ಸುಳ್ಯದ ಶಾಂತಿನಗರದಲ್ಲಿ ನಡೆದ ಸಂಪತ್ ಕುಮಾರ್ ಕೊಲೆಯ ಜೊತೆಗೆ ಹಳೇ ಮರ್ಡರ್ ಮಿಸ್ಟರಿಯೇ ಹೊರಬಿದ್ದಿದೆ. ಕೊಲೆಗೆ ಸ್ಕೆಚ್ ಹಾಕಿದ್ದು ಮೂವರಾದ್ರೂ ಅದರ ಹಿಂದೆ ಪ್ರಭಾವಿ ಕೈಗಳೇ ಕೈಯಾಡಿಸಿದ್ದವು ಎನ್ನುವ ಗುಮಾನಿ ಕೇಳಿಬರುತ್ತಿದೆ.
ಎರಡು ವರ್ಷಗಳ ಹಿಂದೆ ಅಪಘಾತ ನಡೆಸಿ ಕೊಲೆ ಮಾಡಲಾದ ಕೊಡಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಮುಂದಿನ ಬಾರಿ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದರು. ಸಂಪಾಜೆ, ಮಡಿಕೇರಿ ಭಾಗದಲ್ಲಿ ಪ್ರಭಾವಿಯಾಗಿ ಬೆಳೆದಿದ್ದ ಬಾಲಚಂದ್ರ ಕಳಗಿ ಅವರನ್ನು ಆವತ್ತು ಜೊತೆಗಿದ್ದವರೇ ಕೊಲೆ ಮಾಡಿದ್ದರು. ಕೊಲೆಗೆ ಸ್ಕೆಚ್ ಹಾಕಿದ್ದು ಮೂವರಾದ್ರೂ ಅದರ ಹಿಂದೆ ಪ್ರಭಾವಿ ಕೈಗಳೇ ಕೈಯಾಡಿಸಿದ್ದವು ಎನ್ನುವ ಮಾಹಿತಿ ಹೊರಬಿದ್ದಿದೆ.
2019ರ ಮಾರ್ಚ್ 19ರಂದು ಬೆಳಗ್ಗೆ ಬಾಲಚಂದ್ರ ಕಳಗಿ, ಸ್ನೇಹಿತ ಸಂಪತ್ ಕುಮಾರ್ ಕಾರಿನಲ್ಲೇ ಸಂಪಾಜೆಯಿಂದ ಮಡಿಕೇರಿಗೆ ತೆರಳಿದ್ದರು. ಮಡಿಕೇರಿಗೆ ಹೋಗುವ ಸಂದರ್ಭದಲ್ಲಿ ಮೇಕೇರಿ ಬಳಿ ಬಾಲಚಂದ್ರ ಅವರು ತಮ್ಮ ಓಮ್ನಿ ಕಾರನ್ನು ನಿಲ್ಲಿಸಿದ್ದರು. ಅಲ್ಲಿ ಕಾರು ನಿಲ್ಲಿಸಿ ಸಂಪತ್ ಕಾರಿನಲ್ಲಿ ಮಡಿಕೇರಿ ತೆರಳಿದ್ದರು. ಕಾರ್ಯ ನಿಮಿತ್ತ ತೆರಳಿದ್ದ ಬಾಲಚಂದ್ರ ಕಳಗಿ, ಸಂಜೆ ಹೊತ್ತಿಗೆ ಸಂಪತ್ ಕಾರಿನಲ್ಲಿಯೇ ಹಿಂತಿರುಗಿದ್ದರು. ಅರ್ಧ ದಾರಿಯಲ್ಲಿ ಕಾರಿನಿಂದ ಇಳಿದು ತನ್ನ ಒಮ್ನಿಯಲ್ಲಿ ಬಾಲಚಂದ್ರ ಬರುತ್ತಿದ್ದರು. ಆದರೆ, ಅದಾಗಲೇ ಸಂಪತ್ ಸ್ನೇಹಿತ ಜಯನ್ ಲಾರಿ ಹಿಡಿದು ಕಾದು ಕುಳಿತಿದ್ದ. ಅತ್ತ ಸಂಪತ್ ಕುಮಾರ್ ನೀಡಿದ ಸುಳಿವು ಆಧರಿಸಿ ಲಾರಿಯ ಅಕ್ಸಿಲೇಟರ್ ಅದುಮಿದ್ದ ಜಯನ್, ಶರವೇಗದಲ್ಲಿ ಬರತೊಡಗಿದ್ದ. ಮೇಕೇರಿ ತಿರುವಿನಲ್ಲಿ ಓಮ್ನಿಯಲ್ಲಿ ನಿಧಾನಕ್ಕೆ ಬರುತ್ತಿದ್ದ ಬಾಲಚಂದ್ರ ಕಳಗಿ ಕಾರಿಗೆ ಅಪ್ಪಳಿಸಿದ್ದಾನೆ. ಸಂಪತ್ ಪ್ಲಾನ್ ಸಕ್ಸಸ್ ಆಗಿತ್ತು. ಆಕ್ಸಿಡೆಂಟ್ ಆಗಿ ಬಾಲಚಂದ್ರ ಕಳಗಿ ಸಾವನ್ನಪ್ಪಿದ್ದಾಗಿ ಸಹಜ ಸುದ್ದಿಯಾಗಿತ್ತು. ಆದರೆ, ಬಾಲಚಂದ್ರ ಕಳಗಿಯ ಇತರೇ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅಪಘಾತದ ಬಗ್ಗೆ ಸಂಶಯ ಮೂಡಿತ್ತು. ಬಾಲಚಂದ್ರ ಅವರ ಚಿಕ್ಕಪ್ಪ ರಾಜಾರಾಮ ಕಳಗಿ ಮಡಿಕೇರಿ ಠಾಣೆಯಲ್ಲಿ ಸಂಶಯದ ಮೇರೆಗೆ ದೂರು ದಾಖಲಿಸಿದ್ದರು.
ಬಾಲಚಂದ್ರ ಅನಿರೀಕ್ಷಿತ ಸಾವು ಬಿಜೆಪಿ ನಾಯಕರಿಗೂ ಆಘಾತ ಮೂಡಿಸಿತ್ತು. ಸಹಜವಾಗೇ ಕುತೂಹಲಕ್ಕೀಡಾಗಿದ್ದ ಪ್ರಕರಣದ ತನಿಖೆಗೆ ಅಂದಿನ ಕೊಡಗು ಎಸ್ಪಿ ಡಾ.ಸುಮನ್ ಡಿ ಪೆನ್ನೇಕರ್ ಮುತುವರ್ಜಿ ವಹಿಸಿದ್ದರು. ಡಿವೈಎಸ್ಪಿ ಸುಂದರರಾಜ್ ಮತ್ತು ಗ್ರಾಮಾಂತರ ಸರ್ಕಲ್ ಸಿದ್ದಯ್ಯ ನೇತೃತ್ವದಲ್ಲಿ ತನಿಖೆಗೆ ತಂಡ ರಚನೆಯಾಗಿತ್ತು. ಸಂಶಯದ ಮೇರೆಗೆ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಚಾಲಕನಿಗೆ ಒಂದೂವರೆ ಲಕ್ಷಕ್ಕೆ ಡೀಲ್ !
ಲಾರಿ ಚಾಲಕ ಜಯನ್, ಕೇವಲ ಒಂದೂವರೆ ಲಕ್ಷ ರೂಪಾಯಿ ಪಡೆದು ಅಪಘಾತಕ್ಕೆ ಒಪ್ಪಿಕೊಂಡಿದ್ದ. ತಿರುವಿನಲ್ಲಿ ಆಕ್ಸಿಡೆಂಟ್ ಮಾಡಿದ್ರೆ ಏನೂ ಗೊತ್ತಾಗಲ್ಲ ಎಂದು ಸಂಪತ್ ಕುಮಾರ್ ಹಾಕಿದ್ದ ಸ್ಕೆಚ್ ಆತನಿಗೇ ಮುಳುವಾಗಿತ್ತು. ನಾಲ್ಕೇ ದಿನದಲ್ಲಿ ಪೊಲೀಸರು ಸಂಪತ್ ಕುಮಾರ್ ಮತ್ತು ಆತನಿಗೆ ಹಣದ ನೆರವು ನೀಡಿದ್ದ ಹರಿಪ್ರಸಾದ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಪ್ರಕರಣದ ಬೆನ್ನತ್ತಿ ಹಿಡಿದ ಡಿವೈಎಸ್ಪಿ ಮತ್ತು ತಂಡಕ್ಕೆ ಎಸ್ಪಿ ಸುಮನ್ ಡಿ ಪೆನ್ನೇಕರ್ ಅಂದು ಬಹುಮಾನವನ್ನೂ ಘೋಷಣೆ ಮಾಡಿದ್ದರು.
ದೊಡ್ಡ ಮಟ್ಟದ ಹಣದ ಡೀಲ್ ಆಗಿತ್ತು !
ಏಳೆಂಟು ತಿಂಗಳ ನಂತರ ಜೈಲಿನಿಂದ ಹೊರಬಂದ ಸಂಪತ್ ಕುಮಾರ್ ಸ್ಟೈಲ್ ಚೇಂಜ್ ಆಗಿತ್ತು. ಜೈಲಿನಿಂದ ಹೊರಬಂದ ಗತ್ತಿನ ಜೊತೆಗೆ ಕಾಸಿನ ಬಲವೂ ಸೇರಿಕೊಂಡಿತ್ತು. ಹಠಾತ್ ಹಣ ಮಾಡಿಕೊಂಡಿದ್ದು ಹೇಗೆ ಎನ್ನುವ ಕುತೂಹಲವೂ ಸ್ಥಳೀಯರಿಗೆ ಹುಟ್ಟಿತ್ತು. ಜಾಗ ಖರೀದಿಸಿದ್ದ ಹಾಗೂ ಹೊಸ ಕಾರು ಖರೀದಿಸಿ ತಿರುಗಾಡಿಕೊಂಡಿದ್ದ.
ಒಂದು ಕೊಲೆಯ ಬಳಿಕ ಆರೋಪಿಗಳು ಇಷ್ಟೆಲ್ಲ ಚಿಗುರಿಕೊಂಡಿದ್ದರೆ ಬಾಲಚಂದ್ರ ಕೊಲೆಯ ಡೀಲ್ ನಲ್ಲಿ ದೊಡ್ಡ ಕೈಗಳು ಕೈಯಾಡಿಸಿಲ್ಲ ಎನ್ನಲಾದೀತೇ ?
ಬಾರ್ ಮಾಡಲು ತಡೆದಿದ್ದಕ್ಕೆ ಕೊಲೆ !
ಇನ್ನು ಆವತ್ತು ಪೊಲೀಸರ ವಿಚಾರಣೆಯಲ್ಲಿ ಮಾತ್ರ ಆರೋಪಿಗಳು ನೀಡಿದ್ದ ಉತ್ತರ ಬೇರೆಯದ್ದೇ ಆಗಿತ್ತು. ಹರಿಪ್ರಸಾದ್ ಮತ್ತು ಸಂಪತ್ ಸೇರಿ ಸಂಪಾಜೆಯಲ್ಲಿ ಬಾರ್ ಓಪನ್ ಮಾಡಲು ಬಯಸಿದ್ದರು. ಆನಂತರ ಕಲ್ಲುಗುಂಡಿಯಲ್ಲಿ ಇಸ್ಪೀಟ್ ಕ್ಲಬ್ ಮಾಡೋಕೆ ಪ್ಲಾನ್ ಹಾಕಿದ್ದರು. ಆದರೆ, ಎರಡೂ ಸಂದರ್ಭದಲ್ಲಿ ಬಾಲಚಂದ್ರ ಕಳಗಿ ಅಡ್ಡಬಂದಿದ್ದಕ್ಕಾಗಿ ಕೊಲೆ ನಡೆಸಿದ್ದಾಗಿ ಹೇಳಿಕೊಂಡಿದ್ದರು.