ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಇವುಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಅಧ್ಯಕ್ಷರಾದ ಹಿಮಕರ ಅಡ್ತಲೆಯವರಿಗೆ ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಆರಂತೋಡು – ಅಡ್ತಲೆ – ಎಲಿಮಲೆ ಲೋಕೋಪಯೋಗಿ ರಸ್ತೆ ಮತ್ತು ಅಡ್ತಲೆ – ಬೆದ್ರುಪಣೆ ಪಂಚಾಯತ್ ರಸ್ತೆ , ಅರಂತೋಡು ವೈ ಎಮ್ ಕೆ ಬಳಿ ಯಿಂದ ಅಡ್ತಲೆ ತನಕ ಹಾಗೂ ಅಡ್ತಲೆಯಿಂದ ಬೆದ್ರುಪಣೆ ನೆಕ್ಕರೆ ತನಕ ರಕ್ಷಿತಾರಣ್ಯದ ದಟ್ಟ ಕಾಡಿನ ಮದ್ಯೆ ಹಾದು ಹೋಗುತ್ತಿದ್ದು, ಹಲವಾರು ಕಡೆಗಳಲ್ಲಿ ಆನೆ ಹಾಗೂ ಚಿರತೆ ಕಾಣಸಿಗುತ್ತಿದ್ದು ಜನರು ಭಯದಿಂದ ಇರುವಂತೆ ಮಾಡಿದೆ. ರಸ್ತೆಗೆ ಬರುವ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಬೀದಿ ದೀಪ ಅಳವಡಿಸಲು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಇತ್ತೀಚೆಗೆ ರಾತ್ರಿ ಮಾತ್ರವಲ್ಲದೆ ಹಗಲು ಹೊತ್ತಿನಲ್ಲೂ ಸಹ ರಸ್ತೆಯ ಮದ್ಯದಲ್ಲೇ ಆನೆಗಳ ಹಿಂಡು ಕಾಣಿಸಿಕೊಂಡು ವಾಹನ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು, ಊರಿನವರು ಭಯಭೀತರನ್ನಾಗಿಸಿದೆ.
ಇನ್ನೂ ಹೆಚ್ಚಿನ ಕಡೆಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಸುವುದು ಹಾಗೂ ಹಿಂದಿನ ಕಾಲದಲ್ಲಿ ಕಾಡಿನ ಮದ್ಯೆ ಹಲವು ಬಗೆಯ ಸರ್ವ ಋತು ಹಣ್ಣಿನ ಗಿಡಗಳನ್ನು ನೆಡುವ ಹಾಗೂ ಹಣ್ಣಿನ ಬೀಜಗಳನ್ನು ಬಿತ್ತಲು, ಅರಣ್ಯ ಇಲಾಖೆಯ ಸಹಯೋಗದಲ್ಲಿ, ಗ್ರಾಮದ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದಲ್ಲಿ, ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳು, ನಾಡಿಗೆ ಬರುವುದನ್ನು ಕಡಿಮೆ, ಮಾನವ -ಕಾಡು ಪ್ರಾಣಿಗಳ ಸಂಘರ್ಷ ಕಡಿಮೆ ಮಾಡಬಹುದು.
ಈ ಬಗ್ಗೆ ಗ್ರಾಮ ಪಂಚಾಯತ್ ಕೂಡಲೇ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಸಹಯೋಗದೊಂದಿಗೆ ತುರ್ತಾಗಿ ಬೀದಿ ದೀಪ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆ ಮನವಿಯಲ್ಲಿ ತಿಳಿಸಿದೆ.