ಕೇಂದ್ರ ಮತ್ತು ರಾಜ್ಯ ಸರಕಾರ ರೈತ ಹಾಗೂ ಕಾರ್ಮಿಕ ಮಸೂದೆಗಳ ತಿದ್ದುಪಡಿ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಸಾನ್ – ಮಜ್ದೂರ್ ಬಚಾವೋ ದಿವಸ್ ಆಚರಣೆ ಪ್ರತಿಭಟನಾ ಕಾರ್ಯಕ್ರಮವಾಗಿ ಗಾಂಧಿ ಜಯಂತಿ ದಿನವಾದ ಅ.2 ರಂದು ಸುಳ್ಯದ ತಾಲೂಕು ಪಂಚಾಯತ್ ಎದುರು ನಡೆಸಿದರು.
ತಾಲೂಕು ಪಂಚಾಯತ್ ಕಟ್ಟಡದ ಮುಖ್ಯ ದ್ವಾರದ ಬಳಿ ಕುಳಿತ ಕಾಂಗ್ರೆಸ್ ನಾಯಕರು ಸರಕಾರಗಳು ಜಾರಿಗೊಳಿಸಿದ ಮಸೂದೆ ವಾಪಸಾತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಬರುವ ಪಕ್ಷವಲ್ಲ.ದೇಶದ ಸ್ವಾತಂತ್ರ್ಯ ಕ್ಕಾಗಿ ಬಂದು ಪಕ್ಷ. ಸುಧಾರಣಾ ನೀತಿಯಿಂದ ತೊಂದರೆ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಭೂಮಿ ಇದ್ದವರಿಗೆ ಹೆಚ್ಚು ಮಾಡಿಕೊಳ್ಳುವ ಅವಕಾಶ ಒಂದೆಡೆಯಾದರೆ ಇದರಿಂದ ಈ ದೇಶದಲ್ಲಿರುವ ಶೇ.86 ಸಣ್ಣ ಭೂ ಹಿಡುವಳಿದಾರರಿಗೆ ತೊಂದರೆಯಾಗಲಿದೆ. ಅವರು ಭೂ ಕಳೆದುಕೊಳ್ಳು ಸ್ಥಿತಿ ಇದೆ. ಮತ್ತೆ ಇನ್ನೊಬ್ಬರ ಜಮೀನಿನಲ್ಲಿ ದುಡಿಯುವ ಸ್ಥಿತಿ ಬರಲಿದೆ. ಇದನ್ನು ನಾವು ಪ್ರತೀ ಮನೆ ಮನೆಗೆ ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಡಾ.ಬಿ.ರಘು ಮಾತನಾಡಿ “ಬಿಜೆಪಿ ಸರಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಹಿಡಿದ ಮೇಲೆ ದಲಿತರಿಗೆ ನ್ಯಾಯ ಸಿಗದ ಸ್ಥಿತಿ ನಿರ್ಮಾಣ ವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯರು ಮಾತನಾಡಿ ಈ ಸರಕಾರಗಳು ಜನ ವಿರೋಧಿ ಕಾನೂನನ್ನು ತರುವ ಮೂಲಕ ಬದುಕುವ ಸ್ವಾತಂತ್ರ್ಯ ವನ್ನೇ ಕಿತ್ತುಕೊಳ್ಳುತ್ತಿದೆ. ಅನ್ಯಾಯದ ವಿರುದ್ಧ ಮಾತನಾಡಿದರೆ ನಮ್ಮನ್ನು ದೇಶ ವಿರೋಧಿಗಳೆಂದು ಬಿಂಬಿಸಲಾಗುತ್ತದೆ ಇದು ವಿಪರ್ಯಾಸ ಎಂದು ಹೇಳಿದರು.
ಮಡಿಕೇರಿ ಕಾಂಗ್ರೆಸ್ ನಾಯಕ ನಂದಕುಮಾರ್ ಮಾತನಾಡಿ ಮೋದಿ ಹಾಗೂ ಯೋಗಿ ಸರಕಾರಗಳು ದೇಶವೇ ತಲೆ ತಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಮಾತನಾಡಿ “ಎ.ಪಿ ಎಂ.ಸಿ.ಗೆ ಇರುವ ಆಧಾಯದ ಬಗ್ಗೆ ಇಲ್ಲಿಯ ಬಿಜೆಪಿ ನಾಯಕರೇ ಹೇಳುತ್ತಿದ್ದು ಕಾಯ್ದೆಯ ಬಗ್ಗೆ ಒಳಗೊಳಗೆ ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಆದರೆ ಇದನ್ನು ಅವರಿಂದ ವಿರೋಧಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ತಿದ್ದುಪಡಿ ಅಮಿತ್ ಶಾ ಮಗನ ಬಿಸಿನೆಸ್ ಗಾಗಿ ಮಾಡಲಾಗಿದೆ ಎಂದು ಹೇಳಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಇದನ್ನು ಬಗೆ ಹರಿಸಲು ಸಾಧ್ಯವಾಗದ ಸರಕಾರಗಳು ವಿದ್ಯಾವಂತರಿಗೆ ಬೆಂಡೆಕಾಯಿ, ತೊಂಡೆಕಾಯಿ ಬೀಜಗಳನ್ನು ಕೊಟ್ಟು ಆತ್ಮ ನಿರ್ಭರ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶರು ಮಾತನಾಡಿ ಈ ದೇಶದಲ್ಲಿ ಜಾರಿಗೊಳಿಸಿದ ಮಸೂದೆ ವಿರುದ್ಧ ಎಲ್ಲರೂ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಪ್ರಮುಖರಾದ ಎಸ್.ಸಂಶುದ್ದೀನ್, ಶ್ರೀಮತಿ ಸುಜಯ ಕೃಷ್ಣಪ್ಪ, ರಾಜರಾಮ ಭಟ್ ಬೆಟ್ಟ, ಜಯರಾಮ ಭಟ್, ಆನಂದ ಬೆಳ್ಳಾರೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಸದಾನಂದ ಮಾವಜಿ, ವಿಜೇಶ್ ಹಿರಿಯಡ್ಕ, ಗಂಗಾಧರ ಮೇನಾಲ, ಶರೀಫ್ ಕಂಠಿ, ದಿನೇಶ್ ಸರಸ್ವತಿಮಹಲ್, ಅನಿಲ್ ರೈ ಬೆಳ್ಳಾರೆ, ಡೇವಿಡ್ ಧೀರಾ ಕ್ರಾಸ್ತ, ರಪೀಕ್ ಪಡು, ಕಂದಸ್ವಾಮಿ, ಓವಿನ್ ಪಿಂಟೋ, ಸುರೇಶ್ ಅಮೈ, ಕೀರ್ತನ್ ಕೊಡಪಾಲ, ರಾಧಾಕೃಷ್ಣ ಪರಿವಾರಕಾನ, ಮೋಹಿತ್ ಹರ್ಲಡ್ಕ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಶಿವಕುಮಾರ್ ಸೋಣಂಗೇರಿ, ಶಶಿಧರ್ ಎಂ ಜೆ ಮತ್ತಿತರರಿದ್ದರು.