ಕಳೆದ ವಾರವಷ್ಟೇ ಅಡ್ಡಬೈಲ್-ಬೀದಿಗುಡ್ಡೆ ಪರಿಸರದ ನಾಗರಿಕರು ಸಭೆ ನಡೆಸಿ ರಸ್ತೆಯ ಅಭಿವೃದ್ದಿಗಾಗಿ ಹೋರಾಟ ಸಮಿತಿ ರಚಿಸಿಕೊಂಡಿದ್ದರು. ನಂತರ ರಸ್ತೆಯ ತುರ್ತು ದುರಸ್ತಿ ಹಾಗು ಶಾಶ್ವತ ರಸ್ತೆ ಕಾಮಗಾರಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಅಧ್ಯಕ್ಷರು, ಸುಳ್ಯ ಶಾಸಕರು ಮತ್ತು ಕಡಬ ತಹಶೀಲ್ದಾರರಿಗೆ ಅಂಚೆ ಮೂಲಕ ಮನವಿ ಪತ್ರವನ್ನು ರವಾನಿಸಿದ್ದರು. ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹಾಗು ಅಭಿವೃದ್ಧಿ ಅಧಿಕಾರಿಗಳಿಗೆ ಖುದ್ದು ಮನವಿ ಸಲ್ಲಿಸಿದ್ದರು. ಈಗಾಗಲೇ ಜಿಲ್ಲಾಪಂಚಾಯತ್ ನಿಂದ ಮಾಹಿತಿ ಹಕ್ಕು ಮೂಲಕ ಕಳೆದ 20ವರ್ಷಗಳಿಂದ ಈ ರಸ್ತೆಗೆ ಬಿಡುಗಡೆಯಾದ ಅನುದಾನದ ಮಾಹಿತಿಗಾಗಿ ಅರ್ಜಿಯನ್ನೂ ಸಹ ಸಲ್ಲಿಸಿದ್ದಾರೆ. ನಂತರ ಊರಿನ ಎಲ್ಲಾ ಸಂಘಟನೆಗಳ ಬೆಂಬಲವನ್ನು ಕೋರಿದ್ದರು.
ಆ ಪ್ರಕಾರ ಇಂದು(ಆದಿತ್ಯವಾರ) ಮತ್ತೆ ಸಭೆ ಸೇರಿದಾಗ ಊರಿನ ಸಂಘಟನೆಗಳಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್, ಸದಾಸಿದ್ಧಿ ಮಿತ್ರ ಬಳಗ, ಬೀದಿಗುಡ್ಡೆ ಅಂಗಡಿ ಮಾಲಕರ ಸಂಘ ಹಾಗು ಹಿಂದೂ ಜಾಗರಣ ವೇದಿಕೆಯ ಸದಸ್ಯರಿಂದಲೂ ಬೆಂಬಲ ವ್ಯಕ್ತವಾಯಿತು. ಇಂದಿನ ಸಭೆಯಲ್ಲಿ ತುರ್ತಾಗಿ ಶಾಸಕರನ್ನು ಭೇಟಿ ಮಾಡುವ ಬಗ್ಗೆ ಹಾಗು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಗ್ರಾಮದ ರಸ್ತೆಗಳ ಪರಿಸ್ಥಿತಿಯ ಪುರಾವೆಯೊಂದಿಗೆ ಮನವಿ ಸಲ್ಲಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ದರ್ಖಾಸು ವಹಿಸಿದ್ದರು. ಎಲ್ಲಾ ಸಂಘಟನೆಗಳ ಸದಸ್ಯರು ಹಾಗು ಊರವರು ಭಾಗವಹಿಸಿದ್ದರು.