ಎಸ್ಐಆರ್ ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ನ.13ರಂದು ಎಸ್‌ಕೆಎಸ್‌ಎಸ್‌ಎಫ್ ಪ್ರತಿಭಟನೆ | ಮುಖ್ಯ ಚುನಾವಣಾಧಿಕಾರಿ ರಾಜೀನಾಮೆ ಅಥವಾ ವಜಾಕ್ಕೆ ಆಗ್ರಹ

ಸುಳ್ಯ: ಮತದಾರರ ಪಟ್ಟಿ ಪರಿಷ್ಕರಣೆಯ SIR (Special Intensive Revision) ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ಲೋಪದೋಷಗಳ ವಿರುದ್ಧ ಮತ್ತು ಮುಖ್ಯ ಚುನಾವಣಾಧಿಕಾರಿಯವರ ರಾಜೀನಾಮೆ ಅಥವಾ ವಜಾಕ್ಕೆ ಆಗ್ರಹಿಸಿ ನ.13ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಜೆ 4ಗಂಟೆಗೆ ಪ್ರತಿಭಟನೆ ನಡೆಸಲು SKSSF ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ ಎಂದು ಸುಳ್ಯ ವಲಯ ಉಪಾಧ್ಯಕ್ಷ ಅಹಮ್ಮದ್ ನಹೀಂ ಫೈಜಿ ಮುಕ್ವೆ ತಿಳಿಸಿದರು.

. . . . . . . . .

ನ. 11ರಂದು ಸುಳ್ಯದ ಪತ್ರಿಕಾಭವನದಲ್ಲಿ ಸುಳ್ಯ ವಲಯ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪ್ರಮುಖ ಶಕ್ತಿಯಾಗಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಸಂವಿಧಾನ ಖಾತರಿಪಡಿಸಿದೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಪಟ್ಟಿಯಿಂದ ಕೈಬಿಡಬಾರದು. ಈಗಾಗಲೇ ಹೆಸರು ಕೈಬಿಟ್ಟಿರುವ ಪ್ರಕರಣಗಳ ಕುರಿತು ಪಾರದರ್ಶಕವಾಗಿ ಮರುಪರಿಶೀಲನೆ ನಡೆಸಬೇಕು. SIR ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಲೋಪದೋಷಗಳ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

. . . . . . .

ಮತದಾರರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಾದ ಸಮಯ, ಮಾಹಿತಿ ಹಾಗೂ ಸೂಕ್ತ ಅವಕಾಶ ಕಲ್ಪಿಸಬೇಕು. ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ, ನ್ಯಾಯಸಮ್ಮತವಾಗಿ ಮತ್ತು ಪಕ್ಷಪಾತವಿಲ್ಲದೆ ನಡೆಸಬೇಕು. ಈ ಗಂಭೀರ ಲೋಪದೋಷಗಳಿಗೆ ನೈತಿಕ ಹೊಣೆ ಹೊತ್ತು ಮುಖ್ಯ ಚುನಾವಣಾಧಿಕಾರಿಯವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಹೋರಾಟ ಆಡಳಿತ ನಡೆಸುವ ಸೇವಕರ ವಿರುದ್ಧವಲ್ಲ, ಆಡಳಿತ ಮಾಡುವ ಮಾಲೀಕರ ವಿರುದ್ಧವಾಗಿದೆ. ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧದ ವೈಯಕ್ತಿಕ ಹೋರಾಟವಲ್ಲ. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಹೋರಾಟವಾಗಿದೆ. ಈ ನ್ಯಾಯಯುತ ಹೋರಾಟಕ್ಕೆ ಎಲ್ಲಾ ಪ್ರಜಾಪ್ರಭುತ್ವಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ವಲಯ ಅಧ್ಯಕ್ಷ ಅಕ್ಬರ್ ಕರಾವಳಿ, ಪ್ರಧಾನ ಕಾರ್ಯದರ್ಶಿ ರಫೀಕ್ ಹನೀಫಿ ಅಜ್ಜಾವರ, ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಇ.ಕೆ. ಮೊಯ್ದಿನ್ ಸುಣ್ಣಮೂಲೆ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಖಾದರ್ ಹಾಗೂ ಉಪಾಧ್ಯಕ್ಷ ಅಬೂಬಕರ್ ಪೂಪಿ ಕನಕಮಜಲು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading