110 ಕೆ.ವಿ ‘ ಗಿಮಿಕ್’, ಇರೋ 33 ಕೆ.ವಿ. ನಿರ್ವಹಣೆಗೂ ಸಿಬ್ಬಂದಿಗಳಿಲ್ಲದೇ ಹೆಣಗಾಟ : ಕತ್ತಲಿನೆಡೆಗೆ ಸುಳ್ಯದ ಜನತೆ

(ಸುದೀಪ್ ರಾಜ್ ಮುಳ್ಯ) ಸುಳ್ಯ: ಮಲೆನಾಡಿನ ಹೆಬ್ಬಾಗಿಲು ಸುಳ್ಯಕ್ಕೆ ಸುಸಜ್ಜಿತ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂಬ ರಾಜಕಾರಣಿಗಳ ಭರವಸೆ ದಶಕಗಳಿಂದ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದೆ. ಚುನಾವಣೆಗಳು ಬಂದಾಗಲೆಲ್ಲ ರಾಜಕೀಯ ಪಕ್ಷಗಳಿಗೆ ಮತ ಸೆಳೆಯುವ ಪ್ರಮುಖ ‘ಆಹಾರ’ವಾಗುವ 110 ಕೆ.ವಿ ವಿದ್ಯುತ್ ಲೈನ್ ಕಾಮಗಾರಿ ಇಂದಿಗೂ ಆಮೆಗತಿಯಲ್ಲೇ ತೆವಳುತ್ತಿದೆ. ಪ್ರತಿ ಬಾರಿ ಗಡುವು ನೀಡುವುದು, ಬಳಿಕ ಕೈ ಚೆಲ್ಲುವುದು ಇಲ್ಲಿನ ಜನಪ್ರತಿನಿಧಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಇನ್ನೆರಡು ವರ್ಷಗಳಲ್ಲಾದರೂ ಈ 110 ಕೆ.ವಿ ಕಾಮಗಾರಿ ಪೂರ್ಣಗೊಂಡರೆ, ಸುಳ್ಯದ ಮತದಾರರು ಮತ ಹಾಕಿದ್ದಕ್ಕೂ ಕೊಂಚ ಸಾರ್ಥಕವಾದೀತು. ಆದರೆ ಭವಿಷ್ಯದ 110 ಕೆ.ವಿ ಮಾತಿರಲಿ, ಪ್ರಸ್ತುತ ಚಾಲ್ತಿಯಲ್ಲಿರುವ 33 ಕೆ.ವಿ ವಿದ್ಯುತ್ ಮಾರ್ಗವನ್ನೇ ನಿರ್ವಹಣೆ ಮಾಡಲು ಮೆಸ್ಕಾಂ ಬಳಿ ಸಿಬ್ಬಂದಿಯೇ ಇಲ್ಲದಿರುವುದು ಇಲಾಖೆಯ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

. . . . . . . . .


ಮಂಜೂರಾದದ್ದು 92 ಇರೋದು ಕೇವಲ 32 ಮಂದಿ!
ಸುಳ್ಯ ತಾಲೂಕಿನ ಭೌಗೋಳಿಕ ವ್ಯಾಪ್ತಿ ವಿಶಾಲವಾಗಿದ್ದು, ಕಾಡು-ಮೇಡುಗಳ ನಡುವೆಯೇ ವಿದ್ಯುತ್ ತಂತಿಗಳು ಹಾದುಹೋಗಿವೆ. ಇಂತಹ ಸೂಕ್ಷ್ಮ ಪ್ರದೇಶದ ಸಮರ್ಪಕ ನಿರ್ವಹಣೆಗೆ ಸುಳ್ಯ ಉಪವಿಭಾಗದಲ್ಲಿ ಕನಿಷ್ಠ 92 ಲೈನ್‌ಮ್ಯಾನ್ ಹಾಗೂ ನಿರ್ವಹಣಾ ಸಿಬ್ಬಂದಿಗಳ (Lineman / Maintenance Staff) ಹುದ್ದೆಗಳು ಮಂಜೂರಾಗಿವೆ. ಆದರೆ ಕರ್ತವ್ಯದಲ್ಲಿರುವುದು ಕೇವಲ 32 ಮಂದಿ ಮಾತ್ರ! ಬರೋಬ್ಬರಿ 60 ಹುದ್ದೆಗಳು ಖಾಲಿ ಬಿದ್ದಿವೆ. ಮಳೆಗಾಲದ ತುರ್ತು ನಿರ್ವಹಣೆಗಾಗಿ ಕೇವಲ 7 ಮಂದಿ ತಾತ್ಕಾಲಿಕ (Temporary) ಸಿಬ್ಬಂದಿಗಳನ್ನು ನಿಯೋಜಿಸಿ ಮೆಸ್ಕಾಂ ಸುಳ್ಯ ಉಪವಿಭಾಗದ ಜನರಿಗೆ ಬೆಳಕು ನೀಡುವ ನಾಟಕವಾಡುತ್ತಿದೆ. ಗಾಳಿ-ಮಳೆ ಬಂದರೆ ಸಾಕು ಇಡೀ ಊರೇ ಕತ್ತಲಲ್ಲಿ ಮುಳುಗುತ್ತದೆ; ದುರಸ್ತಿ ಮಾಡಲು ಕೇಳಿದರೆ “ಸಿಬ್ಬಂದಿಗಳಿಲ್ಲ” ಎಂಬ ಸಿದ್ಧ ಉತ್ತರ ಸಿಗುತ್ತದೆ.

. . . . . . .

