Ad Widget

ಸುಳ್ಯ : ಬಸ್ ಚಾಲಕರ ಪ್ರತಿಭಟನೆ – ಬಿಕೋ ಎನ್ನುತ್ತಿರುವ ಸುಳ್ಯ ಬಸ್ ನಿಲ್ದಾಣ

ಗುತ್ತಿಗೆ ಆಧಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಗೆ ನೇಮಕಗೊಂಡ ಚಾಲಕರಿಗೆ ಜನವರಿ 1 ರಿಂದ ಕೆಲಸ ನಿಲ್ಲಿಸುವಂತೆ ಮೆಸೇಜ್ ಬಂದಿರುವುದರಿಂದ ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಸುಳ್ಯ ಡಿಪೋದ ಎದುರು ಪ್ರತಿಭಟನೆ ನಡೆಸಿದ ಘಟನೆ ಹಾಗೂ ಬಸ್ ಇಲ್ಲದೇ ಪ್ರಯಾಣಿಕರ ಪರದಾಡಿದ ಘಟನೆ ಇಂದು ನಡೆದಿದೆ. ಸುಳ್ಯದಲ್ಲಿ ಕೆಲವೇ ಬಸ್ ಗಳಲ್ಲಿ ಸರಕಾರಿ ನೌಕರರಿದ್ದು ಅವರು ಚಾಲಕರಾಗಿರುವ ಲೈನ್ ಗಳಲ್ಲಿ ಮಾತ್ರ ಬಸ್ ಸಂಚಾರ ನಡೆಸುತ್ತಿದೆ.

ಡಿಪೋ ಎದುರು ಪ್ರತಿಭಟನೆ ನಡೆಸಿದ ಚಾಲಕರು ಮೈಸೂರಿನ ಪನ್ನಗ ಏಜೆಂಟ್ ಸಂಸ್ಥೆಯವರಿಂದ ನಮಗೆ ಅನ್ಯಾಯವಾಗಿದೆ ಎಂದು ನೋವು ತೊಡಿಕೊಂಡರು. ಗುತ್ತಿಗೆ ಪಡೆದ ಸಂಸ್ಥೆ ಏಕಾಏಕಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರವಾಗಿರುವ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಸುಳ್ಯ ಬಸ್ಸು ಡಿಪೋ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರತಿಭಟನಾಕಾರರು ನಮ್ಮನ್ನು ಕೆಲಸಕ್ಕೆ ಕಳುಹಿಸಿರುವ ಪನ್ನಗ ಸಂಸ್ಥೆ ನಮಗೆ ಅನ್ಯಾಯವನ್ನು ಮಾಡಿದೆ. ನಮ್ಮ ಅಗ್ರಿಮೆಂಟಿನಲ್ಲಿ ಇರುವ ರೀತಿಯಲ್ಲಿ ೧೧ ತಿಂಗಳ ಉದ್ಯೋಗವನ್ನು ನೀಡಿ ಇದೀಗ ಏಕಾಏಕಿ ಸೇವಾ ಅವಧಿಯನ್ನು ಕಡಿತಗೊಳಿಸಿ ಡಿಸೆಂಬರ್ ೩೧ರಂದು ಅಂತಿಮಗೊಳಿಸಿರುವ ಬಗ್ಗೆ ನಮಗೆ ತಿಳಿಸಿದ್ದು ಇದರಿಂದ ನಾವು ಸಂಕಷ್ಟಕ್ಕೊಳಗಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ನಮ್ಮನ್ನು ಕೆಲಸಕ್ಕೆ ಸೇರಿಸುವ ಸಂದರ್ಭ ಅದೇ ಸಂಸ್ಥೆಯವರು ೨೫ ರಿಂದ ೩೦ ಸಾವಿರ ರೂ ತನಕ ಹಣವನ್ನು ಪಡೆದು ಏಕಾಏಕಿ ಈ ರೀತಿಯ ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ಹೇಳಿದರು. ನಮ್ಮೊಂದಿಗೆ ಕೆಲಸದಲ್ಲಿರುವ ಸುಮಾರು ಹತ್ತಕ್ಕೂ ಹೆಚ್ಚು ಬಸ್ಸು ಚಾಲಕರು ಕೆಲಸಕ್ಕೆ ಸೇರಿ ಈಗಾಗಲೇ ನಾಲ್ಕು ತಿಂಗಳು ಮಾತ್ರವೇ ಆಗಿದೆ. ಅವರ ಅಗ್ರಿಮೆಂಟ್ ಮುಗಿಯುವ ಮೊದಲೇ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದು ಸರಿಯಲ್ಲ. ನಮಗೆ ಇಲಾಖೆ ತೊಂದರೇ ನೀಡಿಲ್ಲ, ನಮ್ಮನ್ನು ಈ ಕೆಲಸಕ್ಕೆ ಕಳುಹಿಸಿರುವ ಪನ್ನಗ ಸಂಸ್ಥೆಯ ಮೇಲೆ ಆಕ್ರೋಶವಿದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿರುವ ಇಲಾಖೆಯ ಅಧಿಕಾರಿಗಳು ‘ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ರೂಟ್ ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಲಾಗಿದೆ. ಈ ನೇಮಕದ ಅವಧಿ ೧೧ ತಿಂಗಳು ಇರುತ್ತದೆ. ಈ ನೇಮಕಾತಿಯ ಜವಾಬ್ದಾರಿಯನ್ನು ಮೈಸೂರಿನ ಪನ್ನಗ ಎಂಬ ಸಂಸ್ಥೆ ನಡೆಸುತ್ತಿದ್ದು ಸುಳ್ಯ ಡಿಪೋಗೆ ೩೫ ಮಂದಿ ಚಾಲಕರನ್ನು ನೀಡಿದ್ದಾರೆ.
ದ. ೩೦ ರಂದು ರಾತ್ರಿ ಅವರಿಗೆಲ್ಲ ಸಂಸ್ಥೆ ಮೆಸೇಜ್ ಮಾಡಿ ಜನವರಿ ಒಂದರಿಂದ ಕೆಲಸ ನಿಲ್ಲಿಸುವಂತೆ ತಿಳಿಸಿದೆ ಎನ್ನಲಾಗಿದೆ. ಆದರೆ ನಾವು ಚಾಲಕರಲ್ಲಿ ಮನವಿ ಮಾಡಿಕೊಂಡಿದ್ದೇವೆ ಈ ಬಗ್ಗೆ ನಿಮ್ಮಲ್ಲಿ ನಾವು ಚರ್ಚೆ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ನೇಮಿಸಿರುವ ಸಂಸ್ಥೆ ನಮಗೆ ಉತ್ತರವನ್ನು ನೀಡಬೇಕಾಗಿದೆ. ಆದ್ದರಿಂದ ಒಂದೆರಡು ದಿನಗಳಲ್ಲಿ ಸಂಸ್ಥೆಯು ಈ ವಿಷಯದ ಕುರಿತು ತೀರ್ಮಾನವನ್ನು ಕೈಗೊಳ್ಳಬಹುದು.ಆದ್ದರಿಂದ ತಾವೆಲ್ಲರೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ತಮ್ಮ ತಮ್ಮ ರೂಟಿನ ಬಸ್ಸುಗಳನ್ನು ಸಾರ್ವಜನಿಕರ ಸೇವೆಗೆ ಬಳಸಿಕೊಳ್ಳಬೇಕೆಂದು ಕೇಳಿಕೊಂಡಿದ್ದೇವೆ ಎಂದು ಪುತ್ತೂರು ವಿಭಾಗದ ಸೆಕ್ಯೂರಿಟಿ ಆಫೀಸರ್ ಶರತ್ ತಿಳಿಸಿದರು.

ಆದರೆ ಇದಕ್ಕೆ ಒಪ್ಪದ ಚಾಲಕರು ಅತಂತ್ರ ವ್ಯವಸ್ಥೆಯಿಂದ ನಮಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಏನಿದ್ದರೂ ಲಿಖಿತ ಆದೇಶ ಕೊಡಲಿ ಬಳಿಕ ನಾವು ಕೆಲಸಕ್ಕೆ ಬರುತ್ತೇವೆ ಎಂದು ಆಗ್ರಹಿಸಿದರು.
ಸುಳ್ಯ ಡಿಪೋದ ೩೫ ಮಂದಿ ಚಾಲಕರು ದಿಡೀರ್ ಮುಷ್ಕರಕ್ಕೆ ನಿರ್ಧರಿಸಿದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಗೊಂದಲಕ್ಕೀಡಾಗಿ ಆದಷ್ಟು ಚಾಲಕರುಗಳನ್ನು ನೇಮಿಸಿ ರೂಟ್ಗಳಲ್ಲಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದರು. ಆದರೂ ಐದು ರೂಟುಗಳಿಗೆ ಬಸ್ಸುಗಳು ಓಡಾಡಲು ಚಾಲಕರ ಕಡಿಮೆ ಆಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಾಲಕರು ಭಾಗವಹಿಸಿದ್ದರು. ಚಾಲಕರ ಬೇಡಿಕೆ ಸುಳ್ಯದಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಎಲ್ಲಾ ಚಾಲಕರು ಪುತ್ತೂರು ವಿಭಾಗದ ಕಛೇರಿಗೆ ತೆರಳಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!