ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು 30 ಸಾವಿರ ಭಕ್ತರ ಆಗಮನ

ಸುಬ್ರಹ್ಮಣ್ಯ ಅಕ್ಟೋಬರ್ 03 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಸುಮಾರು ಮೂವತ್ತು ಸಾವಿರದಷ್ಟು ಭಕ್ತರ ಪ್ರವಾಹವೇ ಹರಿದು ಬಂದಿದೆ.

. . . . . . . . .

ಶಾಲೆಗಳಿಗೆ ದಸರಾ ರಜೆ ಆರಂಭವಾದಾಗಿನಿಂದ ಶುಕ್ರವಾರ ಸಂಜೆಯಿಂದಲೇ ಭಕ್ತರು ಶ್ರೀ ಕ್ಷೇತ್ರಕ್ಕೆ ತಂಡವಾಗಿ ಆಗಮಿಸಿದ್ದರು. ಶ್ರೀ ದೇವಳದ ವಸತಿ ಗ್ರಹಗಳೆಲ್ಲ ಭರ್ತಿಯಾಗಿದ್ದು, ಅಲ್ಲದೆ ಖಾಸಗಿ ವಸತಿ ಗ್ರಹಗಳ ಮೊರೆ ಹೋದ ಭಕ್ತರು ರಾತ್ರಿಯ ತಂಗುವಿಕೆಗಾಗಿ ಮಧ್ಯರಾತ್ರಿ ವರೆಗೂ ಹುಡುಗಾಟದಲ್ಲಿ ತೊಡಗಿದ್ದರು. ಶನಿವಾರ ಬೆಳಗ್ಗಿನಿಂದಲೇ ಪವಿತ್ರ ನದಿ ಕುಮಾರಧಾರದಲ್ಲಿ ತೀರ್ಥ ಸ್ಥಾನ ಮಾಡಿದ ಭಕ್ತರು ಮುಖ್ಯರಸ್ತೆಯಿಂದ ರಥಬೀದಿಯಾಗಿ ಶ್ರೀ ದೇವಳಕ್ಕೆ ಆಗಮಿಸಿದ್ದರು. ಈ ದೇವಳದಲ್ಲಿ ಬೆಳಗ್ಗಿನ ಮೂರು ಬ್ಯಾಚ್ ಗಳಲ್ಲಿ ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತರು ತುಂಬಿದ್ದರು. ಸಂಜೆಯ ಬ್ಯಾಚ್ ನಲ್ಲಿ ಕೂಡ ಅಧಿಕ ಸಂಖ್ಯೆಯ ಭಕ್ತರು ಆಶ್ಲೇಷ ಬಲಿ ಸೇವೆ ಸಲ್ಲಿಸಿದರು. ಹಾಗೆಯೇ ಮಧ್ಯಾಹ್ನ ನಾಗಪ್ರತಿಷ್ಠ ಮಂಟಪದಲ್ಲಿ ಚರಗುವ ನಾಗ ಪ್ರತಿಷ್ಠೆ ಪೂಜೆಯಲ್ಲಿ ಭಕ್ತರು ಮಂಟಪದ ಎದುರುಗಡೆ ವರಂಗಣದಲ್ಲಿ ಭಕ್ತರು ಆಸೀನರಾಗಿದ್ದರು.

. . . . . . .

ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಮಾಡಿದ ಭಕ್ತರು ತದನಂತರ ತೀರ್ಥ ಪ್ರಸಾದ ಸ್ವೀಕರಿಸಿ ಮಧ್ಯಾಹ್ನದ ಭೋಜನದ ಸವಿಊಟ ಮಾಡಿದರು. ಶ್ರೀದೇವಳದ ವತಿಯಿಂದ ಭಕ್ತರ ದೇವರ ದರ್ಶನ ತೀರ್ಥ ಪ್ರಸಾದ ಹಾಗೂ ಭೋಜನಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇತ್ತ ಶ್ರೀದೇವಳದ ಸುತ್ತಮುತ್ತ ಇರುವ ವಾಹನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ತುಂಬಿ ತುಳುಕುತ್ತಿದ್ದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ದೂರ ದೂರಗಳಿಂದ ಬರುವ ಭಕ್ತರಿಗೆ ವಿಶೇಷ ಬಸ್ಸಿನ ವ್ಯವಸ್ಥೆಗಳನ್ನು ಕೂಡ ಮಾಡಲಾಗಿತ್ತು. ಮಧ್ಯಾಹ್ನದ ವರೆಗೆ ಮಳೆ ಇಲ್ಲದ ಕಾರಣ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ. ಶ್ರೀ ದೇವಳದ ಅಧಿಕಾರಿಗಳು ,ಸಿಬ್ಬಂದಿ ವರ್ಗದವರು, ಗೃಹರಕ್ಷಕ ದಳದವರು, ಪೊಲೀಸ್ ಸಿಬ್ಬಂದಿಯವರು ಭಕ್ತರ ಸೇವೆಯಲ್ಲಿ ತೊಡಗಿದ್ದರು.

ಶ್ರೀ ದೇವಳದ ವತಿಯಿಂದ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಲು ವ್ಯವಸ್ಥೆ : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎರಡು ಕಡೆಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಭಕ್ತರು ಹಣವನ್ನು ಪಾವತಿಸುವುದರೊಂದಿಗೆ ಬೇರೆ ಬೇರೆ ಸೇವೆಗಳ ರಶೀದಿಗಳನ್ನು ಕೂಡ ಪಡೆದುಕೊಳ್ಳುವ ವ್ಯವಸ್ಥೆ ಕಳೆದೊಂದು ತಿಂಗಳಿಂದ ಜಾರಿ ಬಂದಿರುತ್ತದೆ. ಇದರಿಂದಾಗಿ ಭಕ್ತರು ಸುಲಭದಲ್ಲಿ ತಮ್ಮ ಮೊಬೈಲ್ ಮೂಲಕ ವಿವಿಧ ಸೇವೆಗಳ ರಶೀದಿಗಳನ್ನು ಹಾಗೂ ಹಣ ಪಾವತಿ ಮಾಡಲು ಸಹಕಾರಿಯಾಗಿರುತ್ತದೆ.

ಖಾಯಂ ಸೇವೆ ಹಾಗೂ ಅನ್ನದಾನಕ್ಕಾಗಿ ವಿಶೇಷ ಕೌಂಟರ್ ಸಿದ್ದ : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದೆ ಖಾಯಂಸೇವೆ ಹಾಗೂ ಅನ್ನದಾನ ರಶೀದಿಗಾಗಿ ಬಹಳ ಇಕ್ಕಟ್ಟಿನ ಕೌಂಟರ್ ಗಳಿದ್ದು ಭಕ್ತರು ಪ್ರಯಾಸ ಪಡುವಂತಾಗಿತ್ತು. ಆದರೆ ಇದೀಗ ಈ ದೇವಳದ ಗೋಪುರದ ಬಲ ಭಾಗದಲ್ಲಿ ಅದಕ್ಕೆಂದೇ ವಿಶೇಷ ಕೌಂಟರ್ ಗಳನ್ನು ಸಿದ್ಧತೆ ಮಾಡಲಾಗಿದೆ. ಭಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಶ್ರೀ ದೇವಳದ ಅಧಿಕಾರಿಗಳು ತಿಳಿಸಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading