ಕೊರೋನಾ ಸೋಂಕು ನಿಯಂತ್ರಿಸುವಲ್ಲಿ, ಮಾರ್ಗಸೂಚಿ ಪಾಲಿಸದವರ ವಿರುದ್ದ ಸರ್ಕಾರ ಘೋಷಿಸಿದ್ದ ದುಬಾರಿ ದಂಡ ವಸೂಲಾತಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಾಸ್ಕ್ ಧರಿಸದವರ ಮೇಲೆ ಹಾಕಲಾಗುತ್ತಿದ್ದ ದಂಡ ಶುಲ್ಕವನ್ನು ಇಳಿಕೆ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆದೇಶಿಸಿದ್ದಾರೆ.
ಈ ಮುಂಚೆ ಮಾಸ್ಕ್ ಧರಿಸದವರ ವಿರುದ್ಧ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 500ರೂ ದಂಡ ವಿಧಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ನಂತರ ಬೆಂಗಳೂರು ನಗರದಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಹಾಗೂ ಪೊಲೀಸರು ಅಕ್ಷರಶಃ ದರೋಡೆಗೆ ಇಳಿದಿದ್ದರು. ರಸ್ತೆಯಲ್ಲಿ ಓಡಾಡುವವರು, ಬೈಕ್ ನಲ್ಲಿ ಪ್ರಯಾಣಿಸುವವರು, ಕೂಲಿ ಕಾರ್ಮಿಕರು, ಅಲೆಮಾರಿಗಳನ್ನು ಹಿಡಿದು ಬಲವಂತದಿಂದ ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದರು. ಈ ದುಬಾರಿ ದಂಡಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದಂಡ ಪ್ರಮಾಣ ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದವರಿಗೆ 250 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲು ಆದೇಶಿಸಿದೆ.
‘ಜೀವ ಮತ್ತು ಜೀವನ’ ಎರಡನ್ನೂ ಸರಿದೂಗಿಸಿಕೊಂಡ ಹೋಗಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಮಾಸ್ಕ್ , ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರ ವಿರೋಧ ಹಾಗೂ ತಜ್ಞರ ಸಲಹೆಯಂತೆ ಈ ದಂಡದ ದರ ಇಳಿಸಲಾಗಿದೆ ಈ ಮೂಲಕ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.