ಪಂಜ: ದೇವಸ್ಥಾನದ ವಿಚಾರವಾಗಿ ಭಕ್ತರು ಮಾಡುತ್ತಿರುವ ಆಗ್ರಹವನ್ನು ರಾಜಕೀಯ ಹಾಗೂ ವಿಷಯಾಂತರಗೊಳಿಸುವ ಹುನ್ನಾರಕ್ಕೆ ಖಂಡನೆ – ಶಂಕರ ಕುಮಾರ್ ಮುಚ್ಚಿಲ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯವೈಖರಿ ಕುರಿತು ಭಕ್ತಾದಿಗಳಲ್ಲಿ ಉಂಟಾಗಿರುವ ಸಂಶಯಗಳಿಗೆ ಸ್ಪಷ್ಟತೆ ನೀಡುವಂತೆ ಭಕ್ತರ ಆಗ್ರಹವನ್ನು ರಾಜಕೀಯಗೊಳಿಸುವ ಹಾಗೂ ಕೆಲವರ ವೈಯಕ್ತಿಕ ವಿಷಯಗಳನ್ನು ವಿಷಯಾಂತರಗೊಳಿಸುವ ಹುನ್ನಾರವನ್ನು ಸೆ. 26ರಂದು ದೇವಸ್ಥಾನದ ಭಕ್ತರಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಂಕರ ಕುಮಾರ್ ಮುಚ್ಚಿಲ ಖಂಡಿಸಿದರು.

. . . . . . . . .

ಅವರು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇವಸ್ಥಾನದ ಆದಾಯ, ನೌಕರರ ವಜಾ, ಅನ್ನಪ್ರಸಾದ ಸೇವೆ, ಒಳಾಂಗಣದ ಛಾವಣಿ ನಿರ್ಮಾಣ, ಅಡಿಕೆ ತೋಟದ ಹರಾಜು ಹಾಗೂ ಬ್ಯಾಂಕ್ ಖಾತೆ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮರ್ಪಕ ಲೆಕ್ಕಾಚಾರ ಮತ್ತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.

. . . . . . .

ಆ.15ರಂದು ನಡೆದ ಭಕ್ತರ ಸಭೆಯಲ್ಲಿ ಲೆಕ್ಕಾಚಾರದಲ್ಲಿ ಸುಮಾರು ₹15–17 ಲಕ್ಷದ ವ್ಯತ್ಯಾಸ ಕಂಡುಬಂದಿದ್ದು, ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದರೂ ಸಮರ್ಪಕವಾಗಿ ನೀಡಲಾಗಿಲ್ಲ ಎಂದು ಅವರು ತಿಳಿಸಿದರು.

“ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿಲ್ಲ; ಲೆಕ್ಕಾಚಾರ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದೇವೆ. ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ವಿಚಾರವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಹೋರಾಟ ಸಂಪೂರ್ಣ ಪಕ್ಷಾತೀತವಾಗಿದೆ” ಎಂದು ಹೇಳಿದರು.

ಸೆ.7ರಿಂದ 12 ದಿನಗಳ ಶಿವ ಪಂಚಾಕ್ಷರಿ ಜಪ ಹಾಗೂ ಸೆ.18ರಂದು ಪೂರ್ವ ನಿಗದಿತ ಕಾಣಿಕೆಯಿನ್ನಿಟ್ಟು ಶತರುದ್ರ ಹಾಗೂ ಸಹಸ್ರಾಧಿಕ ನಾಳಿಕೇರಾಭಿಷೇಕದೊಂದಿಗೆ ಭಕ್ತರ ಸ್ವಯಂಸೇವೆಯಿಂದ ನಡೆಸಲಾಗಿದೆ. ದುರಾದೃಷ್ಟವೆಂಬಂತೆ ಅ ದಿವಸ ಪರಮ ಭಕ್ತ ಅಧ್ಯಕ್ಷರು ಹಾಗೂ ಸಮಿತಿಯ ಉಳಿದ ಸದಸ್ಯರುಗಳು ಗೈರಾದದ್ದು ಸಮಿತಿಯ ಕಾರ್ಯವೈಖರಿಗೆ ಕೈಗನ್ನಡಿಯಾಗಿತ್ತು. ಸಮಗ್ರವಾಗಿ ಈ ಎಲ್ಲಾ ವಿಷಯಗಳಲ್ಲಿಯೂ ತೊಡಗಿಸಿಕೊಂಡವರು ಪಕ್ಷಾತೀತವಾಗಿ ಭಕ್ತಾದಿಗಳೇ ಹೊರತು ಯಾವುದೇ ಕೃಪಾಪೋಷಿತ ಪಕ್ಷದಿಂದ ಆಗಿರುವುದಿಲ್ಲ ಎಂದರು.

“ಅಧ್ಯಕ್ಷರಿಂದ ಸಮರ್ಪಕ ಉತ್ತರ ಸಿಗಲಿಲ್ಲ”; ಲೋಕೇಶ್ ಕಾಪಿಕಟ್ಟೆ

ಅಧ್ಯಕ್ಷರಿಂದ ನಮ್ಮ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದ ನಂಬಿಕೆಯಿಂದ ಈ ಕಾರ್ಯಕ್ಕೆ ಮುಂದಾಗಿಲ್ಲ. ಭಕ್ತರ ಹಿತದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ದೇವಸ್ಥಾನದ ಆದಾಯ ಕಡಿಮೆಯಾಗಿದೆ ಎನ್ನುವುದಾದರೆ, ನೌಕರರ ಸಂಬಳವನ್ನು ಏಕೆ ಹೆಚ್ಚಿಸಲಾಯಿತು? ಒಬ್ಬ ನಾಯಕನ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಂತಹ ಕ್ರಮಗಳು ನಡೆಯಬಾರದು. ದೇವಸ್ಥಾನದಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಯಲಿ. ತನಿಖೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಲೋಕೇಶ್ ಕಾಪಿಕಟ್ಟೆ ಹೇಳಿದರು.

ದೇವಾಲಯದ ವಿಚಾರದಲ್ಲಿ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು; ಚಂದ್ರಶೇಖರ ಶಾಸ್ತ್ರಿ

ದೇವಳದ ಗರ್ಭಗುಡಿಗೆ ಕವಚ ಅಳವಡಿಸುವುದು ಸೇರಿದಂತೆ ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳದೆ, ಸಮಗ್ರವಾಗಿ ಚಿಂತನೆ ನಡೆಸಬೇಕಾಗಿದೆ. ದೇವಾಲಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವ ಬದಲು, ಉತ್ತಮ ಸಲಹೆಗಾರರಾಗಿ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಾದ ಸಲಹೆಗಳನ್ನು ನೀಡಬೇಕು. ಯಾವುದೇ ವಿಷಯದ ಬಗ್ಗೆ ಚರ್ಚಿಸಿ, ಸಾಧಕ–ಬಾಧಕಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.

ಭಕ್ತಾಧಿಗಳ ಪ್ರಶ್ನೆಗಳಿಗೆ ದಾಖಲೆ ಸಹಿತ ಉತ್ತರ ನೀಡಬೇಕು: ಅಂಕುಶ್ ಕುದ್ವ

ದೇವಸ್ಥಾನದ ಆಡಳಿತದ ಬಗ್ಗೆ ಪ್ರಶ್ನೆ ಮಾಡುವುದು ತಪ್ಪೇ? ದೇವಸ್ಥಾನದ ವಿಚಾರವಾಗಿ ಪ್ರಶ್ನಿಸಿದಾಗ ವೈಯಕ್ತಿಕ ವಿಚಾರಗಳ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ದೇವಸ್ಥಾನದ ವಿಷಯ ಬಂದಾಗ ಆ ವಿಚಾರದ ಬಗ್ಗೆ ಮಾತ್ರ ಚರ್ಚೆ ನಡೆಸಬೇಕಿತ್ತು. ದೇವಸ್ಥಾನದ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನೀಡುವಂತೆ ಮನವಿ ಮಾಡಲಾಗಿತ್ತು. ಗೌರವಯುತ ಸ್ಥಾನದಲ್ಲಿರುವವರು ಪ್ರಶ್ನೆಗಳಿಗೆ ಸಮರ್ಪಕ ಹಾಗೂ ಅರ್ಹ ಉತ್ತರ ನೀಡಬೇಕು. ಸಾಧ್ಯವಾದಲ್ಲಿ ಸ್ಪಷ್ಟ ದಾಖಲೆಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಅವರು ಆ ಸ್ಥಾನದಲ್ಲಿ ಅರ್ಹರಲ್ಲ ಎಂದು ಅವರು ಹೇಳಿದರು.

ಸಮಾಜದ ಸ್ವಾಸ್ಥ್ಯ ಕಾಪಾಡಬೇಕು : ನಾರಾಯಣ ಕೃಷ್ಣನಗರ

ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ಇತರರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಭಕ್ತಾದಿಗಳ ಸಭೆ ಎಂದು ಸಭೆ ಕರೆದು, ಪ್ರತಿಭಟನಾ ಸಭೆ ಎಂದು ಉಲ್ಲೇಖಿಸಿರುವುದು ತಪ್ಪು, ಈ ಬಗ್ಗೆ ಸೂಕ್ತ ಮಾಹಿತಿ ಇರಬೇಕು. ದೇವಸ್ಥಾನದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸದೆ, ವಾಸ್ತವಾಂಶಗಳನ್ನು ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಚರ್ಚೆ ನಡೆಸಬೇಕು. ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸಭೆಗೆ ಬಂದವರು ಭಕ್ತರು, ಪಕ್ಷದ ಕಾರ್ಯಕರ್ತರಲ್ಲ: ಶರತ್ ಕುದ್ವ

ಸಭೆಯಲ್ಲಿ ಭಾಗವಹಿಸಿದವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ದೇವಸ್ಥಾನದ ಬಗ್ಗೆ ಕಾಳಜಿ ಹೊಂದಿರುವ ಭಕ್ತರು. ಸುಮಾರು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರನ್ನು ಬಿಜೆಪಿ ಪಕ್ಷದವರು ಎಂದು ಹೇಳಿರುವುದು ಸರಿಯಲ್ಲ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮಧ್ಯದಂಗಡಿಗೆ ತೆರಳುವವ ಸಂಖ್ಯೆ ಹೆಚ್ಚಾಗಿದೆ ಎಂಬ ಹೇಳಿಕೆಯನ್ನು ಗಮನಿಸಬೇಕು. ಭಕ್ತರ ಸಭೆಯನ್ನು ರಾಜಕೀಯಗೊಳಿಸುವ ಬದಲು, ಇಲ್ಲಿ ರಾಜಕೀಯ ಮಾಡುತ್ತಿರುವವರು ಯಾರು ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading