Ad Widget

ಪೆರುವಾಜೆ : ನೂತನ ಬ್ರಹ್ಮರಥದ ಭೂಮಿ‌ ಸ್ಪರ್ಶ ಕಾರ್ಯಕ್ರಮರಥ ಬೀದಿಯಲ್ಲಿ ಪ್ರಾಯೋಗಿಕ ಸಂಚಾರ : ಭಕ್ತ ವೃಂದ ಪುಳಕ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಸುಮಾರು 100 ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಜ.19 ರಂದು ಐತಿಹಾಸಿಕ ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೂತನ ಬ್ರಹ್ಮರಥದ ಭೂಮಿ ಸ್ಪರ್ಶ ಕಾರ್ಯಕ್ರಮವು ಜ.5 ರಂದು ನೆರವೇರಿತು.

. . . . . . .

ಬೆಳಗ್ಗೆ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪ್ರಧಾನ ಅರ್ಚಕ ಉಪಸ್ಥಿತಿಯಲ್ಲಿ ಮಕರ ಲಗ್ನದಲ್ಲಿ ರಥದ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರ್ ಅವರು ನೂತನ ರಥದ ಭೂ ಸ್ಪರ್ಶದ ಪ್ರಕ್ರಿಯೆಗಳನ್ನು ನೆರವೇರಿಸಿದರು.

ರಥಬೀದಿಯಲ್ಲಿ
ಪ್ರಾಯೋಗಿಕ ಸಂಚಾರ
ರಥದ ಶಿಲ್ಪಿಗಳು, ಅರ್ಚಕ ವೃಂದ, ವ್ಯವಸ್ಥಾಪನ ಸಮಿತಿ, ಕ್ಷೇತ್ರದ ಭಕ್ತವೃಂದದ ಉಪಸ್ಥಿತಿಯಲ್ಲಿ ನೂತನ ರಥ ಪ್ರಾಯೋಗಿಕ ಸಂಚಾರ ರಥ ಬೀದಿಯಲ್ಲಿ ನೆರವೇರಿತು. ನೂರಾರು ಭಕ್ತರು ತೆಂಗಿನ ಕಾಯಿ ಒಡೆದು ರಥದ ಸಂಚಾರಕ್ಕೆ ಚಾಲನೆ ನೀಡಿದರು. ಗಂಟೆ ನಾದ, ದೇವರ ಸ್ಮರಣೆಯೊಂದಿಗೆ ರಥವನ್ನು ಸುಮಾರು 250 ಮೀ.ದೂರದ ತನಕ ಎಳೆದು ಬಳಿಕ ಅಲ್ಲಿಂದ ಪುನಃ ಮೂಲ ಸ್ಥಾನಕ್ಕೆ ತರಲಾಯಿತು. 100 ವರ್ಷಗಳ ಬಳಿಕ ಕ್ಷೇತ್ರದ ರಥಬೀದಿಯಲ್ಲಿ ರಥ ಸಂಚಾರದ ಅಪೂರ್ವ ದೃಶ್ಯವನ್ನು ಭಕ್ತವೃಂದ ಕಣ್ತುಂಬಿಸಿಕೊಂಡಿತ್ತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ರಥದ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರ್, ರಥದ ಕೆತ್ತನೆಗಾರ ಸಂತೋಷ್ ಆಚಾರ್ಯ ಪೆರುವಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ಪಿ.ಜಗನ್ನಾಥ ರೈ, ನಾರಾಯಣ ಕೊಂಡೆಪ್ಪಾಡಿ ಭಾಗ್ಯಲಕ್ಷ್ಮೀ, ಯಶೋಧ ಎ.ಎಸ್., ರಥ ನಿರ್ಮಾಣ ಸಮಿತಿ ಕೋಶಾಧಿಕಾರಿ ಪದ್ಮನಾಭ ಕೆ, ಬೆಳ್ಳಾರೆ ಮಂಡಲ ಮಾಜಿ ಪ್ರಧಾನ ಜಯಸೂರ್ಯ ರೈ ಬೋರಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮಾಜಿ ಸದಸ್ಯ ಬೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಪೆರುವಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಅನುಸೂಯ, ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಬೆಳ್ಳಾರೆ ಲಯನ್ಸ್ ಅಧ್ಯಕ್ಷ ವಿಠಲ ಶೆಟ್ಟಿ ಪೆರುವಾಜೆ, ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ದೇವದಾಸ ಶೆಟ್ಟಿ ದೇವರಮಾರು, ದೇವಾಲಯದ ವ್ಯವಸ್ಥಾಪಕ ವಸಂತ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಜ.16 : ರಥ ಸಮರ್ಪಣೆ
ಜ.19 : ಬ್ರಹ್ಮರಥೋತ್ಸವ
ಜ.15 ರಂದು ಸಂಜೆ ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಧಾರ್ಮಿಕ ವಿ„ ವಿಧಾನಗಳು ನಡೆಯಲಿದೆ. ರಾತ್ರಿ ಉದ್ಭವ ಗಣಪತಿಗೆ ಮೂಡಪ್ಪ ಸೇವೆ, ಉದ್ಭವ ಜಲದುರ್ಗಾದೇವಿಗೆ ದೊಡ್ಡ ರಂಗಪೂಜೆ ನೆರವೇರಲಿದೆ. ಜ.16 ಕ್ಕೆ ಬೆಳಗ್ಗೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ಧಿ ಕಲಶ, ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆ, ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ. ಜ.18 ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜ.19 ರಂದು ರಾತ್ರಿ ಪಲ್ಲಕ್ಕಿ ಉತ್ಸವ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆದು ಬಳಿಕ ಪಿಲಿಭೂತದ ಭಂಡಾರ ಬರಲಿದೆ. ನಂತರ ದೈವ-ದೇವರ ಮುಖಾಮುಖಿ ನಡೆದು ಕ್ಷೇತ್ರದ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!