ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಮಂಗಳೂರು ಇದರ ವತಿಯಿಂದ ‘ಜಾಗೃತಿ ಅರಿವು ಸಪ್ತಾಹ 2020’ ಕಾರ್ಯಕ್ರಮವು ಅ.29 ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಉಪಾಧೀಕ್ಷಕರಾದ ವಿಜಯಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸುಳ್ಯದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು.
ಜಾಗೃತಿ ಅರಿವು ಸಪ್ತಾಹದ ಬಗ್ಗೆ ಉಪಾಧೀಕ್ಷಕರು ಮಾತನಾಡುತ್ತಾ ಭ್ರಷ್ಟಾಚಾರ ನಿರ್ಮೂಲನೆ, ಕಛೇರಿ ಸಭ್ಯತೆ, ಸಮಯ ಪಾಲನೆ, ಅನಗತ್ಯ ಕೆಲಸ ಕಾರ್ಯಗಳ ನಿಯಂತ್ರಣ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ಪೂರ್ಣ ಮಾಹಿತಿ ನೀಡುವುದು, ಕಛೇರಿಗೆ ಆಗಮಿಸುವ ಸಾರ್ವಜನಿಕರಿಗೆ ಅಧಿಕಾರಿಗಳೊಂದಿಗೆ ಮುಕ್ತ ಭೇಟಿಗೆ ಅವಕಾಶ ನೀಡುವುದು, ಅಧಿಕಾರಿ ವರ್ಗದವರು ಯಾವುದೇ ಒತ್ತಾಯ ಹಾಗೂ ಆಮಿಷಗಳಿಗೆ ಮಣಿಯದೆ ಕರ್ತವ್ಯ ನಿರ್ವಹಿಸುವುದು, ವಿನಾಕಾರಣ ಕಡತಗಳನ್ನು ಬಾಕಿ ಉಳಿಸದೆ ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ಹಾಗೂ ಉಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಜಾಗೃತಿ ಅರಿವು ಪ್ರತಿಜ್ಞೆಗೈದರು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ವಿನೋದ್ ಕುಮಾರ್, ನ.ಪಂ. ಮುಖ್ಯಾಧಿಕಾರಿ ಮತ್ತಡಿ ಸೇರಿದಂತೆ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ತಾ.ಪಂ. ಸಿಬ್ಬಂದಿ ಮಹದೇವ್ ಸ್ವಾಗತಿಸಿ ವಂದಿಸಿದರು.