ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಲ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದು, ಬಿ.ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದ್ದು, ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ವೈಜ್ಞಾನಿಕ ಮಾಹಿತಿಯೊಂದಿಗೆ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಾಮರ್ಥ್ಯವಿದ್ದರೆ ಮಾತ್ರ ಸೋಂಕಿನ ನಿಯಂತ್ರಣ ಮತ್ತು ನಿರ್ವಹಣೆ ಸುಲಭವಾಗಬಲ್ಲದು ಎಂಬ ಕಾರಣದಿಂದಾಗಿ ಬಿ.ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಇಲಾಖೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಇಲಾಖೆಯನ್ನು ಹಿಂಪಡೆದು ಅದನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಅಲ್ಲದೆ, ಕಾರಜೋಳ ಅವರಿಗೆ ಲೋಕೋಪಯೋಗಿ (ಪಿಡಬ್ಲ್ಯೂಡಿ) ಖಾತೆಯನ್ನು ನೀಡಿದ್ದು, ರಾಮುಲು ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಬಿ.ಶ್ರೀರಾಮುಲು, ಡಾ.ಸುಧಾಕರ್ ಅವರ ಖಾತೆ ಬದಲಾವಣೆ ಕಡತಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶ್ರೀರಾಮುಲು ಅವರಿಗೆ ಆರೋಗ್ಯ ಖಾತೆ ನೀಡಲಾಗಿತ್ತು. ಇದೀಗ ಆ ಖಾತೆಯನ್ನು ಹಿಂಪಡೆದಿದ್ದು, ಅದಕ್ಕಿಂತ ಹೆಚ್ಚು ಮಹತ್ವದ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನೀಡಿದ್ದಾರೆ. ಆದರೆ, ಇದು ಸರಕಾರ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
- Thursday
- November 21st, 2024