ಮಂಡೆಕೋಲು ಗ್ರಂಥಾಲಯದಲ್ಲಿ ವಿಶ್ವ ಆಹಾರ ದಿನಾಚರಣೆ

ಸರಕಾರದ ಸುತ್ತೋಲೆಯಂತೆ ಅಕ್ಟೋಬರ್ 16ರಂದು ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವುದು, ಸಿರಿಧಾನ್ಯಗಳ ಅನಾವರಣ ಹಾಗೂ ಆಹಾರ ಮತ್ತು ಪೌಷ್ಟಿಕತೆಯ ಮಹತ್ವ ಸಾರುವ ಪ್ರತಿಜ್ಞಾ ವಿಧಿಯ ಬೋಧನೆಯ ಮೂಲಕ ಉದ್ಘಾಟಿಸಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಮೇಶ್ ಪಿ., ನೂತನವಾಗಿ ಆಗಮಿಸಿದ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ರೋಹಿಣಿ, ಹಿರಿಯ ನಾಗರಿಕರಾದ ಶ್ರೀ ಯದುಗಿರಿ ರಾಮಚಂದ್ರ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಮಮತಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಬೀನಾ ಮತ್ತು ಶ್ರೀಮತಿ ಭವಾನಿ, ಸಮುದಾಯ ಆರೋಗ್ಯ ಅಧಿಕಾರಿಯಾದ ಶ್ರೀಮತಿ ಪವಿತ್ರಾ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಮೇಶ್ ಪಿ. ಅವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಲಕ್ಷ್ಮಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವ ಆಹಾರ ದಿನಾಚರಣೆಯ ಮಹತ್ವ, ಸಮತೋಲಿತ ಆಹಾರ, ಪೌಷ್ಟಿಕತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಶ್ರೀಮತಿ ಬೀನಾ ಅವರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ರಕ್ತದೊತ್ತಡ (ಬಿಪಿ) ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣದ (ಶುಗರ್) ಪರೀಕ್ಷೆ ನಡೆಸಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮನರಂಜನಾತ್ಮಕ ಆಟಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಕ್ಕಿ, ಭತ್ತ ಹಾಗೂ ಗೋಧಿಯನ್ನು ಬೆರೆಸಿ ಅದರಲ್ಲಿ ಅಕ್ಕಿಯನ್ನು ಬೇರ್ಪಡಿಸುವ ವಿನೂತನ ಆಟದಲ್ಲಿ ಶ್ರೀಮತಿ ಹೇಮಾ ಬೊಳುಗಲ್ಲು ಪ್ರಥಮ ಬಹುಮಾನ ಪಡೆದರೆ, ಶ್ರೀಮತಿ ಸಂಧ್ಯಾ ಮಾವಂಜಿ ದ್ವಿತೀಯ ಬಹುಮಾನ ಪಡೆದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀಮತಿ ಹೇಮಾ ಪ್ರಥಮ ಬಹುಮಾನ ಹಾಗೂ ಶ್ರಾವಣಿ ದ್ವಿತೀಯ ಬಹುಮಾನ ಗಳಿಸಿದರು.ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಮಮತಾ ಬೊಳುಗಲ್ಲು, ಶ್ರೀಮತಿ ಪದ್ಮಾವತಿ ಕಣೆಮರಡ್ಕ ಹಾಗೂ ಶ್ರೀಮತಿ ಸುಶೀಲ ಕಣೆಮರಡ್ಕ ಅವರು ವೇದಿಕೆಯನ್ನು ವಹಿಸಿಕೊಂಡರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶ್ರೀ ಯದುಗಿರಿ ರಾಮಚಂದ್ರ ಅವರ ವತಿಯಿಂದ ಸಾವಯವ ಬೆಲ್ಲ, ಸಾವಯವ ಹಣ್ಣುಗಳು ಹಾಗೂ ಕಾಳುಗಳನ್ನು ಬಹುಮಾನವಾಗಿ ವಿತರಿಸಲಾಯಿತು.ಕಾರ್ಯಕ್ರಮದ ವಿಶೇಷತೆಯಾಗಿ ವೇದಿಕೆಯಲ್ಲಿದ್ದ ಗಣ್ಯರಿಗೆ ಮೊಳಕೆ ಕಾಳುಗಳು, ಹಣ್ಣು-ಹಂಪಲು ಹಾಗೂ ಧವಸಧಾನ್ಯಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಆರೋಗ್ಯಕರ ಆಹಾರ ಪದ್ಧತಿ, ಪೌಷ್ಟಿಕಾಂಶಯುಕ್ತ ಆಹಾರದ ಸೇವನೆ ಮತ್ತು ಆಹಾರದ ಮೌಲ್ಯವನ್ನು ಅರಿತುಕೊಳ್ಳುವ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದ ಸಮರ್ಪಣೆಯನ್ನು ಮಂಡೆಕೋಲು ಅರಿವು ಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಸಾವಿತ್ರಿ ಕಣೆಮರಡ್ಕ ಅವರು ನೆರವೇರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading