ಅ. 8 ರಂದು ರಾತ್ರಿ ಸುರಿದ ಭಾರಿ ಮಳೆಗೆ ಕಲ್ಲುಮುಟ್ಲು ಪರಿಸರದ ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದ ಬರೆ ಕುಸಿತ ಉಂಟಾಗಿ ಮನೆ ಸಂಪೂರ್ಣ ಬೀಳುವ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದ ಮೇರೆಗೆ ಅ.9ರಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯ ಮುಂಭಾಗ ಬರೆ ಕುಸಿತ ಉಂಟಾಗಿ ಯಾವುದೇ ಸಂದರ್ಭದಲ್ಲಿ ಮನೆ ಕುಸಿದು ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮನೆಯಲ್ಲಿರುವ ಕುಟುಂಬಸ್ಥರನ್ನು ಸುಳ್ಯ ಅಂಬಟಡ್ಕದ ಬಳಿಯ ಅಂಬೇಡ್ಕರ್ ಭವನದಲ್ಲಿ ತಂಗಲು ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಇದೀಗ ಎರಡೂವರೆ ತಿಂಗಳು ಕಳೆದರೂ ಮಳೆ ಸಂಪೂರ್ಣವಾಗಿ ನಿಲ್ಲದ ಕಾರಣ ಅಂದು ಅಧಿಕಾರಿಗಳು ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಸುಳ್ಯ ತಹಸೀಲ್ದಾರ್ ಭೇಟಿ ನೀಡಿ ಕುಟುಂಬದ ವಾಸಸ್ಥಳಕ್ಕೆ ಪರ್ಯಾಯ ಮನೆಯನ್ನು ನಿರ್ಮಿಸಲು ಭರವಸೆಯನ್ನು ನೀಡಿದ್ದರು ಎನ್ನಲಾಗಿದೆ. ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರು ಆಗಿಂದಾಗ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಇವರ ಸಮಸ್ಯೆಗಳ ಬಗ್ಗೆ ಆಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆದರೆ ಕಳೆದ ಒಂದು ವಾರ ಮೊದಲು ನಗರ ಪಂಚಾಯತಿನ ಸಿಬ್ಬಂದಿ ಸುದೇವ ಎಂಬುವವರು ರಾತ್ರಿ 9 ಗಂಟೆಗೆ ಇವರು ವಾಸಿಸುತ್ತಿದ್ದ ಅಂಬೇಡ್ಕರ್ ಭವನಕ್ಕೆ ಬಂದು ಈಗಿಂದೀಗಲೇ ಇಲ್ಲಿಂದ ತಮ್ಮ ಮನೆಗೆ ಹೋಗುವಂತೆ ಬೆದರಿಸಿ ಮನೆಯ ಪಾತ್ರೆ ಸಾಮಾನುಗಳನ್ನು ಹೊರಗಡೆ ಬಿಸಾಡಿರುವುದಾಗಿ ಹೇಳಿಕೊಂಡಿರುವ ಇವರು ಅಕ್ಟೋಬರ್ 13 ರಂದು ಸುಳ್ಯ ತಾಲೂಕು ಅಂಬೇಡ್ಕರ್ ಹಿತರಕ್ಷಣಾ ವೇದಿಕೆಯ ಸಂಘಟನೆಯವರಿಗೆ ತಮಗೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟನೆಯವರು ಕೂಡಲೇ ಸ್ಪಂದಿಸಿ ಬಡ ಕುಟುಂಬದ ನಿರಾಶ್ರಿತರಿಗೆ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಹಕರಿಸುವುದನ್ನು ಬಿಟ್ಟು ರಾತ್ರಿ ಸಮಯದಲ್ಲಿ ಬಂದು ಈ ರೀತಿ ಅವರ ಮೇಲೆ ತೊಂದರೆ ನೀಡಿರುವುದು ಸರಿಯಲ್ಲ ಎಂದು ಖಂಡಿಸಿ ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಹಾಗೂ ಈ ಬಡ ಕುಟುಂಬಕ್ಕೆ ಕೂಡಲೇ ವಾಸಿಸಲು ಮನೆ ನಿರ್ಮಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ಹಾಗೂ ಸುಳ್ಯ ತಹಶೀಲ್ದಾರರಿಗೆ ಮನವಿ ನೀಡಿರುತ್ತಾರೆ. ಈ ಘಟನೆಯ ಕುರಿತು ಪತ್ರಿಕೆಯ ವತಿಯಿಂದ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರನ್ನು ಸಂಪರ್ಕಿಸಿದಾಗ ನಮ್ಮ ಸಿಬ್ಬಂದಿ ಇವರಿಗೆ ಕಿರುಕುಳ ನೀಡಿದರೆ ಬಗ್ಗೆ ನಮಗೆ ಮಾಹಿತಿ ಬರಲಿಲ್ಲ. ನಾನು ಇವರಿಗೆ ಕಿರುಕುಳವನ್ನು ನೀಡಲು ಬರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಇಲ್ಲಿಗೆ ಸಂದರ್ಶನ ನೀಡಿ ಇವರಿಗೆ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಗೆ ಪಕ್ಕದ ಬಾತ್ ರೂಮ್ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿ ಕೊಟ್ಟಿರುತ್ತೇನೆ. ಮಳೆ ಕಡಿಮೆಯಾದ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಾವು ಚಿಂತನೆಯನ್ನು ಮಾಡುತ್ತಿದ್ದೇವೆ. ನಮ್ಮ ಸಿಬ್ಬಂದಿ ಅವರು ಇಲ್ಲಿ ಬಂದು ಇವರನ್ನು ಬೆದರಿಸಿರುವ ಘಟನೆ ನಿನ್ನೆ ತಾನೇ ಸಂಘಟನೆಯವರು ದೂರು ನೀಡಿದಾಗ ತಿಳಿದುಬಂದಿದೆ ಎಂದು ಹೇಳಿದರು. ಸುಳ್ಯ ತಾಲೂಕು ಅಂಬೇಡ್ಕರ್ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುಂದರ ಪಾಟಾಜೆ ಪತ್ರಿಕೆಗೆ ಹೇಳಿಕೆಯನ್ನು ನೀಡಿ ಈ ಘಟನೆಯನ್ನು ನಮ್ಮ ಸಂಘಟನೆಯ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ. ಕಿರುಕುಳ ನೀಡಿರುವ ಸುದೇವರವರನ್ನು ಕೂಡಲೇ ನಗರ ಪಂಚಾಯತಿನ ಹುದ್ದೆಯಿಂದ ಹೊರ ಹಾಕಬೇಕು ಹಾಗೂ ಕೂಡಲೇ ಈ ಬಡ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ನನಗೆ ಎರಡು ಪತ್ನಿಯರು ಮತ್ತು ಎರಡು ಸಣ್ಣ ಸಣ್ಣ ಮಕ್ಕಳಿದ್ದು ರಾತ್ರೋರಾತ್ರಿ ಬಂದು ಈ ರೀತಿ ತೊಂದರೆ ನೀಡಿದರೆ ಮಕ್ಕಳನ್ನು ಕರೆದುಕೊಂಡು ನಾನು ಎಲ್ಲಿ ಹೋಗಲಿ ಎಂದು ಮನೆಯ ಯಜಮಾನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಸುದೇವ್ ರನ್ನು ಸಂಪರ್ಕಿಸಿದಾಗ ನನಗೆ ಅಂಬೇಡ್ಕರ್ ಭವನ ಹಾಗೂ ನಗರ ಪಂಚಾಯತಿಗೆ ಸಂಬಂಧಪಟ್ಟ ಕಟ್ಟಡಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ನಾನು ಬೇಟಿ ಮಾಡಿ ಸಮಸ್ಯೆ ಹಾಗೂ ಅಲ್ಲಿನ ಸ್ವಚ್ಛತೆಯ ಬಗ್ಗೆ ನೋಡಿಕೊಳ್ಳುತ್ತೇನೆ. ಅವರು ಹೇಳುವಂತೆ ನಾನು ಯಾವುದೇ ಕಿರುಕುಳ ನೀಡಿಲ್ಲ, ಪಾತ್ರಗಳನ್ನು ಬೀಸಾಡಿಲ್ಲ, ದುರುದ್ದೇಶದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.