ಸುಳ್ಯ ನಗರ ಪಂಚಾಯತಿಗೆ ಸಂಬಂಧಿಸಿದ ಗಾಂಧಿನಗರದಲ್ಲಿ ಇರುವ ವಾಣಿಜ್ಯ ಕಟ್ಟಡದ ಮಳಿಗೆಗಳನ್ನು ಬಾಡಿಗೆ ನೀಡಿರುವುದರಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಯ ನಗರದ ಸ್ಥಳೀಯ ನಿವಾಸಿಗಳು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ರವರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರಿನಲ್ಲಿ ಸುಳ್ಯ ನಗರ ಪಂಚಾಯತಿಯ ಗಾಂಧಿನಗರದ ಮೀನುಮಾರುಕಟ್ಟೆ ಕಟ್ಟಡದ ಏಲಂನಲ್ಲಿ ಎಸ್ಸಿ ಎಸ್ಟಿ ವಿಭಾಗದವರಿಗೆ ಮೀಸಲಾಗಿದ್ದು ಈ ಕಟ್ಟಡದ 2 ಮಳಿಗೆಗಳಿಗೆ ಮಾತ್ರ ಲೈಸನ್ಸು ಗಳನ್ನು ಹೊಂದಲಾಗಿದೆ. ಬಾಕಿ ಉಳಿದ ಮಳಿಗೆಗಳಿಗೆ ಲೈಸೆನ್ಸ್ ಪಡೆದಿರುವುದಿಲ್ಲ. ಎಸ್ಸಿಎಸ್ಟಿ ಅವರಿಗೆ ಅಭಿವೃದ್ಧಿ ಸಹಾಯವಾಗಲೆಂದು ನೀಡುವ ಸವಲತ್ತು ಭ್ರಷ್ಟ ಅಧಿಕಾರಿಗಳ ಕೃಪೆಯಿಂದ ಬಾಡಿಗೆಗೆ ಪಡೆದವರು ಒಳ ಬಾಡಿಗೆ ಕೊಟ್ಟು ಪ್ರಸ್ತುತ ವ್ಯಾಪಾರ ನಡೆಸುತ್ತಿರುವವರನ್ನು ದೋಚುತ್ತಿದ್ದಾರೆ. 12500 ರೂಪಾಯಿಗೆ ತಿಂಗಳ ಬಾಡಿಗೆಗೆ ಏಲಂ ಪಡೆದು ಸೀನಪ್ಪ ಎಂಬುವವರು ಅದನ್ನು ಸಾಮಾನ್ಯ ವರ್ಗದವರಿಗೆ ನೀಡಿ ತಿಂಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ದೂರಿರುತ್ತಾರೆ.
ಈ ಬಾಡಿಗೆಯನ್ನು ಪಿಗ್ಮಿ ಸಂಗ್ರಾಹಕರೊಬ್ಬರು ಕಲೆಕ್ಟ್ ಮಾಡುತ್ತಿದ್ದು ಕಟ್ಟಡದ ಇತರ ಮಳಿಗೆಗಳು ಕೂಡ ಈ ರೀತಿಯ ಅವ್ಯವಹಾರಕ್ಕೆ ಒಳಗಾಗಿದೆ. ಮಳಿಗೆಯನ್ನು ಪಡೆದ ಸೀನಪ್ಪ ನವರು ಮೀನು ವ್ಯಾಪಾರ ಮಾಡದೆ ರಿಕ್ಷಾ ಚಲಾಯಿಸುತ್ತಿದ್ದಾರೆ ಎಂದು ಹೇಳಿರುತ್ತಾರೆ. ಈ ವಿಷಯ ನಗರ ಪಂಚಾಯತಿನ ಎಲ್ಲಾ ಅಧಿಕಾರಿಗಳಿಗೂ ಗೊತ್ತಿದ್ದು ಕಾಣದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ದೂರಿನಲ್ಲಿ ಬರೆದಿರುತ್ತಾರೆ. ಇದರಲ್ಲಿ ಸಿಗುವ ತಿಂಗಳ ಬಾಡಿಗೆಯ ಹೆಚ್ಚಿನ ಮೊತ್ತದಲ್ಲಿ ಅಧಿಕಾರಿಗಳು ಕೂಡ ಪಾಲುದಾರರಾಗಿದ್ದಾರೆ. ಎರಡನೆಯ ವ್ಯಕ್ತಿ ಬಾಡಿಗೆ ಹೆಚ್ಚಿಸಿರುವುದರಿಂದ ಜನಸಾಮಾನ್ಯನಿಗೆ ಮೀನು ವ್ಯಾಪಾರ ದವರು ಹೆಚ್ಚಿನ ಬೆಲೆಗೆ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಕೂಡಲೇ ನಗರ ಪಂಚಾಯತ್ ಕಚೇರಿಗೆ ದಾಳಿ ನಡೆಸಿ ಅಲ್ಲಿಯ ಎಲ್ಲಾ ಕಡತಗಳನ್ನು ಪರಿಶೀಲಿಸಿ ಭ್ರಷ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.