ಎನ್ನೆಂಸಿ : ಯುವ ರೆಡ್‌ಕ್ರಾಸ್ ಚಟುವಟಿಕೆಗಳಿಗೆ ಚಾಲನೆ – “ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಿ” – ಹೇಮನಾಥ ಕೆ.ವಿ – “ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು ಜಾಗೃತಿ – ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ” : ಎಸ್.ಐ ಉದಯರವಿ

ಸುಳ್ಯ : ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೆ. 26ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ.) ಸುಳ್ಯದ ಕಾರ್ಯದರ್ಶಿ ಹೇಮನಾಥ ಕೆ.ವಿ. ಉದ್ಘಾಟಿಸಿ ಮಾತನಾಡುತ್ತಾ, “ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಯುವ ರೆಡ್‌ಕ್ರಾಸ್ ಘಟಕದ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಲು ಸಹಕಾರಿಯಾಗಲಿ” ಎಂದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ.. ಮಾತನಾಡಿ, “ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ. ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಇತರರಿಗೂ ಮಾದರಿಯಾಗಬೇಕು” ಎಂದು ಹೇಳಿದರು.

ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಎಂ.ವೈ. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ” ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, “ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅನೇಕ ಅಪಘಾತಗಳನ್ನು ತಪ್ಪಿಸಬಹುದು. ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ಮಾದಕ ದ್ರವ್ಯಗಳ ದುಷ್ಪರಿಣಾಮಗಳನ್ನು ಅರಿತುಕೊಂಡು ತಮ್ಮ ಸ್ನೇಹಿತರಲ್ಲಿಯೂ ಜಾಗೃತಿ ಮೂಡಿಸಬೇಕು. ಯುವಜನರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು” ಎಂದು ಕರೆ ನೀಡಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಚಂದ್ರಶೇಖರ ಪೇರಾಲು ಅವರು ಮಾತನಾದುತ್ತಾ, “ರೆಡ್ ಕ್ರಾಸ್ ನಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ, ಹಿರಿಯರು ಕಿರಿಯರಿಗೆ ಮಾದರಿಯಾಗಿರಿ ಎಂದು ಹೇಳುತ್ತಾ ಯುವಕರು ದೇಶದ ಭವಿಷ್ಯವಾಗಿದ್ದು, ತಮ್ಮ ಜವಾಬ್ದಾರಿಗಳನ್ನು ಅರಿತು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು” ಎಂದು ಹೇಳಿದರು.

ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಅಂದು ರೆಡ್ ಕ್ರಾಸ್ ಯುದ್ಧದಲ್ಲಿ ಗಾಯಗೊಂಡವರ ರಕ್ಷಣೆಗಾಗಿ ಹುಟ್ಟಿಕೊಂಡದ್ದಾದರೂ ಅದು ಬೆಳೆದದ್ದು ಮಾನವೀಯ ಸಂಸ್ಥೆಯಾಗಿ. ಇಂದು ವ್ಯಕ್ತಿತ್ವ ವಿಕಸನಕ್ಕೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ” ಎಂದರು.

ಸುಳ್ಯ ಆರಕ್ಷಕ ಠಾಣೆಯ ಪ್ರೊಬೆಷನರಿ ಉಪನಿರೀಕ್ಷಕ ಕೃಷ್ಣ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಧರ್.ವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿನಂದನ್, ಯುವ ರೆಡ್‌ಕ್ರಾಸ್ ಘಟಕದ ನಾಯಕರಾದ ಸೃಜನ್, ಸಿಂಚನ ಮೊದಲಾದವರು ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಸದಸ್ಯರಾದ ಅನ್ಸೀಯ, ಸೌಪರ್ಣಿಕ, ಮೋನಿಷಾ, ನಯನಾ, ಕೃತಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ನಿತೀಶ್ ಸ್ವಾಗತಿಸಿ, ಲಿಯಾ ತಸ್ನೀಮ್ ವಂದಿಸಿದರು. ನಮ್ರತಾ ಮತ್ತು ಮೋನಿಷಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನ ವಿಚರಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading