Ad Widget

ಕುಕ್ಕೆಗೆ ಹರಿದು ಬಂದ ಭಕ್ತ ಸಾಗರ : ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರಿಂದ ದೇವರ ದರ್ಶನ

ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರ ಭಕ್ತ ಸಾಗರವೇ ಹರಿದು ಬಂದಿತ್ತು.ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ಜಾತ್ರಾ ಸಮಯಕ್ಕಿಂತಲೂ ಅಧಿಕ ಮಂದಿ ಆದಿತ್ಯವಾರ ಕ್ಷೇತ್ರಕ್ಕೆ ಆಗಮಿಸಿರಬಹುದೆಂದು ಅಂದಾಜಿಸಲಾಗಿದೆ. ಎರಡನೇ ಶನಿವಾರ, ವಾರದ ರಜಾದಿನ, ಕ್ರಿಸ್‌ಮಸ್ ರಜೆಯ ಕಾರಣ ಸೇರಿದಂತೆ ಕ್ಷೇತ್ರದ ಜಾತ್ರೋತ್ಸವ ಸಮಾಪನದ ಪುಣ್ಯ ದಿನವಾದುದರಿಂದ ಕ್ಷೇತ್ರಕ್ಕೆ ಭಕ್ತ ಸಂದೋಹವೇ ಹರಿದು ಬಂದಿತ್ತು.

ರಜಾ ಕಾರಣ:
ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ ರಾತ್ರಿಯಿಂದಲೇ ಭಕ್ತರಾಗಮನ ಆಗುತ್ತಿತ್ತು.ಶನಿವಾರ ಎರಡನೇ ಶನಿವಾರದ ರಜೆ, ಆದಿತ್ಯವಾರ ವಾರದ ರಜೆ ಸೋಮವಾರ ಕ್ರಿಸ್‌ಮಸ್ ನಿಮಿತ್ತ ಸರಕಾರಿ ರಜೆ ಹಾಗೂ ಕ್ರಿಸ್‌ಮಸ್ ನಿಮಿತ್ತ ಒಂದು ವಾರದ ರಜೆಯಿಂದಾಗಿ ಕ್ಷೇತ್ರಕ್ಕೆ ಆದಿತ್ಯವಾರ ಅತ್ಯಧಿಕ ಭಕ್ತರ ಆಗಮನವಾಗಿತ್ತು.ಶನಿವಾರ ಏಕಾದಶಿ ಆಗಿದ್ದರೂ ಭಕ್ತರ ಸಂಖ್ಯೆ ಕಡಿಮೆ ಇರಲಿಲ್ಲ.ಆದರೆ ಆದಿತ್ಯವಾರ ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ಅಲ್ಲದೆ ಶ್ರೀ ದೇವರ ಜಾತ್ರೋತ್ಸವದ ಸಮಾಪನಾ ದಿವಾದುದರಿಂದ ಊರಿನ ಮತ್ತು ಸ್ಥಳೀಯ ಭಕ್ತರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.ಕ್ಷೇತ್ರದಲ್ಲಿ ಭಕ್ತ ಸಾಗರ ಕಂಡು ಬಂದಿದೆ.
ಸ್ಕಂಧ ಬಳಿಯಿಂದ ಸಾಲು:
ಶ್ರೀ ದೇವರ ದರುಶನಕ್ಕಾಗಿ ಸ್ಕಂಧ ವಸತಿ ಗೃಹದ ಬಳಿಯಿಂದ ಭಕ್ತರು ಸರದಿ ಸಾಲಿನಲ್ಲಿ ಸಾಗಿ ಬಂದು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ಮುಂಜಾನೆ ವೇಳೆ ಸರತಿ ಸಾಲು ಕಾರ್ತಿಕೇಯ ಕೃಪಾ ವಸತಿಗೃಹದ ಬಳಿಯಿಂದ ಆರಂಭವಾಗಿತ್ತು. ಸ್ಕಂದ ವಸತಿ ಗೃಹದ ಎದುರು ಶೀಟಿನ ಚಪ್ಪರದ ವ್ಯವಸ್ಥೆ ಮಾಡಿದ್ದರಿಂದ ಹಾಗೂ ಭಕ್ತರು ಸರತಿ ಸಾಲಿನಲ್ಲಿ ಮುನ್ನಡೆಯಲು ದೇವಳದಿಂದ ನೆರಳಿನ ಚಪ್ಪರದ ವ್ಯವಸ್ಥೆ ಮಾಡಿದುದರಿಂದ ಭಕ್ತರಿಗೆ ಹೆಚ್ಚಿನ ಅನುಕೂಲತೆ ಒದಗಿತು.ಶ್ರೀ ದೇವಳದ ಹೊರಾಂಗಣದಲ್ಲಿ ಅಧಿಕ ಸಾಲುಗಳಲ್ಲಿ ಭಕ್ತರು ಶ್ರೀ ದೇವರ ದರುಶನಕ್ಕೆ ತೆರಳಿದರು.ಒಂದೊಮ್ಮೆ ದೇವಳದ ಒಳಾಂಗಣ ಮತ್ತು ಹೊರಾಂಗಣ ಭಕ್ತರಿಂದ ತುಂಬಿದಾಗ ಶ್ರೀ ದೇವಳದ ಹೊರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಸ್ವಲ್ಪ ಸಮಯ ವಿಸ್ರಾಂತಿ ನೀಡಿ ದೇವಳದ ಒಳಗಿನ ಭಕ್ತರು ಹೊರಗೆ ಬಂದ ನಂತರ ಬಿಡುವ ವ್ಯವಸ್ಥೆ ಮಾಡಲಾಯಿತು.

ಸೂಕ್ತ ವ್ಯವಸ್ಥೆ:
ಸರಣಿ ರಜೆಯ ಕಾರಣದಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಶ್ರೀ ದೇವಳದ ಆಡಳಿತ ಮಂಡಳಿಯು ಭಕ್ತರ ಅನುಕೂಲತೆಗೆ ವಿಶೇಷ ವ್ಯವಸ್ಥೆ ಮಾಡಿತ್ತು. ಷಣ್ಮುಖ ಪ್ರಸಾದ ಬೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಬೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿತ್ತು.ಇದರಿಂದಾಗಿ ಭಕ್ತರು ಬೋಜನ ಪ್ರಸಾದ ಸ್ವೀಕರಿಸಲು ವಿಶೇಷ ಅನುಕೂಲತೆ ದೊರಕಿತು.ಇಲ್ಲಿ ಶ್ರೀ ದೇವಳದ ಕಚೇರಿ ಸಿಬ್ಬಂದಿಗಳು, ಇತರ ದೇವಳದ ಇತರ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಭಕ್ತರಿಗೆ ಬೋಜನ ಪ್ರಸಾದ ವಿತರಣಾ ಕಾರ್ಯ ನೆರವೇರಿಸಿದರು.ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳು, ದೇವಳದ ಸಿಬ್ಬಂದಿಗಳು, ಗೃಹ ರಕ್ಷಕ ದಳದವರು ಭಕ್ತರು ಸಾವಕಾಶವಾಗಿ ಸರತಿ ಸಾಲಿನಲ್ಲಿ ಮುನ್ನಡೆದು ಶ್ರೀ ದೇವರ ದರುಶನ ಮಾಡಲು ಅವಕಾಶ ಮಾಡಿಕೊಟ್ಟರು.ಅಲ್ಲದೆ ದೇವಳದ ಸಿಬ್ಬಂದಿಗಳು ಭಕ್ತರಿಗೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ನೀಡಿದರು.ಧ್ವನಿವರ್ಧಕದ ಮೂಲಕ ಭಕ್ತರಿಗೆ ವಿಶೇಷ ಮಾಹಿತಿಯನ್ನು ದೇವಳದಿಂದ ಒದಗಿಸಲಾಗುತ್ತಿತ್ತು.

ಜನವೋ..ಜನ:
ರಜಾ ಸರಣೆಯ ಕಾರಣದಿಂದ ಕ್ಷೇತ್ರದ ತುಂಬೆಲ್ಲ ಜನವೋ ಜನ. ದೇವಸ್ಥಾನದ ಒಳಾಂಗಣ, ಹೊರಾಂಗಣ, ದೇವಳದ ಕಲ್ಯಾಣ ಮಂಟಪ, ರಥಬೀದಿ, ಆದಿಸುಬ್ರಹ್ಮಣ್ಯ, ಕುಮಾರಧಾರ ಮೊದಲಾದೆಡೆ ಭಕ್ತಸಾಗರವೇ ಕಂಡು ಬರುತ್ತಿದೆ.ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.ಅಲ್ಲದೆ ಭಕ್ತರು ಸೇವೆ ನೆರವೇರಿಸಲು ಬೇಕಾದ ಅನುಕೂಲತೆಗಳನ್ನು ಮಾಡಿ ಕೊಡಲಾಯಿತು.

ಹೆಚ್ಚಿನ ಸೇವೆ:
ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇವಾಧಿಗಳನ್ನು ನೆರವೇರಿಸಿದರು.ಆಶ್ಲೇಷಬಲಿ, ನಾಗಪ್ರತಿಷ್ಠೆ, ಶೇಷ ಸೇವೆ, ತುಲಾಭಾರ, ಮಹಾಪೂಜೆ, ನಾಗಪ್ರತಿಷ್ಠೆ, ಶೇಷ ಸೇವೆ, ಕಾರ್ತಿಕ ಪೂಜೆಗಳನ್ನು ಅಧಿಕ ಭಕ್ತರು ನೆರವೇರಿಸಿದರು.ಹೆಚ್ಚಿನ ಭಕ್ತರು ಶ್ರೀ ದೇವರ ದರುಶನಕ್ಕೆ ಬಂದುದರಿಂದ ಸೇವೆಗಳ ಸಂಖ್ಯೆಗಿಂತಲೂ ದರುಶನಕ್ಕೆ ಬಂದ ಭಕ್ತರ ಸಂಖ್ಯೆ ಅಧಿಕವಿತ್ತು.

ವಿದ್ಯಾರ್ಥಿ ಭಕ್ತ ವೃಂದ:
ಇದೇ ಸಂದರ್ಭದಲ್ಲಿ ಪ್ರವಾಸಕ್ಕೆ ಬಂದ ಮಕ್ಕಳ ಸಂಖ್ಯೆಯು ಅಧಿಕವಿದ್ದ ಕಾರಣ ವಿದ್ಯಾರ್ಥಿ ಭಕ್ತರ ಸಂಖ್ಯೆಯೂ ಅಧಿಕವಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಇದ್ದುದರಿಂದ ಮಹಿಳಾ ಭಕ್ತರ ಸಂಖ್ಯೆಯೂ ಅಧಿಕವಿತ್ತು. ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಪ್ರಯಾಣಕರಿಂದ ತುಂಬಿ ತುಳುಕುತ್ತಿತ್ತು.ಕ್ಷೇತ್ರಕ್ಕೆ ಆಗಮಿಸುವ ಮತ್ತು ಕ್ಷೇತ್ರದಿಂದ ತೆರಳುವ ಭಕ್ತರ ಸಂಖ್ಯೆ ಅಧಿಕವಿದ್ದ ಕಾರಣ ಕುಕ್ಕೆಯ ಸರಕಾರಿ ಬಸ್ ನಿಲ್ದಾಣವು ಭಕ್ತರಿಂದ ತುಂಬಿ ತುಳುಕುತ್ತಿತ್ತು.

ತುಂಬಿ ತುಳುಕಿದ ಪಾರ್ಕಿಂಗ್:
ಭಕ್ತರೊಂದಿಗೆ ಅವರನ್ನು ಕರೆತಂದ ವಾಹನಗಳ ಸಂಖ್ಯೆಯು ಅಧಿಕವಾಗಿ ಕ್ಷೇತ್ರದಲ್ಲಿ ಕಂಡು ಬಂದಿತ್ತು.ಈ ಕಾರಣದಿಂದಾಗಿ ಬಿಲದ್ವಾರ ಪಾರ್ಕಿಂಗ್, ಸವಾರಿ ಮಂಟಪ ಪಾರ್ಕಿಂಗ್, ಹನುಮಂತ ಗುಡಿ ಸಮೀಪದ ಪಾರ್ಕಿಂಗ್, ಹಳೆಯ ಅರಣ್ಯ ಇಲಾ ಕಚೇರಿ ಬಳಿಯ ಪಾರ್ಕಿಂಗ್, ಅಕ್ಷರಾ ವಸತಿ ಗೃಹದ ಸಮೀಪದ ಪಾರ್ಕಿಂಗ್, ಪ್ರಾಥಮಿಕ ಶಾಲಾ ಆಟದ ಮೈದಾನ, ಆದಿಸುಬ್ರಹ್ಮಣ್ಯ, ವಾಹನಗಳಿಂದ ತುಂಬಿತ್ತು.ಪಾರ್ಕಿಂಗ್ ಸ್ಥಳ ತುಂಬಿದ ಕಾರಣ ಅನಿವಾರ್ಯವಾಗಿ ಕುಮಾರಧಾರದಿಂದ ಇಂಜಾಡಿ ತನಕ, ಬೈಪಾಸ್ ರಸ್ತೆ, ನೂಚಿಲ ರಸ್ತೆ, ಸರಕಾರಿ ಬಸ್‌ನಿಲ್ದಾಣ ಬಳಿ ರಸ್ತೆ, ಆದಿಸುಬ್ರಹ್ಮಣ್ಯ ರಸ್ತೆ, ದೇವರಗದ್ದೆ ರಸ್ತೆಗಳ ಇಕ್ಕೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಅಧಿಕ ವಾಹನಗಳ ಆಗಮನದಿಂದಾಗಿ ಆಗಾಗ್ಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿತ್ತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!