ಸಿಬ್ಬಂದಿ ಕೊರತೆಗೆ ಮೆಸ್ಕಾಂ ಅವೈಜ್ಞಾನಿಕ ನೀತಿಯೇ ಕಾರಣ:
ಸುಳ್ಯದಲ್ಲಿ ಈ ಮಟ್ಟದ ಸಿಬ್ಬಂದಿ ಬರಗಾಲ ಸೃಷ್ಟಿಯಾಗಲು ಮೆಸ್ಕಾಂ ಹಾಗೂ ಸರಕಾರದ ದೂರದೃಷ್ಟಿಯಿಲ್ಲದ ನೀತಿಗಳೇ ನೇರ ಹೊಣೆ, ಸ್ಥಳೀಯರಿಗೆ ಸಿಗದ ಆದ್ಯತೆ: ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡುವ ಯಾವುದೇ ಗಟ್ಟಿ ನಿಯಮವನ್ನು ಮೆಸ್ಕಾಂ ರೂಪಿಸಿಲ್ಲ. ಇದರಿಂದಾಗಿ ದೂರದ ಉತ್ತರ ಕರ್ನಾಟಕ ಅಥವಾ ಬಯಲುಸೀಮೆ ಜಿಲ್ಲೆಗಳ ಅಭ್ಯರ್ಥಿಗಳು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ.
ರಾಜಕೀಯ ಪ್ರಭಾವ ಬಳಸಿ ದೂರದ ಊರುಗಳಿಂದ ಇಲ್ಲಿಗೆ ಬರುವ ನೌಕರರು ಒಂದೆರಡು ವರ್ಷ ಕೆಲಸ ಮಾಡುತ್ತಾರೆ. ಪುನಃ ರಾಜಕೀಯ ಪ್ರಭಾವ ಹಾಗೂ ಸರ್ಕಾರದ ವರ್ಗಾವಣೆ ಸಡಿಲಿಕೆ ನೀತಿಯನ್ನು ಬಳಸಿಕೊಂಡು ತಮ್ಮ ತವರು ಜಿಲ್ಲೆಗಳಿಗೆ ಎತ್ತಂಗಡಿ ಮಾಡಿಸಿಕೊಳ್ಳುತ್ತಾರೆ.

‘ಏರಿಯಾ ಆಯ್ಕೆ’ಯ ಅವಾಂತರ:
ಇತ್ತೀಚಿನ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ತಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು (Area Option) ಇಲಾಖೆಯೇ ಮುಕ್ತ ಅವಕಾಶ ಕಲ್ಪಿಸಿತ್ತು. ಸುಳ್ಯದಲ್ಲಿ ಗುಡ್ಡಗಾಡು ಪ್ರದೇಶ, ಮಳೆ ಹಾಗೂ ಅತಿಯಾದ ಕೆಲಸದ ಒತ್ತಡವಿರುವುದನ್ನು ತಿಳಿದ ಹೊಸಬರು, ಸುಳ್ಯವನ್ನು ತಿರಸ್ಕರಿಸಿ ಆರಾಮವಾಗಿರಬಹುದಾದ ಬಯಲುಸೀಮೆಯ ಬೇರೆ ತಾಲೂಕುಗಳನ್ನು ಆಯ್ದುಕೊಂಡಿದ್ದಾರೆ.


ಕತ್ತಲ ಕೂಪದಲ್ಲಿ ಗ್ರಾಮೀಣ ಭಾಗ :  ಈ ಸುಳ್ಯ  ಹಾಗೂ ಬೆಳ್ಳಾರೆ ಶಾಖೆಯಿಂದ ತಲಾ ಒಬ್ಬರು,  ಅರಂತೋಡು ಶಾಖೆಯಿಂದ ಐವರು ಸಿಬ್ಬಂದಿಗಳು ವರ್ಗಾವಣೆಗೊಂಡಿದ್ದಾರೆ. ಇನ್ನೂ ಅರಂತೋಡು ವ್ಯಾಪ್ತಿಯ ಗ್ರಾಹಕರ ಸಂಕಷ್ಟ ಕೇಳುವವರೇ ಇಲ್ಲ. ಇರುವ ಅಲ್ಪಸ್ವಲ್ಪ ಸಿಬ್ಬಂದಿಯ ಮೇಲೆ ಅತಿಯಾದ ಕೆಲಸದ ಒತ್ತಡ ಬೀಳುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೇ ಗ್ರಾಮೀಣ ಭಾಗಗಳಲ್ಲಿ ಲೈನ್ ತುಂಡಾದರೆ ದಿನಗಟ್ಟಲೆ ಕರೆಂಟ್ ಬರುವುದಿಲ್ಲ. ರೈತರು ಪಂಪ್‌ಸೆಟ್‌ಗಳಿಗೆ ನೀರಿಲ್ಲದೆ ಪರದಾಡುವ, ವಿದ್ಯಾರ್ಥಿಗಳು, ಕಚೇರಿಗಳು ಮತ್ತು ಆಸ್ಪತ್ರೆಗಳು ನಿತ್ಯ ಕತ್ತಲಲ್ಲೇ ಕಳೆಯುವ ದಿನ ಬರಬಹುದು.
ಜನಪ್ರತಿನಿಧಿಗಳು ಕೇವಲ ವೇದಿಕೆಗಳಲ್ಲಿ 110 ಕೆ.ವಿ ಲೈನ್ ಬಗ್ಗೆ ಪೊಳ್ಳು ಭರವಸೆಗಳನ್ನು ಕೊಡುವುದನ್ನು ಬಿಟ್ಟು, ಮೊದಲು ಇರುವ 33 ಕೆ.ವಿ ಲೈನ್‌ನಿಂದ ಗ್ರಾಹಕರಿಗೆ ನಿರಂತರ ವಿದ್ಯುತ್ ಸಿಗುವಂತೆ ಮಾಡಬೇಕಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading