ಸುಳ್ಯದ ಶಾಂತಿನಗರದಲ್ಲಿ ಕಳಗಿ ಹತ್ಯೆ ಆರೋಪಿ ಸಂಪತ್ ಹತ್ಯೆಗೆ ಸಂಬಂಧಿಸಿದಂತೆ ಇಂದು (ಅ.11) ಐವರನ್ನು ಬಂಧಿಸಲಾಗಿದೆ.
ಕೊಲೆಯಾದ ಸಂಪತ್ ,ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನು ಪಡೆದು ಹೊರಗೆ ಬಂದಿದ್ದ. ಅ. 8 ರಂದು ಬೆಳಿಗ್ಗೆ ಸಂಪತ್ ಅವರ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಕಾರನ್ನು ತಿರುಗಿಸುವ ವೇಳೆಗೆ ಕಾರು ಸ್ಕಿಡ್ ಆಗಿ ನಿಂತಿದೆ. ಆ ವೇಳೆ ದುಷ್ಕರ್ಮಿಗಳು ಕಾರಿನ ಗ್ಲಾಸಿಗೆ ಗುಂಡು ಹಾರಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಸಂಪತ್ ಸಮೀದಲ್ಲಿದ್ದ ಪದ್ಮನಾಭ ಎಂಬವರ ಮನೆಗೆ ಓಡಿ ಹೋಗಿದ್ದನು. ಅಲ್ಲಿಗೂ ಬೆನ್ನಟಿ ಬಂದು ತಂಡ ಮನೆಯೊಳಗೆ ಸಂಪತ್ ನನ್ನು ಕೊಂದು ಪರಾರಿಯಾಗಿದ್ದರು.
ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ ಐ ಹರೀಶ್, ಹಾಗೂ ಡಿಸಿಐಬಿ ಪೋಲೀಸರ ಸಹಕಾರದಲ್ಲಿ ಎರಡು ತಂಡಗಳನ್ನು ರಚಿಸಿ ಪ್ರಕರಣದ ತನಿಖೆಗೆ ನಡೆಸಿದ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯದಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಭೇದಿಸಿದ ಪೋಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಕರಣದಲ್ಲಿ ಆರೋಪಿಗಳಾದ ಕಲ್ಲುಗುಂಡಿ ನಿವಾಸಿಗಳಾದ ಸಂಪತ್ ನ ಹಳೆಯ ಸ್ನೇಹಿತ ಮನು(35),ಬಿಪಿನ್(27) ಕಾರ್ತಿಕ್(35), ಮಧು(26) ಹಾಗೂ ಜಾಲ್ಸೂರು ಗ್ರಾಮದ ಶಿಶಿರ್(32) ಬಂಧಿಸಿದ್ದಾರೆ. ಅ.11 ರಂದು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಸುಬ್ರಹ್ಮಣ್ಯ ಬಿಸ್ಲೆ ಘಾಟ್ ರಸ್ತೆಯ ಮುಂಗ್ಲಿಪಾದೆ ಎಂಬಲ್ಲಿ ಕಾರಿನಲ್ಲಿ ತಲೆಮರೆಸಿಕೊಳ್ಳಲು (ಕೆಎ 12 ಎಂ ಎ 4385) ಸ್ವಿಫ್ಟ್ ಕಾರಲ್ಲಿ ತೆರಳುತ್ತಿದ್ದ ವೇಳೆ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈಗಾಗಲೇ ಕೃತ್ಯಕ್ಕೆ ಬಳಸಿರುವ ಕಾಲಿಸ್ ವಾಹನ (ಕೆಎ.19 ಎಂ.ಎಫ್ 0789) ವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೊಲೆ ಮಾಡಲು ಮೂರು ಬಂದೂಕು, ಒಂದು ಕತ್ತಿ ಮತ್ತು ಒಂದು ಚೂರಿಯನ್ನು ಉಪಯೋಗಿಸಿದ್ದಾರೆ ಪ್ರಕರಣದಲ್ಲಿ ಕೊಲೆಯಾದ ಸಂಪತ್ 2019 ನೇ ಸಾಲಿನಲ್ಲಿ ಮಡಿಕೇರಿಯಲ್ಲಿ ನಡೆದ ಕಳಗಿ ಬಾಲಚಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಪ್ರಸ್ತುತ ಜಾಮೀನು ಪಡೆದುಕೊಂಡು ಸುಳ್ಯದ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ . ಆರೋಪಿಗಳು ಕಳಗಿ ಬಾಲಚಂದ್ರ ರವರನ್ನು ಸಂಪತ್ ಕೊಲೆ ಮಾಡಿರುವ ಬಗ್ಗೆ ದ್ವೇಷದಿಂದ ಹೊಂಚು ಹಾಕಿ ಈ ಕೃತ್ಯವನ್ನು ಎಸಗಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ರವರ ನೇತೃತ್ವದಲ್ಲಿ ಪಿ ಎಸ್ ಐ ಹರೀಶ್ ತಂಡ ಹಾಗೂ ಡಿ ಸಿ ಐ ಬಿ ತಂಡ ಪತ್ತೆ ಕಾರ್ಯ ನಡೆಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪೋಲೀಸರು ತಿಳಿಸಿದ್ದಾರೆ.
ಅ.11 ರಂದು ಸಂಜೆ ಅರೋಪಿಗಳನ್ನು ಶಾಂತಿನಗರ ಕ್ಕೆ ಕರೆತಂದು ಗುರುತು ಪತ್ತೆ ಹಚ್ಚುವ ಕಾರ್ಯ ಪೋಲಿಸರು ನಡೆಸಿದ್ದಾರೆ. ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುವ ಸಾಧ್ಯತೆ ಇದೆ. ಆರೋಪಿಗಳು ಬಳಸಿದ ಕ್ವಾಲಿಸ್ ವಾಹನವನ್ನು ಚೊಕ್ಕಾಡಿಯ ಪದ್ಮನಾಭ ಎಂಬವರಿಂದ ತಿಂಗಳ ಹಿಂದೆಯೇ ಪಿಲ್ಮ ಶೂಟಿಂಗ್ ಇದೆ ಎಂದು ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ಅರೋಪಿಗಳು ಸಂಪತ್ ನನ್ನು ತಿಂಗಳ ಹಿಂದೆಯೇ ಕೊಲೆ ನಡೆಸುವ ಸಂಚು ರೂಪಿಸಿರುವುದು ಭಾಸವಾಗಿದೆ. ಆರೋಪಿಗಳು ಬಳಸಿರುವ ಆಯುಧಗಳನ್ನು ಯಾರು ಪೂರೈಸಿದ್ದಾರೆ. ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಯಾರೆಲ್ಲಾ ಕೆಲಸ ನಿರ್ಹಹಿಸಿದ್ದಾರೆ, ಹಣದ ವ್ಯವಹಾರ ಇತ್ತೇ ಎಂದು ಪೋಲೀಸರ ತನಿಖೆಯಿಂದ ಲಭ್ಯವಾಗಬೇಕಿದೆ.