ಕಳೆದ 17 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ 167 ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಕೆಲಸಗಾರರನ್ನು ಏಕಾಏಕಿಯಾಗಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ, ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿ ಮಂಗಳೂರಿನ ಅ.14 ರಂದು ಪೂರ್ವಾಹ್ನ 11 ಗಂಟೆಗೆ ಬಿಜೈಯಲ್ಲಿರುವ ಮೆಸ್ಕಾಂ ಕಚೇರಿ ಮುಂಭಾಗ ಇಂಟೆಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಟೆಕ್ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು ಖಂಡನೀಯ. ಅವರಿಗೆ ಮತ್ತೆ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಈ ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಂಟ್ವಾಳ ವಲಯ ಮತ್ತು ಪುತ್ತೂರು ವಲಯಕ್ಕೆ ಸಂಬಂದಿಸಿದಂತೆ 17 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ 167 ಮೀಟರ್ ರೀಡರ್ ಕಾರ್ಮಿಕರು ಇಂದು ಬೀದಿಗೆ ಬರುವಂತಾಗಿದೆ.
ಕೆಲಸ ಕಳೆದುಕೊಂಡ ಮೇಲೆ ಕುಟುಂಬವನ್ನು ನಿರ್ವಹಿಸಲೂ ಕಷ್ಟಕರ ಸ್ಥಿತಿ ಅವರಿಗೆ ಎದುರಾಗಿದೆ. ಅ.1ರಂದು ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಿ 10 ದಿನಗಳೊಳಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದೆವು. ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆಯ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಈ ಹಿಂದೆ ಗುತ್ತಿಗೆ ಪಡೆದ ಯಾವುದೇ ಖಾಸಗಿ ಮಾಲಕರು ಕಾರ್ಮಿಕರಿಗೆ ಅನ್ಯಾಯ ಮಾಡಿಲ್ಲ. ಆದರೆ ಕಳೆದ ಮೂರು ತಿಂಗಳ ಹಿಂದೆ ಬಂಟ್ವಾಳ ವಲಯಕ್ಕೆ ವಿದ್ಯುತ್ ಬಿಲ್ಲನ್ನು ನೀಡುವ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಮೀಟರ್ ರೀಡರ್‌ಗಳಿಗೆ ಅನ್ಯಾಯ ಎಸಗುತ್ತಿದೆ. ಇಲ್ಲಿ ಗುತ್ತಿಗೆ ಪಡೆದ ಸಂಸ್ಥೆಯನ್ನು ತುಮಕೂರಿನಲ್ಲಿ ಬ್ಲ್ಯಾಕ್ ಲಿಸ್ಟ್‌ಗೆ ಹಾಕಲಾಗಿದೆ. ಬ್ಲಾಕ್ ಲಿಸ್ಟ್‌ನಲ್ಲಿರುವ ಸಂಸ್ಥೆಗೆ ಮತ್ತೊಮ್ಮೆ ಗುತ್ತಿಗೆ ನೀಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಆದ್ದರಿಂದ ಟೆಂಡರ್ ರದ್ದು ಮಾಡಿ ಅನ್ಯಾಯವೆಸಗಿದ ಗುತ್ತಿಗೆ ಕಂಪೆನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಿನಕರ ಶೆಟ್ಟಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಯರಾಮ ಬಂಟ್ವಾಳ, ಕರುಣಾಕರ ಬಂಟ್ವಾಳ, ಉದಯ ವಿಟ್ಲ, ಗೋಪಾಲ ವಿಟ್ಲ ಉಪಸ್ಥಿತರಿದ್ದರು.