ಶೂನ್ಯ ಬಡ್ಡಿ ದರದ ಬೆಳೆ ಸಾಲ ಮಿತಿ ₹5 ಲಕ್ಷಕ್ಕೆ : ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಕೃಷಿಕರ ಹಿತರಕ್ಷಣಾ ವೇದಿಕೆ, ಸುಳ್ಯ ವತಿಯಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ

ಸುಳ್ಯ: “ಕೃಷಿಕರಿಗೆ ನೀಡಲಾಗುವ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಿರುವ ಸರ್ಕಾರದ ಘೋಷಣೆಯು ಕೇವಲ ವಾಟ್ಸಪ್ ಸಂದೇಶಗಳಿಗೆ ಸೀಮಿತವಾಗದೆ, ತ್ವರಿತಗತಿಯಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಳ್ಳಬೇಕು” ಎಂದು ಆಗ್ರಹಿಸಿ ‘ಕೃಷಿಕರ ಹಿತರಕ್ಷಣಾ ವೇದಿಕೆ’, ಸುಳ್ಯ ಇದರ ವತಿಯಿಂದ ಅಕ್ಟೋಬರ್ 14ರಂದು ಸುಳ್ಯ ತಹಶೀಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಯಿತು.

. . . . . . . . .

“ರಾಜ್ಯದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ, ವಿಶೇಷವಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೂನ್ಯ ಬಡ್ಡಿ ದರದ ಕೃಷಿ ಸಾಲದ ಮಿತಿಯನ್ನು ₹5 ಲಕ್ಷಕ್ಕೆ ಏರಿಸಿದ್ದರು. ಆದರೆ, ತದನಂತರ ಬಂದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಹಾಗೂ ಇದು ಅನುಷ್ಠಾನಕ್ಕೆ ಬರಲು ಸಂಪೂರ್ಣ ವಿಫಲವಾಗಿದೆ. ಪ್ರಸ್ತುತ ರೈತರಿಗೆ ಕೇವಲ ₹3 ಲಕ್ಷದವರೆಗೆ ಮಾತ್ರ ಸಾಲ ವಿತರಣೆಯಾಗುತ್ತಿದೆ. ಇತ್ತೀಚೆಗಷ್ಟೇ ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ನೇತೃತ್ವದ ಸರ್ಕಾರವು ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ ನೀಡುವ ಕುರಿತು ಸಂದೇಶಗಳನ್ನು ರವಾನಿಸಿತ್ತು. ಈ ವಿಚಾರ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ರೈತರಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದರೂ, ವಾಸ್ತವದಲ್ಲಿ ಸಾಲ ವಿತರಣೆಯ ಮೊತ್ತದಲ್ಲಿ ಯಾವುದೇ ಏರಿಕೆಯಾಗಿಲ್ಲ. ಆದರೆ, ವಾಸ್ತವಿಕ ಸ್ಥಿತಿಯೇ ಬೇರೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಹಾಗೂ ಪುತ್ತೂರು ಪರಿಸರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಈ ಸೌಲಭ್ಯದ ಕುರಿತು ಯಾವುದೇ ಸ್ಪಷ್ಟ ಆದೇಶವಾಗಲಿ, ಅಧಿಕೃತ ಮಾಹಿತಿಯಾಗಲಿ ಲಭ್ಯವಿಲ್ಲ. ಇದರಿಂದಾಗಿ ₹5 ಲಕ್ಷದವರೆಗೆ ಬೆಳೆ ಸಾಲ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ತೀವ್ರ ಗೊಂದಲಕ್ಕೊಳಗಾಗಿದ್ದಾರೆ. ಸರಕಾರದ ಸೌಲಭ್ಯಗಳು ಕೇವಲ ಘೋಷಣೆಯಾಗಿ ಉಳಿಯದೆ, ಅರ್ಹ ರೈತರ ಹೊಲದವರೆಗೆ ತಲುಪಿದಾಗ ಮಾತ್ರ ಅದರ ಉದ್ದೇಶ ಸಾರ್ಥಕವಾಗುತ್ತದೆ. ಈ ಹಿನ್ನೆಲೆಯಲ್ಲಿ, ₹5 ಲಕ್ಷದವರೆಗಿನ ಶೂನ್ಯ ಬಡ್ಡಿದರದ ಸಾಲ ಸೌಲಭ್ಯಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತ್ವರಿತಗತಿಯಲ್ಲಿ ಸ್ಪಷ್ಟ ನಿರ್ದೇಶನ ಹಾಗೂ ಸುತ್ತೋಲೆಯನ್ನು ನೀಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

. . . . . . .

“ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು, ಯಾವುದೇ ಆಡಳಿತಾತ್ಮಕ ಅಥವಾ ತಾಂತ್ರಿಕ ಅಡೆತಡೆಗಳಿದ್ದಲ್ಲಿ ಅವುಗಳನ್ನು ನಿವಾರಿಸಿ ಸಾಲ ವಿತರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಒಂದು ವೇಳೆ ಈ ಗೊಂದಲವನ್ನು ಬಗೆಹರಿಸಿ, ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರ ಹಿತದೃಷ್ಟಿಯಿಂದ ಬೃಹತ್ ಹೋರಾಟವನ್ನು ಪ್ರಾರಂಭಿಸಲಾಗುವುದು” ಎಂದು ವೇದಿಕೆ ಎಚ್ಚರಿಕೆ ನೀಡಿದೆ.

ತಹಶೀಲ್ದಾರರನ್ನು ಭೇಟಿಯಾಗಿ ಮನವಿ ಸಲ್ಲಿಸುವ ನಿಯೋಗದಲ್ಲಿ ಕೃಷಿಕರ ಹಿತರಕ್ಷಣಾ ವೇದಿಕೆ, ಸುಳ್ಯ ಇದರ ಸಂಚಾಲಕರಾದ ಶ್ರೀ ಕೃಷ್ಣಪ್ರಸಾದ್ ಮಡ್ತಿಲ, ಸಹ-ಸಂಚಾಲಕರುಗಳಾದ ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು ಹಾಗೂ ಸದಸ್ಯರಾದ ಮುರಳೀಧರ ಕೊಚ್ಚಿ, ಗಣೇಶ್ ಭಜಂತಡ್ಕ ಮಡ್ತಿಲ, ಚಿದಾನಂದ ಬಾಂಜಿಕೋಡಿ, ರಾಮಚಂದ್ರ ಪಲ್ಲತ್ತಡ್ಕ, ಶಿವರಾಮ ನೆಕ್ರಪ್ಪಾಡಿ, ದೇವಿದಾಸ ಕತ್ಲಡ್ಕ, ಜಗದೀಶ್ ಕೋಲ್ಚಾರ್, ನಂದಕುಮಾರ ಬಾರೆತಡ್ಕ, ನವೀನ್ ಸಾರಕೆರೆ, ನಿಖಿಲ್ ಮಡ್ತಿಲ, ಸುದೇಶ್ ಚೆಮ್ನೂರು, ಅಜಿತ್ ದೇರಾಜೆ, ಮೋಹನ್ ಬೋಲ್ಗುಡ್ಡೆ, ಭಾಸ್ಕರ ಕೀಲಾಡಿ, ಅನಿಲ್ ದೇರಾಜೆ, ಭವಾನಿ ಶಂಕರ್ ಪೂಜಾರಿಮನೆ, ಅನಿಂದಿತ್ ಕೆ ಎಸ್, ಕಿಶನ್ ಜಬಳೆ ಸೇರಿದಂತೆ ರೈತ ಬಾಂಧವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading