ಕಳೆದ ಕೆಲವು ದಿನಗಳ ಹಿಂದೆ ಜಟ್ಟಿಪಳ್ಳ ಪರಿಸರದಲ್ಲಿ ಡಾ. ಸುಬ್ರಹ್ಮಣ್ಯ ರವರು ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕಲು ಹೊರಟಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಸುಳ್ಯ ತಹಸಿಲ್ದಾರ್ ರಿಗೆ ದೂರನ್ನು ನೀಡಿದರು. ಇದರ ಹಿನ್ನೆಲೆಯಲ್ಲಿ ಸುಳ್ಯ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದ ವೈದ್ಯ ಸುಬ್ರಹ್ಮಣ್ಯ ರವರಿಗೆ ಜಾಗದ ಎಲ್ಲಾ ದಾಖಲೆಪತ್ರಗಳ ಪರಿಶೀಲನೆಯ ವರೆಗೆ ಕಾಯುವಂತೆ ಸೂಚಿಸಿದ್ದರು. ಅದಾದ ನಂತರ ಇಂದು ಬೆಳಿಗ್ಗೆ ವಿವಾದಿತ ಸ್ಥಳ ಎನ್ನಲಾದ ಜಾಗದಲ್ಲಿ ಕೆಲಸದಾಳುಗಳು ಗೇರು ಗಿಡಗಳನ್ನು ನೆಡುವ ಗುಂಡಿಯನ್ನು ನಿರ್ಮಿಸುತ್ತಿದ್ದರು ಎನ್ನಲಾಗಿದೆ.
ಇದೇ ಸ್ಥಳದಲ್ಲಿ ಸ್ಥಳೀಯರಾದ ಜೋಯಪ್ಪ ಎಂಬವರ ಮೂರುವರೆ ಸೆಂಟೋ ಸ್ಥಳ ಕೂಡ ವೈದ್ಯರು ಒತ್ತುವರಿ ಮಾಡಿದ ಸ್ಥಳದಲ್ಲಿ ಸೇರ್ಪಡೆಗೊಳ್ಳುತ್ತದೆ ಎಂದು ಇಂದು ತಹಸೀಲ್ದಾರರಿಗೆ ಮತ್ತೊಮ್ಮೆ ದೂರು ನೀಡಿದರು. ಇದೇ ಸಂದರ್ಭದಲ್ಲಿ ಸುಳ್ಯದಲ್ಲಿ ನಡೆಯುತ್ತಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಉಪವಿಭಾಗಾಧಿಕಾರಿಡಾ.ಯತೀಶ್ ಉಳ್ಳಾಲ್ ರವರು ಬಂದಿದ್ದರು. ಇದೇ ಸಂದರ್ಭದಲ್ಲಿ ವಿಷಯ ತಿಳಿದಿದ್ದ ಉಪವಿಭಾಗಧಿಕಾರಿ ,ಸುಳ್ಯ ತಹಶಿಲ್ದಾರ್ ಅನಂತ್ ಶಂಕರ್, ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್, ಸುಳ್ಯಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಸ್ಥಳಕ್ಕೆ ಬಂದ ವೈದ್ಯ ಸುಬ್ರಮಣ್ಯ ರವರ ಬಳಿ ಪತ್ರಿಕೆಯ ವತಿಯಿಂದ ವಿವರವನ್ನು ಕೇಳಿದಾಗ ಸ್ಥಳದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಯಾವುದೇ ಜಾಗ ಒತ್ತುವರಿ ಮಾಡಲಿಲ್ಲ. ನಮ್ಮ ದಾಖಲೆಯಲ್ಲಿ ಇರುವ ಸ್ಥಳದಲ್ಲಿ ಕೆಲಸ ಆರಂಭಿಸಿದ್ದೇವೆ ಎಂದು ಹೇಳಿದರು