ಆಡು ಸಾಕಾಣಿಕೆ ಮಾಡುವ ಯೋಜನೆ ಇದ್ದರೆ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.
ಆಡು ಸಾಕಾಣಿಕೆ ಇಂದು ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಆಡು ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ಜನರು ಕೃಷಿಯ ಜೊತೆಗೆ ಆಡು ಸಾಕಾಣಿಕೆ ಮಾಡುತ್ತಿದ್ದಾರೆ. ಕೆಲವರು ಆಡಿನ ಹಾಲಿಗಾಗಿ ಸಾಕಿದರೆ, ಇನ್ನೂ ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ. ಅದೇನೇ ಇರಲಿ, ಉದ್ಯಮ ಆರಂಭಿಸುವ ಮೊದಲು ಆಡಿನ ಹಾಲಿಗಾಗಿ ಸಾಕಾಣಿಕೆ ಮಾಡುತ್ತಿದ್ದರೆ ಯಾವ ಆಡಿನ ತಳಿ ಉತ್ತಮ. ಮಾಸಂಕ್ಕಾಗಿ ಆಡು ಸಾಕುತ್ತಿದ್ದರೆ ಅದಕ್ಕೆ ಯಾವ ತಳಿ ಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಆಡು ಸಾಕಾಣಿಕೆಯಿಂದಾಗಿ ಆಡುಗಳನ್ನು ಒಂದೇ ವರ್ಷಕ್ಕೆ ಮಾರಾಟ ಮಾಡಿದರೂ ಲಾಭ ಗಳಿಸಬಹುದು. ಇದರೊಂದಿಗೆ ಆಡಿನ ಹಾಲು, ಗೊಬ್ಬರಕ್ಕೂ ಉತ್ತಮ ಬೇಡಿಕೆಯಿದೆ. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದ್ದು, ಒಂದು ಸಮತೋಲನ ಆಹಾರದ ಮೂಲವಾಗಿದೆ. ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.
ಮೇಕೆ (ಆಡು) ಗೊಬ್ಬರಕ್ಕೂ ಉತ್ತಮ ದರವಿದೆ. ಮೇಕೆಗಳ ತೂಕ ಹೆಚ್ಚು ಬರುವುದರಿಂದ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ನಿರ್ವಹಣೆ ವೆಚ್ಚವೂ ಕಡಿಮೆ.
ಆಡು ವರ್ಷಕ್ಕೆ ಎರಡು ಸಲ ಕನಿಷ್ಟ ನಾಲ್ಕು ಮರಿಯಾದರೂ ಸಿಗುತ್ತವೆ. ಇದನ್ನು ಆರು ತಿಂಗಳ ಚೆನ್ನಾಗಿ ಸಾಗಾಣಿಕೆ ಮಾಡುವುದರಿಂದ ಹಾಕಿದ ಖರ್ಚಿಗಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚಿನ ಆದಾಯ ಪಡೆಯಬಹುದು. ಬೆಳದ ಆಡುಗಳು 15-20 ಸಾವಿರವರೆಗೂ ಮಾರಾಟ ಮಾಡಬಹುದು. ಇದರಿಂದ ವರ್ಷ ಪೂರ್ತಿಯಾಗಿ ಕೈಯಲ್ಲಿ ಹಣ ಒಡಾಡಿಕೊಂಡಿರುತ್ತದೆ.
ಮೇಕೆ ಸಾಕಣೆಗಾಗಿ 30×60 ಅಡಿ ಅಳತೆಯ ಶೆಡ್ ಅನ್ನು ಸೂಕ್ತ ಗಾಳಿ, ಬೆಳಕು ಬರುವಂತೆ ನಿರ್ಮಿಸಬೇಕು. ಮೇಕೆ ಸಾಕಣೆಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ಅಗತ್ಯ. ಈ ನಿಟ್ಟಿನಲ್ಲಿ ಭೂಮಿಯಿಂದ ಸುಮಾರು 14 ಅಡಿಗಳಷ್ಟು ಎತ್ತರಲ್ಲಿ ಶೆಡ್ ನಿರ್ಮಿಸಿ ಮೇಕೆಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಾಕಣೆ ಮಾಡುವುದು ಅತೀ ಉತ್ತಮ. ಇದರಲ್ಲಿ ಆಡುಗಳಿಗೆ ಸ್ವಚ್ಛ ಮೇವು ಹಾಗೂ ನೀರು ಇಡಲು ಗೋದಲಿಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಆಡುಗಳಿಗೆ ವೇಳೆ ವೇಳೆಗೆ ಸರಿಯಾದ ಆಹಾರ ನೀಡಿದಲ್ಲಿ ಸಮರ್ಪಕವಾದ ನಿರ್ವಹಣೆ ಮಾಡಲೂ ಸಾಧ್ಯ. ಕಟ್ಟಿ ಮೇಯಿಸುವುದರಿಂದ ನಿರ್ದಿಷ್ಟ ವೇಳೆಗೆ ಸರಿಯಾದ ಪ್ರಮಾಣದಲ್ಲಿ ಮೇವನ್ನು ಹಾಕಲು ಸಾಧ್ಯವಾಗುತ್ತದೆ.
