ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಮಂಡೆಕೋಲು, ಕನಕಮಜಲು ಹಾಗೂ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಆರ್ ಎಸ್ ಎಸ್ ಪ್ರಮುಖರಾದ ಪ್ರಭಾಕರ ಭಟ್ ಶಿಬಿರ ಉದ್ಘಾಟಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ ಚಂದ್ರಶೇಖರ ತಳೂರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಗ್ರಾಮ ವಿಕಾಸ ಸಮಿತಿ ತಾಲೂಕು ಸಂಯೋಜಕ ವಿನೋದ್ ಬೊಳ್ಮಲೆ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಭಾರತ ಸಹಸೇವಾ ಪ್ರಮುಖ್ ನ.ಸೀತಾರಾಮ ಅವರು ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಬಿರದಲ್ಲಿ ಕೃಷಿ ಯಂತ್ರೋಪಕರಣಗಳ ದುರಸ್ತಿ, ವಿದ್ಯುತ್ ಉಪಕರಣಗಳ ದುರಸ್ತಿ(ಗ್ಯಾಸ್ ಸ್ಟವ್, ಗ್ಯಾಸ್ ಗೀಝರ್ ಸಹಿತ), ಪ್ಲಂಬಿಂಗ್, ಇಲೆಕ್ಟ್ರೀಷಿಯನ್, ಫ್ಯಾಷನ್ ಡಿಸೈನಿಂಗ್, ಪುಡ್ ಟೆಕ್ನಾಲಜಿ, ಕೃಷಿ ಕಸಿ ಕಟ್ಟುವುದು, ಜೇನು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣೆ, ಆಡು ಸಾಕಾಣೆ, ಮೊಬೈಲ್ ಫೋನ್ ದುರಸ್ತಿಯ ಬಗ್ಗೆ ಅ.16ರವರೆಗೆ ತರಬೇತಿ ನಡೆಯಲಿದೆ. ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಜಯರಾಮ ಜಾಲ್ಸೂರು ವಂದಿಸಿದರು. ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.