ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಅಗಲಿದ ಮಹಾನ್ ಕಲಾವಿದ ಮೋಹನ ಸೋನರಿಗೆ ರಂಗಗೀತೆ ಗಾಯನ- ನುಡಿ ನಮನ ಕಾರ್ಯಕ್ರಮ ನಡೆಯಿತು.
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ ” ಸೋನಾರ ಸಾವು ಸಾವಲ್ಲ. ಅದು ಬದುಕಿನ ಮುಂದುವರಿಕೆ. ಪಂಪ ರನ್ನ ಕುಮಾರವ್ಯಾಸರಂತೆ ಸೋನ ಕೂಡಾ ಸದಾ ನಮ್ಮೊಂದಿಗಿರುತ್ತಾರೆ. ಸೋನರ ಚಿಂತನೆಯಲ್ಲಿ ಮೂರ್ತ ಸ್ವರೂಪಕ್ಕಿಂತ ಅಮೂರ್ತರೂಪದ ಅಭಿವ್ಯಕ್ತಿಯೇ ಹೆಚ್ಚು ಇರುತ್ತಿತ್ತು. ಕಲೆಯಲ್ಲಿ ಅನ್ವೇಷಣೆ ಮಾಡುತ್ತಾ ಹೊಸತನವನ್ನು ಕಾಣುವ ತುಡಿತ ಅವರಿಗಿತ್ತು. ಸೋನ ಬಣ್ಣಗಳ ಮೂಲಕವೇ ಮಾತಾಡುವ ಒಬ್ಬ ಒಳ್ಳೆಯ ಕಲೆಗಾರ. ಅವರದ್ದೇ ಶೈಲಿಯ ಚಿತ್ರಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ” ಎಂದರು.
ಸೋನರ ನಿಕಟವರ್ತಿ ಕಲಾವಿದ ಎಂ. ಜಿ. ಕಜೆ “ನಿರಂತರ ಮೌನವಾಗಿಯೇ ಧ್ಯಾನದಲ್ಲಿರುವ ಸೋನ ಓರ್ವ ಕಲಾತಪಸ್ವಿ. ಅವರ ಮೌನದೊಳಗೆ ಯಾವುದೋ ಒಂದು ಕಲಾಕೃತಿ ನಿರ್ಮಾಣಗೊಳ್ಳುತ್ತಿತ್ತು” ಎಂದರು.
ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲರು ಮಾತನಾಡಿ “ಸೋನರ ಕೃತಿಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರೆಲ್ಲ ಶಿಷ್ಯಂದಿರು, ಸ್ನೇಹಿತರು ಕೆಲಸ ಮಾಡಬೇಕು” ಎಂದರು.
ರಂಗಕರ್ಮಿ ಐ.ಕೆ.ಬೊಳುವಾರು, ಬಹುವಚನಂನ ಡಾ.ಶ್ರೀಶಕುಮಾರ್, ಪ್ರಾಧ್ಯಾಪಕ ಡಾ.ಎನ್. ಎಸ್. ಗೋವಿಂದ, ಚಿತ್ರಕಲಾ ಶಿಕ್ಷಕರಾದ ಅರುಳಪ್ಪನ್,ಎಂ.ಎಸ್.ಪುರುಷೋತ್ತಮ,ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷೀನಾರಾಯಣ ಕಜೆಗದ್ದೆ,ಉಪನ್ಯಾಸಕ ಕಿಶೋರ್ ಕಿರ್ಲಾಯ, ನ್ಯಾಯವಾದಿ ಶಶಿಧರ ಪುತ್ತೂರು, ಕಲಾವಿದರಾದ ಎಂ. ಎಸ್. ಜಯಪ್ರಕಾಶ್, ನಾಗರಾಜ್ ಮುಳ್ಯ,ಪುತ್ತೂರು ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ, ಪ್ರಾಧ್ಯಾಪಕಿ ಡಾ.ಮೌಲ್ಯ ಜೀವನ್ ಮುಂತಾದವರು ನುಡಿನಮನ ಸಲ್ಲಿಸಿದರು.
ಸೋನರ ನಡುಮನೆ ಒಂದು ಸಜ್ಜನ ಕುಟುಂಬ.ಅವರ ಕಲಾಕೃತಿಗಳನ್ನು ಮತ್ತು ರಂಗ ಸಾಧನೆಯನ್ನು ದಾಖಲಿಸುವ ಒಂದು ಮ್ಯೂಸಿಯಂ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು” ಎಂದು ರಂಗತಜ್ಞ ಜೀವನ್ ರಾಂ ಸುಳ್ಯ ಹೇಳಿದರು.
ರಂಗಮನೆಯ ಸು.ಜ.ನಾ ಸುಳ್ಯ, ಡಾ.ವಿದ್ಯಾ ಶಾರದ,ಮೀನಾ ಕೃಷ್ಣಮೂರ್ತಿ,ಹರೀಶ್ ಉಬರಡ್ಕ,ರವೀಶ್ ಪಡ್ಡಂಬೈಲ್,ಪರ್ತಕರ್ತ ಜಯಪ್ರಕಾಶ್ ಕುಕ್ಕೇಟಿ, ಚಿತ್ರ ಕಲಾವಿದರಾದ ಪ್ರಸನ್ನ ಐವರ್ನಾಡು,ಶ್ರೀಹರಿ ಪೈಂದೋಡಿ,ಉಮೇಶ್ ವಳಲಂಬೆ, ಸೋನರ ಸಹೋದರರಾದ ರುಕ್ಮಯ್ಯ ಗೌಡ,ಗೋಪಾಲ ಕೃಷ್ಣ,ನಮಿತ ನಡುಮನೆ,ಸಹಮತ ಬೊಳುವಾರು, ಶಿಕ್ಷಕಿ ರಾಜೀವಿ ಹರೀಶ್, ಶ್ಯಾಂ ಭಟ್ ಕಲ್ಮಡ್ಕ, ಶ್ರೀಧರ ಮಡಿಯಾರ್ , ಕೆ.ವಿ.ಶರ್ಮ ಬಾಳಿಲ, ಅರೆಭಾಷೆ ಕಲಾವಿದರಾದ ವಿನೋದ್ ಮಂಡಗದ್ದೆ,ಹವಿನ್ ಗುಂಡ್ಯ,ಯತೀನ್ ಚೆಂಬು,ರಾಜ್ ಮುಖೇಶ್ ಮುಂತಾದವರು ಪುಷ್ಪನಮನ ಸಲ್ಲಿಸಿದರು.
ಆರಂಭದಲ್ಲಿ ರಂಗಮನೆಯ ಅರುಂಧತಿ ಕೋಟೆ,ಮನುಜ ನೇಹಿಗ,ಮನ್ವಿತ್ ಪಡ್ಡಂಬೈಲ್, ಕೃತಸ್ವರ ದೀಪ್ತ, ಸೃಜನಾದಿತ್ಯ ಶೀಲ ; ಸುಬ್ರಮಣ್ಯ ಕುಸುಮ ಸಾರಂಗದ ಶರಣ್ಯ ಕಲ್ಮಡ್ಕ,ಶೃತಿ ಮೆದು, ಪುತ್ತೂರು ರಂಗ ದೀಪದ ದೀಕ್ಷಾ, ಧನುಷ್, ವಸಂತಲಕ್ಷ್ಮಿ, ಶಶಿಧರ್ ಇವರಿಂದ ರಂಗಗೀತೆ ಗಾಯನ ನಡೆಯಿತು.