ಕರ್ನಾಟಕದಲ್ಲಿ ಸೂಕ್ತವಾದ ಆಡು ತಳಿಗಳು:
ಕರ್ನಾಟಕದಲ್ಲಿ ಹೆಚ್ಚಾಗಿ ಜಮುನಾಪಾರಿ, ಸುರ್ತಿ,ಉಸ್ಮಾನಾಬಾದಿ, ಬೀಟಲ್, ಮಲಬಾರಿ, ಬಾರ್ ಬಾರಿ ತಳಿಯ ಆಡುಗಳನ್ನು ಸಾಕಲಾಗುತ್ತಿದೆ.
ಜಮುನಾಪಾರಿ:
ಈ ಆಡಿನ ಜನ್ಮ ಉತ್ತರ ಪ್ರದೇಶ ರಾಜ್ಯವಾಗಿದು, ಇದು ಉತ್ತಮ ಹಾಲಿನ ತಳಿಗೆ ಹೆಸರುವಾಸಿಯಾಗಿದೆ. ಈ ಆಡು ಒಂದು ಸಾರಿಗೆ 2-3 ಮರಿಗಳನ್ನು ಹಾಕುತ್ತದೆ. ಇದು ದಿನಕ್ಕೆ ಸರಾಸರಿ 1.5-2.0 ಲೀಟರ್ ಹಾಲು ಕೊಡುತ್ತದೆ. ಇದರ ಹಾಲು ಸುಮಾರು 5-6% ಕೊಬ್ಬಿನಾಂಶ ಹೊಂದಿರುತ್ತದೆ.
ಸುರ್ತಿ:
ಈ ಆಡಿನ ಜನ್ಮ ಗುಜರಾತ್ ರಾಜ್ಯದ ಸೂರತ್ ಆಗಿದ್ದು ಇವು ಉತ್ತಮ ಹಾಲಿನ ತಳಿಗೆ ಹೆಸರುವಾಸಿಯಾಗಿದೆ. ಇದು ದಿನಕ್ಕೆ ಸರಾಸರಿ 2.0-2.25 ಲೀಟರ್ ಹಾಲು ಕೊಡುತ್ತದೆ. ಸುಮಾರು 50-60% ರಷ್ಟು ಒಂದು ಸಾರಿಗೆ 2 ಮರಿಗಳನ್ನು ಹಾಕುತ್ತದೆ.
ಬೀಟಲ್:
ಈ ಆಡುಗಳು ದಿನಕ್ಕೆ 1 ಲೀಟರ್ ಹಾಲು ಕೊಡುತ್ತವೆ. ಈ ಆಡಿಗೆ ಕಣ್ಣುಗುಡ್ಡೆಯ ಸುತ್ತಲೂ ಬಿಳಿಯ ಅಥವಾ ಕಂದು ಬಣ್ಣದ ರೇಖೆಗಳಿರುತ್ತವೆ. ಕಿವಿ ಉದ್ದವಿದ್ದು ಕೆಳಗೆ ಜೋತುಬಿದ್ದಿರುತ್ತವೆ.ಮುಖವು ಉಬ್ಬಿಕೊಂಡು ಬಾಗಿರುತ್ತದೆ. ಗಂಡು ಆಡುಗಳಿಗೆ (ಹೋತ) ಗದ್ದದ ಕೆಳಗೆ ಗೊಂಚಲ ಗಡ್ಡ ಬೆಳೆದಿರುತ್ತದೆ.
ಉಸಮನಾಬಾದಿ:
ಈ ಆಡಿನ ಜನ್ಮ ಮಹಾರಾಷ್ಟ ರಾಜ್ಯದ ಉಸಮಾನಾಬಾದ್ ಆಗಿದ್ದು ಇವುಗಳನ್ನು ಕರ್ನಾಟಕದ ಕೇಲವು ಭಾಗಗಳಲ್ಲಿ ಕಂಡು ಬರುತ್ತವೆ.ಇದು ಒಂದು ದಿನಕ್ಕೆ ಸರಾಸರಿ 2 ರಿಂದ 2.5 ಲೀಟರ್ ಹಾಲನ್ನು ಕೊಡುತ್ತದೆ.
ಮಲಬಾರಿ:
ದಾಡಿ ಇರುವುದು ಇವುಗಳಲ್ಲಿ ವಿಶೇಷ. ಸುರುಳಿಯಂತಿರುವ ಚಿಕ್ಕ ಕೋಡುಗಳು, ದುಂಡಾದ ಚಿಕ್ಕ ಕೆಚ್ಚಲು ಇರುತ್ತದೆ. ದಿನಕ್ಕೆ ಸರಾಸರಿ 3 ಲೀಟರ್ ಹಾಲು ಕೊಡುತ್ತವೆ. ಇವು ಹಾಲು ಮತ್ತು ಮಾಸೋತ್ಪಾದನೆಯ ಉಭಯ ಉದ್ದೇಶಗಳಿಗೆ ಸೂಕ್ತವಾದ ತಳಿಗಳು.
ಬಾರ್ ಬಾರಿ:
ಈ ಆಡುಗಳಲ್ಲಿ ಕಂಡುಬರುವ ವಿಶೇಷ ಗುಣವೆಂದರೆ, ಇವುಗಳನ್ನು ಹೊರಗೆ ಮೇಯಲು ಬಿಡದೆ ಮನೆಯಲ್ಲಿಯೇ ತಿಂಡಿ, ಮೇವು, ಸೊಪ್ಪು ಕೊಟ್ಟು ಸಾಕಬಹುದು. ಮೇಯಲು ಜಾಗವಿಲ್ಲದ ಪಟ್ಟಣಗಳಲ್ಲೂ ಸಾಕಬಹುದು. 12 ರಿಂದ 15 ತಿಂಗಳಲ್ಲಿ ಎರಡು ಬಾರಿ ಮರಿ ಹಾಕುತ್ತವೆ. ಆಡು 20 ರಿಂದ 30 ಕಿ. ಗ್ರಾಂ ತೂಕವಿರುತ್ತದೆ.
ಆಹಾರ ಪದ್ಧತಿ:
ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಗೆ ಅನುಗುಣವಾಗಿ ಆಡುಗಳು ವಿವಿಧ ಬಗೆಯ ಗಿಡಗಂಟೆಗಳನ್ನು ತಿಂದು ತಮ್ಮ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ. ಪ್ರತಿದಿನ ಒಂದು ಆಡಿಗೆ ಕನಿಷ್ಟ 5 ಕಿ.ಗ್ರಾಂ ಹಸಿರು ಮೇವನ್ನು 250 ರಿಂದ 500 ಗ್ರಾಂ ದಾಣಿ ಮಿಶ್ರಣದೊಂದಿಗೆ ಕೊಡಬೇಕು. ಆಡುಗಳನ್ನು ಹಿಂಡಿನಲ್ಲಿ ಸಾಕಿದಾಗ ಮೇಯಿಸುವುದಲ್ಲದೇ, ಧಾಣಿ ಮಿಶ್ರಣ ಮತ್ತು ಹಸಿರುಮೇವನ್ನು ಪೂರೈಸಬೇಕಾಗುತ್ತದೆ. ಆಡುಗಳಿಗೆ ತುಂಬಾ ಇಷ್ಟವಾಗುವ ಮೇವಿನ ಬೆಳೆಗಳೆಂದರೆ ಕರಿಜಾಲಿ, ಬನ್ನಿಮರ, ಬಸವನಪಾದ, ಶಿವನಿ, ವಿಲಾಯತಿ ಹುಣಸೆ, ಚೋಗಚೆ ಮತ್ತು ಅಂಜನ ಹುಲ್ಲು ಅಲ್ಲದೆ ಆಡು ಎಲ್ಲ ತರಹದ ಸೊಪ್ಪು ತಿನ್ನುವ ಏಕೈಕ ಸಾಕು ಪ್ರಾಣಿ. ಈ ಎಲ್ಲ ಕಾರಣಗಳಿಂದಾಗಿಯೇ ಆಡಿನ ಹಾಲು ಉತ್ಕ್ರಷ್ಠವಾಗಿದೆ.