ಇದು ಸರಕಾರಿ ಕಚೇರಿಯೋ ಅಥವಾ ಕಾಡೋ? ಪೊದೆಗಳ ನಡುವೆ ಕಣ್ಮರೆಯಾದ ಸುಳ್ಯದ ಬಿಎಸ್‌ಎನ್‌ಎಲ್ ಕಛೇರಿ


ಸುದೀಪ್ ರಾಜ್ ಮುಳ್ಯ
ಸುಳ್ಯ: ನಗರದ ಅತಿ ಪ್ರಮುಖ ಹಾಗೂ ಸದಾ ವಾಹನ-ಸಾರ್ವಜನಿಕರ ದಟ್ಟಣೆಯಿಂದ ಕೂಡಿರುವ ರಥಬೀದಿಯಲ್ಲೊಂದು ಸರಕಾರಿ ಕಚೇರಿಯಿದೆ. ಆದರೆ ದೂರದಿಂದ ನೋಡಿದರೆ ಇದು ಸಾರ್ವಜನಿಕರ ಸೇವೆಗಾಗಿ ಇರುವ ದೂರಸಂಪರ್ಕ ಸಂಸ್ಥೆಯ ಕಚೇರಿಯೋ ಅಥವಾ ಯಾರಿಗೂ ಬೇಡವಾಗಿ ಕಾಡು ಬೆಳೆದು ನಿಂತ ಪಾಳುಬಿದ್ದ ಜಾಗವೋ ಎಂಬ ಅನುಮಾನ ಮೂಡುತ್ತಿದೆ!
ಇದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಕೇಂದ್ರ ಸರ್ಕಾರದ ಒಡೆತನದ ಸುಳ್ಯದ ಪ್ರಮುಖ ಬಿಎಸ್‌ಎನ್‌ಎಲ್ (BSNL) ಕಚೇರಿಯ ದುಃಸ್ಥಿತಿ.
ಕಚೇರಿಯ ಮುಂಭಾಗದಲ್ಲಿ  ಆಳೆತ್ತರಕ್ಕೂ ಮೀರಿ ದಟ್ಟವಾಗಿ ಬೆಳೆದು ನಿಂತಿರುವ ಹುಲ್ಲು, ಮುಳ್ಳುಕಂಟಿ ಮತ್ತು ಪೊದೆಗಳು ಇಡೀ ಕಟ್ಟಡವನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿವೆ. ಕಚೇರಿಯ ನೀಲಿ ಬಣ್ಣದ ಕಟ್ಟಡ ಮತ್ತು ಕಿಟಕಿಗಳು ಈ ಕಾಡಿನ ಪೊದೆಯ ಹಿಂದಷ್ಟೇ ಮಸುಕಾಗಿ ಗೋಚರಿಸುತ್ತಿದ್ದು, ಕಚೇರಿಯ ಬಾಗಿಲು ಎಲ್ಲಿದೆ, ಇಲ್ಲಿ ಅಧಿಕಾರಿ-ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೋ ಇಲ್ಲವೋ, ಕಚೇರಿ ತೆರೆದಿದೆಯೋ ಮುಚ್ಚಿದೆಯೋ ಎಂಬುದೇ ತಿಳಿಯದಂತಾಗಿದೆ.
ವಿಷಜಂತುಗಳ ಆವಾಸತಾಣ: ಗ್ರಾಹಕರಲ್ಲಿ ಆತಂಕ
ಖಾಸಗಿ ಟೆಲಿಕಾಂ ಕಂಪನಿಗಳ ಅಬ್ಬರದ ನಡುವೆಯೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಿಎಸ್‌ಎನ್‌ಎಲ್ ಸೇವೆಯನ್ನು ನಂಬಿರುವ ನೂರಾರು ಗ್ರಾಹಕರು ನಿತ್ಯವೂ ಸಿಮ್ ಕಾರ್ಡ್, ಬ್ರಾಡ್‌ಬ್ಯಾಂಡ್ ಅಥವಾ ಲ್ಯಾಂಡ್‌ಲೈನ್ ಸಮಸ್ಯೆಗಳಿಗೆ ಪರಿಹಾರ ಅರಸಿ ಇಲ್ಲಿಗೆ ಬರುತ್ತಾರೆ. ಆದರೆ ಮುಂಭಾಗದ ಈ ದಟ್ಟ ಕಾಡನ್ನು ಕಂಡು ಒಳಗೆ ಕಾಲಿಡಲು ಜನ ಹಿಂಜರಿಯುವಂತಾಗಿದೆ.
ಮಳೆಗಾಲದ ಬಳಿಕ ವಿಪರೀತವಾಗಿ ಬೆಳೆದಿರುವ ಈ ಪೊದೆಗಳಲ್ಲಿ ಹಾವು, ಚೇಳು ಸೇರಿದಂತೆ ವಿಷಜಂತುಗಳು ಆಶ್ರಯ ಪಡೆದುಕೊಂಡಿರುವ ಭೀತಿ ಎದುರಾಗಿದೆ. ಗ್ರಾಹಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಈ ಪೊದೆಗಳ ಪಕ್ಕದಲ್ಲೇ ಸಾಗಿ ಕಚೇರಿ ಪ್ರವೇಶಿಸಬೇಕಾದ ಅನಿವಾರ್ಯತೆ ಇದೆ.
ನಿರ್ಲಕ್ಷ್ಯದ ಪರಮಾವಧಿ
ಪಟ್ಟಣದ ಅತ್ಯಂತ ಪ್ರಮುಖ ರಸ್ತೆಯಲ್ಲೇ ಇಷ್ಟೊಂದು ಭೀಕರವಾಗಿ ಕಾಡು ಬೆಳೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೆ ನಿದ್ದೆಗೆ ಜಾರಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುವ ಇಲಾಖೆಗೆ, ತನ್ನ ಸ್ವಂತ ಕಚೇರಿಯ ಎದುರಿಗಿರುವ ಗಿಡಗಂಟಿಗಳನ್ನು ಕಡಿಯಲು ಪುರುಸೊತ್ತಿಲ್ಲದಿರುವುದು ವಿಪರ್ಯಾಸ.
ಕಚೇರಿಯ ಪರಿಸರವನ್ನು ಕೂಡಲೇ ಸ್ವಚ್ಛಗೊಳಿಸಿ, ಪೊದೆಗಳನ್ನು ತೆರವುಗೊಳಿಸಿ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಕಚೇರಿಗೆ ಬಂದು ಹೋಗುವಂತಹ ವಾತಾವರಣ ನಿರ್ಮಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಹಾಗೂ ಬಿಎಸ್‌ಎನ್‌ಎಲ್ ಗ್ರಾಹಕರು ತೀವ್ರವಾಗಿ ಆಗ್ರಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading