ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ಮದ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ ವಿವಿಧ ವೈದಿಕ ವಿದಿವಿಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು. ಈ ಮೊದಲು ಪ್ರಾತಃಕಾಲ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿಶೇಷ ಪಂಚಾಮೃತ ಮಹಾಭಿಷೇಕ ನೆರವೇರಿಸಿದರು.ಭಕ್ತರಿಂದ ತನು ಸಮರ್ಪಣೆ: ಪ್ರಧಾನ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಭಕ್ತರು ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್ಎನ್ ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಸೇವೆ ಸಮರ್ಪಣೆ:ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ,ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಊರ ಮತ್ತು ಪರವೂರ ಭಕ್ತರು ನೆರವೇರಿಸಿದರು. ನಾಗರಾಜನ ದರುಶನಕ್ಕೆ ತನು ಹಿಡಿದ ಭಕ್ತರ ಸಾಲು:ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ನಾಗಾರಾಧನೆಯ ಪ್ರಧಾನ ಪುಣ್ಯ ಕ್ಷೇತ್ರವಾದುದರಿಂದ ಶ್ರೀ ಕ್ಷೇತ್ರದಲ್ಲಿ ಭಕ್ತಾಧಿಗಳು ನಾಗರ ಪಂಚಮಿಯ ಪುಣ್ಯ ದಿನ ನಾಗರಾಜನ ದರ್ಶನ ಪಡೆದರು.ಅತ್ಯಧಿಕ ಸಂಖ್ಯೆಯಲ್ಲಿ ಊರ ಭಕ್ತರು ಬೆಳಗ್ಗೆಯಿಂದಲೇ ಭಕ್ತಾಧಿಗಳು ತನು ಸಮರ್ಪಣೆ ಮಾಡಿ ಶ್ರೀ ದೇವರ ಸೇವೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಲ್ಲಿ ಮಾರುದ್ದದ ಸರತಿ ಸಾಲಿನ ಮೂಲಕ ತೆರಳಿ ತನು ಸಮರ್ಪಿಸಿದರು. ದೇವಳದ ಸುತ್ತಲೂ ಹಾಲನ್ನು ಹಿಡಿದು ತೆರಳುವ ಮತ್ತು ತನು ಎರೆದು ಬರುವ ಭಕ್ತಾಧಿಗಳ ಸಂಖ್ಯೆ ಎದ್ದು ಕಾಣುತ್ತಿತ್ತು. ಅಧಿಕ ಸಂಖ್ಯೆಯಲ್ಲಿ ಸ್ಥಳಿಯ ಭಕ್ತರು ಹಾಲು ಎರೆದು ಕೃತಾರ್ಥರಾದರು.
- Thursday
- October 31st, 2024