Ad Widget

ಉತ್ತರಪ್ರದೇಶ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ -ಕೊಲೆ ಖಂಡಿಸಿ ಅ.10 ರಂದು ಸುಳ್ಯದಲ್ಲಿ ಬೃಹತ್ ಪ್ರತಿಭಟನೆ

ಉತ್ತರಪ್ರದೇಶ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಕೊಲೆಯನ್ನು ಖಂಡಿಸಿ ಅ.10 ರಂದು ಬೃಹತ್ ಪ್ರತಿಭಟನೆ
ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆಗೈದಿರುವುದನ್ನು ಖಂಡಿಸಿ ಸಮಾನಮನಸ್ಕರ ಸಂಘಟನೆ ವತಿಯಿಂದ ಅ.೧೦ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅ.೬ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆದ ಪ್ರತಿಕಾ ಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದಲಿತ ಸಮುದಾಯದ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ಸಾಮೂಹಿಕ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಿದ್ದು, ದೇಶವೇ ಭಯಭೀತಿಕೊಂಡಿದೆ ಇದರ ಹಿನ್ನಲೆಯಲ್ಲಿ ಕೆಪಿಸಿಸಿ ಆದೇಶದ ಮೇರೆಗೆ ಸಮಾನಮನಸ್ಕರನ್ನು ಸೇರಿಸಿಕೊಂಡು ಹಳ್ಳಿಯಿಂದ ದಿಲ್ಲಿಯವರೆಗೆ ಅನ್ಯಾಯದ ವಿರುದ್ಧದ ಧ್ವನಿಯನ್ನು ತಲುಪಿಸಲು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತೇವೆ. ಆ ದಿನ ಬೆಳಗ್ಗೆ ಹತ್ತು ಗಂಟೆಗೆ ಹಳೆಗೇಟಿನ ಬಸ್‌ನಿಲ್ದಾಣದ ಬಳಿಯಿಂದ ಗಾಂಧಿನಗರದ ಪೆಟ್ರೋಲ್‌ಪಂಪ್‌ನವರೆಗೆ ಕಾಲ್ನಡಿಗೆ ಪ್ರತಿಭಟನಾ ಜಾಥ ಹಮ್ಮಿಕೊಂಡಿದ್ದು, ನಂತರ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ದಲಿತ ಮಹಿಳಾ ಸಮಿತಿಯ ನಾಯಕಿ ಸರಸ್ವತಿ ಬೊಳಿಯಮಜಲು ಈ ಸಂದರ್ಭದಲ್ಲಿ ಮಾತನಾಡಿ ನಾವು ಇನ್ನೂ ಕೂಡಾ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಈ ದೇಶದಲ್ಲಿ ಬದುಕುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾದಿತ್ತು, ದೌರ್ಜನ್ಯಕ್ಕೆ ಕೇವಲ ದಲಿತರು ಮಾತ್ರವಲ್ಲ ದೇಶದ ಪ್ರತಿಯೊಬ್ಬ ಬಡ ಮತ್ತು ರೈತ ಹಾಗೂ ಮಧ್ಯಮ ವರ್ಗದ ಮಹಿಳೆಯರು ಇಂದು ಭಯದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
