಾಂ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಗ್ರಾಮಗಳಿಗೆ ತಕ್ಷಣವೇ ಹೆಚ್ಚುವರಿ ಲೈನ್‌ಮೆನ್‌ಗಳನ್ನು ನಿಯೋಜಿಸಬೇಕು ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

. . . . . . .

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರು, ಈ ಸಮಸ್ಯೆಯ ತೀವ್ರತೆಯನ್ನು ಆಲಿಸಿ, ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳೊಂದಿಗೆ ಹಾಗೂ ಇಲಾಖೆಯ ಸಚಿವರೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ರೈ,ಪ್ರಧಾನ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು ಜುಬೇರ್, ವೆಂಕಟರಮಣ ಮೆರ್ಕಜೆ , ಹರ್ಷಿತ್ ಕೊಡಂಕೆರಿ, ಶ್ರೀನಿವಾಸ ಪೆತ್ತಜೆ, ಮುಸ್ತಫಾ, ಯತೀಶ್ ಬಾಜಿನಡ್ಕ, ಅಬೂಬಕ್ಕರ್ ಪಾರೆಕ್ಕಲ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading