ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರದ ತನಕ ನಡೆಯಲಿರುವ ಹಸುರು ಹೊರೆಕಾಣಿಕೆ ಮೆರವಣಿಗೆಯು ವೈಭವದಿಂದ ನಡೆಯಲಿದ್ದು ಕ್ಷೇತ್ರದ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ವಿನಂತಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ತಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ನಡೆಯಲಿರುವ ಹಸುರು ಹೊರೆಕಾಣಿಕೆ ಮೆರವಣಿಗೆಯ ಸಿದ್ಧತೆ ಕುರಿತಂತೆ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೇವಿಯ ಸಾನಿಧ್ಯದಲ್ಲಿ 100 ವರ್ಷಗಳ ಬಳಿಕ ಬ್ರಹ್ಮರಥೋತ್ಸವ ನಡೆಯಲಿದ್ದು, ಭಕ್ತರ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ಇದಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಹಸುರು ಹೊರೆಕಾಣಿಕೆ ಮೆರವಣಿಗೆಯು ಅಪೂರ್ವ ರೀತಿಯಲ್ಲಿ ಇರಬೇಕು ಎನ್ನುವ ನೆಲೆಯಲ್ಲಿ ಧಾರ್ಮಿಕ ಪರಂಪರೆ, ಕಲಾ ತಂಡಗಳ ಜೋಡಣೆಯೊಂದಿಗೆ ಸಂಘಟಿಸಲಾಗಿದ ಎಂದು ಅವರು ಹೇಳಿದರು.
ವಾಹನ ಜಾಥಾ ನಿರ್ವಹಣೆ ವಿಭಾಗದ ರಜನೀಶ್ ಸವಣೂರು ಮಾತನಾಡಿ, ಜ.16 ರಂದು ಮಧ್ಯಾಹ್ನ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಮುಖ್ಯ ರಸ್ತೆ ಮೂಲಕ ಸಾಗಿ ಮಾಸ್ತಿಕಟ್ಟೆಯಿಂದ ಬಂದು ಶ್ರೀ ಕ್ಷೇತ್ರಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ರಾತ್ರಿ 7 ಗಂಟೆಗೆ ಧ್ವಜಾರೋಹಣ ನಡೆಯಲಿರುವ ಕಾರಣ ನಿಗದಿತ ಸಮಯದಲ್ಲಿ ಮೆರವಣಿಗೆ ಪ್ರಾರಂಭಗೊಂಡು 6 ಗಂಟೆ ಒಳಗೆ ಕ್ಷೇತ್ರಕ್ಕೆ ತಲುಪಬೇಕಿದೆ. ಹಾಗಾಗಿ 2.30 ರ ಒಳಗಾಗಿ ಭಕ್ತರು ಹಸಿರು ಹೊರೆಕಾಣಿಕೆ ಮೆರವಣಿಗೆ ಪ್ರಾರಂಭಗೊಳ್ಳುವ ಸ್ಥಳದಲ್ಲಿ ಹಾಜರಿರಬೇಕು ಎಂದರು.
ಇಡೀ ಮೆರವಣಿಗೆಯಲ್ಲಿ ಕಲಾ ವೈಭವ ಮೇಳೈಸಲಿದೆ. ಪ್ರಚಾರ ವಾಹನ, ಪೂರ್ಣ ಕುಂಭದ ಕಲಶ ಹೊತ್ತ ಮಹಿಳೆಯರು, ಅಲಂಕಾರಿಕ ಬಣ್ಣದ ಕೊಡೆಗಳು, ಚೆಂಡೆ, ಅಯೋಧ್ಯೆಯ ರಾಮಮಂದಿರವನ್ನು ಸಾರುವ ಜಾಥಾ ವಾಹನ, ಕುಣಿತ ಭಜನೆ, ಧಾರ್ಮಿಕತೆಯನ್ನು ಸಾರುವ ಮಕ್ಕಳ ವಿವಿಧ ವೇಷಗಳು, ನವದುರ್ಗೆಯರು, ಗೊಂಬೆ ವೇಷ, ಪಿಲಿವೇಷ, ಹಸುರು ಹೊರೆಕಾಣಿಕೆ ಹೊತ್ತ ವಾಹನಗಳು, ಭಕ್ತರು ಪಾಲ್ಗೊಳ್ಳಲಿದ್ದಾರೆ. ಸರಿ ಸುಮಾರು ಮೂರುವರೆ ಕಿ.ಮೀ. ದೂರ ಮೆರವಣಿಗೆ ಸಾಗಿ ಬರಲಿದೆ ಎಂದರು.
ಪೂರ್ಣ ಕುಂಭದ ಸ್ವಾಗತ
250 ಅಧಿಕ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಪಾಲ್ಗೊಳ್ಳಬೇಕು ಅನ್ನುವುದು ನಮ್ಮ ಇರಾದೆ. ಭಾಗವಹಿಸುವವರು ಕಲಶ, ತೆಂಗಿನಕಾಯಿ ಸಹಿತ ಪಾಲ್ಗೊಳ್ಳಬೇಕು. ಮೆರವಣಿಗೆ ಆರಂಭದ ಸಮಯಕ್ಕಿಂತ ಅರ್ಧ ತಾಸಿನ ಮೊದಲು ಸ್ಥಳದಲ್ಲಿ ಉಪಸ್ಥಿತರಿರಬೇಕು ಎಂದು ವಿನಂತಿಸಲಾಯಿತು. ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷೆ ಅನುಸೂಯ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ, ವಿವಿಧ ಸಮಿತಿಯ ಪದಾಧಿಕಾರಿಗಳು, ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಹರ್ಷಿತ್ ಪೆರುವಾಜೆ ವಂದಿಸಿದರು.