ಬೆಳೆ ವಿಮೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಮಹಮ್ಮದ್ ಅಲಿ ಆರೋಪ | ಕಡಿಮೆ ಮಳೆಯಿಂದ ಪರಿಹಾರ ಮೊತ್ತ ಇಳಿಕೆ; ಟರ್ಮ್ ಶೀಟ್ ಬದಲಾವಣೆ ಕೇಂದ್ರದ ಮಾರ್ಗಸೂಚಿಯಂತೆ ನಡೆದಿದೆ

ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆಯಾಗಿರುವ ವಿಚಾರದಲ್ಲಿ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ ಆರೋಪಿಸಿದರು.

. . . . . . . . .

ಅ. 19ರಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ವಿಮೆ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಶೇ. 10ರಷ್ಟಿದ್ದು, ರಾಜ್ಯ ಸರಕಾರ ಹೆಚ್ಚಿನ ಪಾಲನ್ನು ಭರಿಸುತ್ತಿದೆ. ಆದರೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿ ಯೋಜನೆಯ ಶ್ರೇಯಸ್ಸು ಪಡೆಯುತ್ತಿದೆ. ಪರಿಹಾರ ಮೊತ್ತ ಕಡಿಮೆಯಾದಾಗ ರಾಜ್ಯ ಸರಕಾರವನ್ನು ದೂಷಿಸುವುದು ಖಂಡನೀಯ ಎಂದರು.

. . . . . . .

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ 2016-17ನೇ ಸಾಲಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಜಾರಿಯಲ್ಲಿದೆ. 2022-23ನೇ ಸಾಲಿನವರೆಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಮಳೆಯ ಮಿತಿ 100 ಮಿ.ಮೀ. ಆಗಿತ್ತು. ಇದರಿಂದ ವಿಮಾ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ 2023-24ನೇ ಸಾಲಿನಲ್ಲಿ ನಾಲ್ಕು ಬಾರಿ ಟೆಂಡರ್ ಕರೆದರೂ ಯಾವುದೇ ಕಂಪನಿ ಭಾಗವಹಿಸಿರಲಿಲ್ಲ. ರೈತರಿಗೆ ವಿಮಾ ಸೌಲಭ್ಯ ತಪ್ಪಬಾರದೆಂಬ ಉದ್ದೇಶದಿಂದ ಕೇಂದ್ರದ ಮಾರ್ಗಸೂಚಿಯಂತೆ ಟರ್ಮ್ ಶೀಟ್ ಮಾರ್ಪಾಡು ಮಾಡಲಾಗಿದೆ ಎಂದು ವಿವರಿಸಿದರು.

ಹೊಸ ಟರ್ಮ್ ಶೀಟ್‌ನಲ್ಲಿ ಹತ್ತು ತಿಂಗಳ ಮಳೆ ಹಾಗೂ ಎರಡು ತಿಂಗಳ ತಾಪಮಾನದ ಲೆಕ್ಕಾಚಾರ ಅಳವಡಿಸಿ ವರ್ಷಪೂರ್ತಿ ವಿಮಾ ರಕ್ಷಣೆ ನೀಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಕಡಿಮೆ ಮಳೆಯಾಗಿರುವುದರಿಂದ ಪರಿಹಾರ ಮೊತ್ತ ಕಡಿಮೆಯಾಗಿದೆ. ಮಳೆ ಮಾಪನದ ಆಧಾರದಲ್ಲಿ ಗ್ರಾಮದಿಂದ ಗ್ರಾಮಕ್ಕೆ ಪರಿಹಾರದಲ್ಲಿ ವ್ಯತ್ಯಾಸವಾಗುತ್ತದೆ ಎಂದರು.

ತಮ್ಮ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಗೆ ಪ್ರೀಮಿಯಂಗಿಂತ ನಾಲ್ಕು ಪಟ್ಟು ಹಾಗೂ ಕಾಳುಮೆಣಸಿಗೆ ನಾಲ್ಕೂವರೆ ಪಟ್ಟು ಹೆಚ್ಚಿನ ಪರಿಹಾರ ದೊರೆತಿದೆ ಎಂದು ತಿಳಿಸಿದ ಅವರು, ಬೆಳೆ ವಿಮೆ ವಿಚಾರದಲ್ಲಿ ಬಿಜೆಪಿ ಸುಳ್ಳು ಆರೋಪ ಮಾಡಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುಳ್ಯದ ಆಯಾ ಗ್ರಾ. ಪಂ. ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಸ್ವಯಂಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳ ದತ್ತಾಂಶದ ಆಧಾರದಲ್ಲಿ ಬೆಳೆ ವಿಮೆ ನಷ್ಟ ಪರಿಹಾರವನ್ನು ನಿರ್ಧರಿಸಲಾಗುತ್ತದೆ. ಕಾರಣಾಂತರಗಳಿಂದ ಈ ಕೇಂದ್ರಗಳ ದತ್ತಾಂಶ ಲಭ್ಯವಾಗದಿದ್ದಲ್ಲಿ, ಅಧಿಸೂಚಿಸಲಾದ ಪರ್ಯಾಯ ದತ್ತಾಂಶ ಅಥವಾ ಸಮೀಪದ ಸ್ವಯಂಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಹವಾಮಾನದ ಮಾಹಿತಿ ಆಧಾರವಾಗಿಟ್ಟುಕೊಂಡು ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಅನುಮೋದಿತ ಟರ್ಮ್‌ಶೀಟ್‌ನ ನಿಯಮಗಳ ಪ್ರಕಾರ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಲೆಕ್ಕಾಚಾರ ಮಾಡಿ, ವಿಮಾ ಸಂಸ್ಥೆಗಳು ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಗಫೂರ್ ಕಲ್ಮಡ್ಕ, ಕರುಣಾಕರ ಅಡ್ಪಂಗಾಯ, ಜಿಲ್ಲಾ ಕಾಂಗ್ರೆಸ್ ಸದಸ್ಯ ನಂದರಾಜ್ ಸಂಕೇಶ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading