ಅ.05ರಂದು ಸುಳ್ಯದಲ್ಲಿ ಜಿಲ್ಲಾ ಮಟ್ಟದ ಗಾಂಧಿ ಸ್ಕೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ದುಶ್ಚಟಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಅಕ್ಟೋಬರ್ 5ರಂದು ಸುಳ್ಯದಲ್ಲಿ ಜಿಲ್ಲಾ ಮಟ್ಟದ ಗಾಂಧಿ ಸ್ಕೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.-2 ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ ಕಳಂಜ ತಿಳಿಸಿದರು.
ಸುಳ್ಯದ ಪತ್ರಿಕಾಭವನದಲ್ಲಿ ಸೆ. 26ರಂದು ಪತ್ರಿಕಾಗೋಷ್ಠಿ ನಡೆಸಿ ಸುಳ್ಯದ ಬೂಡು, ಕೇರ್ಪಳದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.-2 ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ ಕಳಂಜ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಆಶಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. 
ನವಜೀವನ ಸಮಿತಿ ಹಾಗೂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನೆರವೇರಿಸಲಿದ್ದು, ವಿವಿಧ ಅನುದಾನಗಳ ವಿತರಣೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. (IAS), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ, ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ಟ್ರಸ್ಟ್ನ ಜನರಲ್ ಸೆಕ್ರೆಟರಿ ಅಕ್ಷಯ್ ಕೆ.ಸಿ. ಹಾಗೂ ಪುತ್ತೂರು ವಿಭಾಗದ ಪೊಲೀಸ್ ಉಪ ಅಧೀಕ್ಷಕ ಪ್ರಮೋದ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಗೌರವ ಉಪಸ್ಥಿತರಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಎನ್.ಎ. ರಾಮಚಂದ್ರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸುಳ್ಯ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಬಂಟರ ಯಾನೆ ನಾಡವರ ಸಂಘದ ತಾಲೂಕು ಅಧ್ಯಕ್ಷ ಸುಭಾಷ್ ಚಂದ್ರ ರೈ ತೋಟ, ಜನಜಾಗೃತಿ ಪ್ರಾದೇಶಿಕ ವಿಭಾಗ ಧರ್ಮಸ್ಥಳದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಹಾಗೂ ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿಯ ಪ್ರಾದೇಶಿಕ ನಿರ್ದೇಶಕ ಅನಂದ ಸುವರ್ಣ ಉಪಸ್ಥಿತರಿರುವರು.

. . . . . . . . .

33 ವರ್ಷಗಳಿಂದ ದುಶ್ಚಟಮುಕ್ತ ಸಮಾಜಕ್ಕಾಗಿ ಸೇವೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದಲ್ಲಿ ಸುಮಾರು 33 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಜನಜಾಗೃತಿ ವೇದಿಕೆ ಸ್ಥಾಪನೆಯಾಯಿತು. ಪ್ರಸ್ತುತ ರಾಜ್ಯಾದ್ಯಂತ 37 ಜಿಲ್ಲಾ ಹಾಗೂ 16 ತಾಲೂಕು ವೇದಿಕೆಗಳ ಮೂಲಕ 7 ಸಾವಿರಕ್ಕೂ ಅಧಿಕ ಸಕ್ರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ.
ಉಜಿರೆಯ ಲ್ಯಾಲದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಮೂಲಕ ವಿಶೇಷ ಶಿಬಿರಗಳು ಹಾಗೂ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. 1997ರಿಂದ ಇದುವರೆಗೆ ರಾಜ್ಯಾದ್ಯಂತ 2,139 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು, 1,40,983 ಮಂದಿ ವ್ಯಸನಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ವರ್ಷಕ್ಕೆ 173 ಸಮುದಾಯ ಹಾಗೂ ವಿಶೇಷ ಶಿಬಿರಗಳನ್ನು ನಡೆಸಿ ಸುಮಾರು 10 ಸಾವಿರ ವ್ಯಸನಿಗಳ ಮನಪರಿವರ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ವ್ಯಸನಮುಕ್ತರಾದವರಿಗಾಗಿ ನವಜೀವನ ಸಮಿತಿಗಳ ಮೂಲಕ ಸ್ವಸಹಾಯ, ಸ್ವಉದ್ಯೋಗ, ವ್ಯಕ್ತಿತ್ವ ವಿಕಸನ, ಕೃಷಿ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯಾದ್ಯಂತ 3,100ಕ್ಕೂ ಅಧಿಕ ನವಜೀವನ ಸಮಿತಿಗಳ ಮೂಲಕ ಸದಸ್ಯರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ಗಮನಹರಿಸಲಾಗುತ್ತಿದೆ.

. . . . . . .

ದ.ಕ.-2 ಜಿಲ್ಲೆಯಲ್ಲಿ 10,871 ಮಂದಿ ವ್ಯಸನಮುಕ್ತ
ದಕ್ಷಿಣ ಕನ್ನಡ ಜಿಲ್ಲೆ-2ರಲ್ಲಿ ಇದುವರೆಗೆ 149 ಮದ್ಯವರ್ಜನ ಶಿಬಿರಗಳನ್ನು ನಡೆಸಿ 10,871 ಮಂದಿ ಮದ್ಯ ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ. ಜಿಲ್ಲೆಯ 362 ಶಾಲಾ-ಕಾಲೇಜುಗಳಲ್ಲಿ 1,580 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಿ 11,114 ಮಕ್ಕಳಿಗೆ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗಿದೆ.
ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಐದು ತಾಲೂಕುಗಳಲ್ಲಿ 41 ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮಗಳು ಹಾಗೂ 34 ವಿಶ್ವ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ 123 ನವಜೀವನ ಸಮಿತಿಗಳಿದ್ದು, 1,340 ಪಾನಮುಕ್ತ ಸದಸ್ಯರು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಪಾನಮುಕ್ತ ನವಜೀವನ ಸಮಿತಿ ಸದಸ್ಯರೇ ವ್ಯವಸ್ಥಾಪನಾ ಸಮಿತಿ ರಚಿಸಿಕೊಂಡು ಮೂರು ಮದ್ಯವರ್ಜನ ಶಿಬಿರಗಳನ್ನು ನಡೆಸಿರುವುದು ವಿಶೇಷವಾಗಿದೆ.

ಅ.2ರಿಂದ 16ರವರೆಗೆ ರಾಜ್ಯಾದ್ಯಂತ 95 ಕಾರ್ಯಕ್ರಮ
ಗಾಂಧಿ ಜಯಂತಿ ಅಂಗವಾಗಿ ಈ ಬಾರಿ ಅಕ್ಟೋಬರ್ 2ರಿಂದ 16ರವರೆಗೆ ರಾಜ್ಯಾದ್ಯಂತ 95 ಜಿಲ್ಲಾ ಹಾಗೂ ತಾಲೂಕು ಮಟ್ಟದ ಜಾಗೃತಿ ಸಮಾವೇಶ ಮತ್ತು ಜಾಥಾಗಳನ್ನು ಆಯೋಜಿಸಲಾಗಿದೆ. ಜನಪ್ರತಿನಿಧಿಗಳು, ಸರ್ವಧರ್ಮೀಯರು, ಮಠ-ಮಂದಿರಗಳ ಯತಿವರ್ಯರು, ಸಾರ್ವಜನಿಕರು, ನವಜೀವನ ಸದಸ್ಯರು ಹಾಗೂ ಯೋಜನೆಯ ಒಕ್ಕೂಟಗಳ ಬಂಧು-ಮಿತ್ರರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸುಮಾರು 2.5 ಲಕ್ಷಕ್ಕೂ ಅಧಿಕ ಜನಜಾಗೃತಿ ಬಂಧು-ಭಗಿನಿಯರು ‘ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಕೈಜೋಡಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಾಗೃತಿ ಸಭೆ, ಮನೆಭೇಟಿ, ಮದ್ಯವರ್ಜನ ಶಿಬಿರ, ನವಜೀವನ ಸಮಿತಿ, ವ್ಯಸನಮುಕ್ತ ಸಾಧಕರಿಗೆ ಸನ್ಮಾನ, ಗ್ರಾಮ ಸುಭೀಕ್ಷ ಕಾರ್ಯಕ್ರಮ, ಮಹಿಳಾ ಸಮಾವೇಶ ಹಾಗೂ ಹಕ್ಕೊತ್ತಾಯ ಮಂಡನೆ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ವೇದಿಕೆ ಶ್ರಮಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ದುಶ್ಚಟ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿಬಿರಗಳು ಹಾಗೂ ವಿವಿಧ ಚಟುವಟಿಕೆಗಳಿಗೆ ತಾಲೂಕಿಗೆ ₹1.25 ಲಕ್ಷ ಅನುದಾನ ನೀಡಲಾಗುತ್ತಿದ್ದು, ಮಾದಕ ವಸ್ತು ವಿರೋಧಿ ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ, ಪಾನಮುಕ್ತರ ನವಜೀವನೋತ್ಸವ, ಶತದಿನೋತ್ಸವ, ನವಜೀವನ ಸಮಿತಿಗಳ ರಚನೆ ಮತ್ತು ಪುನಶ್ಚೇತನ, ಗಾಂಧಿ ಜಯಂತಿ ಹಾಗೂ ಮನೆಭೇಟಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಎಲ್ಲ ಸದಸ್ಯರು ತಮ್ಮ ವಾಹನಗಳನ್ನು ಚೆನ್ನಕೇಶವ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ. ವೆಂಕಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ, ಸುಳ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಗ್ರಾಮಾಧಿಕಾರಿ ಮಾಧವ ಗೌಡ, ಹರೀಶ್ ರೈ ಉಬರಡ್ಕ, ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading