ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಗಂಗಯ್ಯ ಮುಳುಗಾಡು ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಮುಖಂಡ ನಿತ್ಯಾನಂದ ಮುಂಡೋಡಿ ಹಾಗೂ ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್ ನೇತೃತ್ವದಲ್ಲಿ ಮಾತುಕತೆ ನಡೆದು ಚುನಾವಣೆ ನಡೆಸದೇ ಅವಿರೋಧ ಆಯ್ಕೆಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಅದರಂತೆ ನೂತನ ಆಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದರಲ್ಲಿ ಕಾಂಗ್ರೆಸ್ ನ 7 ಮಂದಿ ಹಾಗೂ ಬಿಜೆಪಿಯ 5 ಮಂದಿ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ತನ್ನ ಆಡಳಿತವನ್ನು ಮತ್ತೆ ಉಳಿಸಿಕೊಂಡಿತ್ತು.
ಸಾಮಾನ್ಯ ಕ್ಷೇತ್ರದಿಂದ 7 ನಿರ್ದೇಶಕರು ಆಯ್ಕೆಯಾಗಬೇಕಿತ್ತು. ಆ ಸ್ಥಾನಗಳಿಗೆ ಕಾಂಗ್ರೆಸ್‌ನ ನಿತ್ಯಾನಂದ ಮುಂಡೋಡಿ, ಮಹೇಶ್ ಮುತ್ಲಾಜೆ, ನಾಗೇಶ್ ಪಾರೆಪ್ಪಾಡಿ, ದುರ್ಗಾದಾಸ್ ಮೆತ್ತಡ್ಕ , ಬಿಜೆಪಿಯ ರಘುರಾಮ ಬಾಕಿಲ, ಹರೀಶ ಚಿಲ್ತಡ್ಕ, ಲೊಕೇಶ್ವರ ಡಿ.ಆರ್ ರವರನ್ನು ಹೊರತು ಪಡಿಸಿ ನಾಮಪತ್ರ ಸಲ್ಲಿಸಿದ್ದ ಆನಂದ ದೇವ ಮತ್ತು ಮುಳಿಯ ಕೇಶವ ಭಟ್ ನಾಮಪತ್ರ ಹಿಂತೆಗೆದು ಕೊಂಡರು. ಕಣದಲ್ಲಿ ಉಳಿದ 7 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ. ಜಾತಿ ಕ್ಷೇತ್ರದಿಂದ ಕಾಂಗ್ರೆಸ್‌ನ ವಿಶ್ವನಾಥ ಆಚಳ್ಳಿ, ಪ.ಪಂಗಡ ಕ್ಷೇತ್ರದಿಂದ ಬಿಜೆಪಿಯ ಮಹಾಲಿಂಗ ಬಳ್ಳಕ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗ ಪ್ರವರ್ಗ ಎ ಕ್ಷೇತ್ರದಿಂದ ಕಾಂಗ್ರೆಸ್‌ನ ಕರುಣಾಕರ ಎಚ್, ಪ್ರವರ್ಗ ಬಿ ಕ್ಷೇತ್ರದಿಂದ ಕಾಂಗ್ರೆಸ್‌ನ ಹೊನ್ನಪ್ಪ ಗೌಡ ಚಿರೆಕಲ್, ಮಹಿಳಾ ಕ್ಷೇತ್ರದ ಎರಡು ಸ್ಥಾನಕ್ಕೆ ಕಾಂಗ್ರೆಸ್‌ನ ಶ್ರೀಮತಿ ಶಶಿಕಲಾ ದೇರಪಜ್ಜನ ಮನೆ ಮತ್ತು ಶ್ರೀಮತಿ ಸರೋಜಿನಿ ಮುಳುಗಾಡು, ಸಹಕಾರಿ ಸಂಘದ ಕ್ಷೇತ್ರದಿಂದ ಬಿಜೆಪಿ ಯ ಭರತ್ ನೆಕ್ರಾಜೆ ಹೀಗೆ ಸ್ಥಾನವಿರುವಷ್ಟು ಮಾತ್ರ ನಾಮಪತ್ರ ಹಾಕಿದುದರಿಂದ ಅವರೆಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇಂದು ನಡೆದ ಅಧ್ಯಕ್ಷರ ಆಯ್ಕೆ ವೇಳೆ ನೂತನ ನಿರ್ದೇಶಕರುಗಳಾದ ಮಹೇಶ್ ಮುತ್ಲಾಜೆ, ನಾಗೇಶ್ ಪಾರೆಪ್ಪಾಡಿ, ಭರತ್ ನೆಕ್ರಾಜೆ, ದುರ್ಗಾದಾಸ್ ಮೆತ್ತಡ್ಕ , ರಘುರಾಮ ಬಾಕಿಲ, ಹರೀಶ ಚಿಲ್ತಡ್ಕ, ಲೊಕೇಶ್ವರ ಡಿ.ಆರ್, ವಿಶ್ವನಾಥ ಆಚಳ್ಳಿ, ಮಹಾಲಿಂಗ ಬಳ್ಳಕ, ಕರುಣಾಕರ ಎಚ್, ಹೊನ್ನಪ್ಪ ಗೌಡ ಚಿರೆಕಲ್ಲು, ಶಶಿಕಲಾ ದೇರಪಜ್ಜನ ಮನೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕರುಗಳಾದ ಡಿ.ಎಂ.ರಾಮಣ್ಣ ಗೌಡ, ಜತ್ತಪ್ಪ ಮಾಸ್ತರ್ , ಆನಂದ ದೇವ ಇವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಶಿವಲಿಂಗಯ್ಯ ಚುನಾವಣೆ ನಡೆಸಿಕೊಟ್ಟರು.ಭರತ್ ನೆಕ್ರಾಜೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ವಂದಿಸಿದರು.