 ತಾಲೂಕು ಜೆಡಿಎಸ್‌ನ ಅಧ್ಯಕ್ಷ ದಯಾಕರ ಆಳ್ವ ಕುಂಬ್ರ ಮಾತನಾಡಿ ದೇಶವೇ ತಲೆತಗ್ಗಿಸುವ ಹೀನಕೃತ್ಯ ಇದ್ದಾಗಿದ್ದು ಜೆಡಿಎಸ್ ಪಕ್ಷದಿಂದಲೂ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಕಾರ್ಮಿಕ ಮುಖಂಡ ಕೆ.ಪಿ ಜಾನಿ ಮಾತನಾಡಿ ತಲಾತಲಾಂತರದಿಂದ ದಲಿತ ಪಂಗಡದವರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದು, ಇದೀಗ ಉತ್ತರಪ್ರದೇಶದ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವುದಲ್ಲದೇ ಅವರ ಮನೆಯವರಿಗೂ ಮೃತದೇಹವನ್ನು ನೋಡಲು ಅವಕಾಶ ನೀಡದೇ ಅಮಾನುಷವಾಗಿ ಸುಟ್ಟುಹಾಕಿರುವುದು ಖಂಡನೀಯ. ನಾಗರೀಕ ಸಮಾಜದ ಪ್ರಜೆಯಾಗಿ, ಈ ಒಂದು ಪ್ರತಿಭಟನೆಗೆ ನಮ್ಮ ಸಂಘಟನೆಯ ವತಿಯಿಂದ ಸಂಪೂರ್ಣ ಬೆಂಬಲವನ್ನು ನೀಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೇಸ್ ಮುಖಂಡ ಭರತ್ ಮುಂಡೋಡಿ ಮಾತನಾಡಿ ಈ ಅಮಾನುಷ ಕೃತ್ಯಕ್ಕೆ ಉತ್ತರಪ್ರದೇಶದ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕಾಗಿದೆ. ಈ ಕೃತ್ಯದಿಂದ ದೇಶದ ಪ್ರಜಾಪ್ರಭುತ್ವದ ಕಗ್ಗೋಲೆಯನ್ನು ಮಾಡುತ್ತಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಕೊಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಯ ತಾಲೂಕು ದಲಿತ ಸಂಘದ ನಾಯಕ ಆನಂದ ಬೆಳ್ಳಾರೆ ಸ್ವಾಗತಿಸಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ವಂದಿಸಿದರು.
ಈ ಪ್ರತಿಭಟನೆಗೆ ಅಂಬೆಡ್ಕರ್ ಹಿತರಕ್ಷಣಾ ವೇದಿಕೆ, ದಲಿತ ಮಹಿಳಾ ವೇದಿಕೆ, ಕಾರ್ಮಿಕ ಸಂಘಟನೆ, ಸ್ನೇಹ ಸಂಗಮ ಅಟೋ ಚಾಲಕರ ಸಂಘ, ಆದಿ ಕರ್ನಾಟಕ ಸಂಘ, ಅಜಿಲ ಸಮಾಜ ಸೇವಾ ಸಂಘ, ಯುವ ಕಾಂಗ್ರೇಸ್ ಘಟಕ, ಎನ್‌ಎಸ್‌ಯುಐ, ಜೆಡಿಎಸ್, ಮಹಿಳಾ ಕಾಂಗ್ರೇಸ್, ರಬ್ಬರ್ ಕಾರ್ಮಿಕರ ಸಂಘ, ರೈತ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ  ಇನ್ನೂ ಹಲವಾರು ಸ್ಥಳೀಯ ಸಂಘಟನೆಗಳು ಭಾಗವಹಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಟಿ.ಎಂ ಶಹೀದ್, ಸಂಶುದ್ಧೀನ್ ಅರಂಬೂರು, ಮುಸ್ತಾಫ ಹಾಜಿ ಜನತಾ, ಸಿದ್ಧೀಕ್ ಕೊಕ್ಕೋ, ನಗರ ಕಾಂಗ್ರೇಸ್ ಅಧ್ಯಕ್ಷ ಶಶಿಧರ ಎಮ್.ಜೆ, ಸಚಿನ್ ರಾಜ್ ಶೆಟ್ಟಿ ಬೆಳ್ಳಾರೆ, ಭವಾನಿಶಂಕರ ಕಲ್ಮಡ್ಕ, ಸುಜಯಕೃಷ್ಣ, ನಂದರಾಜ್ ಸಂಕೇಶ ಸುಂದರ ಪಾಟಾಜೆ, ರಾಧಾಕೃಷ್ಣ ಅರಂಬೂರು, ವಿಜೇಶ್ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!