ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿ ಜ.29ರಂದು ಸಂಪನ್ನಗೊಂಡಿತು.
ಜಾತ್ರೋತ್ಸವವು ಜ.26ರಂದು ಮೊದಲ್ಗೊಂಡಿದ್ದು, ಬೆಳಿಗ್ಗೆ ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಿತು. ಬಾಳಿಲ ಗ್ರಾಮದ ಮೂರುಕಲ್ಲಡ್ಕದಲ್ಲಿ ಬೆಳಿಗ್ಗೆ ಗಂಟೆ 11 ರಿಂದ ನಾಗತಂಬಿಲ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಜಾತ್ರೋತ್ಸವಕ್ಕೆ ಬಾಳಿಲ ಶ್ರೀ ಮಂಜುನಾಥೇಶ್ವರ ದ್ವಾರದ ಬಳಿಯಿಂದ ಮೂರುಕಲ್ಲಡ್ಕ ಶ್ರೀ ಉಳ್ಳಾಕುಲು ಸ್ಥಾನದವರೆಗೆ ವೈಭವದ ಹಸಿರುವಾಣಿ ಮೆರವಣಿಗೆಯ ಮೂಲಕ ಹಸಿರುವಾಣಿ ಸಮರ್ಪಣೆ ನಡೆಯಿತು. ಜ. 28ರಂದು ಬೆಳಗ್ಗೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಡುವ ಕಾರ್ಯಕ್ರಮ ನೆರವೇರಿತು. ಬಳಿಕ ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಿತು. ಬಳಿಕ ಪರಿವಾರ ದೈವಗಳಾದ ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಿತು. ನಂತರ ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಮೂರುಕಲ್ಲಡ್ಕ ದೈವಸ್ಥಾನದ ಬಳಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ವಿಶ್ರಾಂತ ಅಧ್ಯಾಪಕರಾದ ಸದಾಶಿವ ಭಟ್ ಜೋಗಿಬೆಟ್ಟು ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕಿ ಕು. ಭಾಗೀರಥಿ ಮುರುಳ್ಯ ಭಾಗಿಯಾಗಿದ್ದರು. ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ವಿಶ್ವಸ್ಥರಾದ ಎನ್ ವಿಶ್ವನಾಥ ರೈ ಕಳಂಜಗುತ್ತು, ಶೀನಪ್ಪ ಗೌಡ ತೋಟದಮೂಲೆ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾತ್ರೋತ್ಸವದ ಯಶಸ್ಸಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳನ್ನು, ಮಹನೀಯರನ್ನೂ ಗೌರವಿಸಲಾಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಸದಸ್ಯರಾದ ರಾಮ್ ಪ್ರಸಾದ್ ಕಾಂಚೋಡು ಪ್ರಸ್ತಾವನೆಗೈದು ಸ್ವಾಗತಿಸಿದರು. ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ವಂದಿಸಿದರು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮರ್ಯಾದಾ ಪುರುಷೋತ್ತಮ ಯಕ್ಷಗಾನ ಬಯಲಾಟ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಜ. 29ರಂದು ಬೆಳಿಗ್ಗೆ ತಂಟೆಪ್ಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ಮೂರು ದೈವಗಳ ಕಾಲಾವಧಿ ನೇಮ(ತಿರ್ತನೇಮೊ) ನಡೆಯಿತು. ಬಳಿಕ ಬೂಳ್ಯ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಡಲಾಯಿತು. ಬೆಳ್ಳಾರೆ ಸಮೀಪದ ತಂಬಿನಮಕ್ಕಿಯ ಗೌರಿಹೊಳೆಯ ಸಮೀಪ ಬಲಿ ಸಮರ್ಪಣೆಯಾಗುವುದರೊಂದಿಗೆ ನಾಲ್ಕು ದಿನಗಳ ಅಯ್ಯನಕಟ್ಟೆ ಜಾತ್ರೋತ್ಸವ ಸಂಪನ್ನಗೊಂಡಿತು. ಊರ-ಪರವೂರ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.